Advertisement
ಮಟ ಮಟ ಮಧ್ಯಾಹ್ನದ ಬಿಸಿಲಿನ ಕಡು ಬೇಸಿಗೆಯ ದಿನ. ಅಗೋ ಅಲ್ಲಿ ನೋಡಿರಿ. ಹಸಿರಿನೊಡಲಿನ ಹಡ್ಲು ತುಂಬ ಬೆಳೆದು ನಿಂತ ಆಳೆತ್ತರ ದಭೆì ಹುಲ್ಲಿನ ರಾಶಿ ನಡುವೆ ಒಂದೆರಡಲ್ಲ, ಐದು ಗುಡಾರ! ಅಂಥದೇ ಒಂಟಿ ಕರಿಬೆಟ್ಟವೊಂದು ನಮ್ಮ ತೇಣಿಯ ಅರಣ್ಯಾಧಿಕಾರಿ ಮಣಿಕಂಠ ಸಾಹೇಬರನ್ನು ತುಳಿದು ಬಿಟ್ಟಿತ್ತಲ್ಲ. ಮೊನ್ನೆ ಮೊನ್ನೆ ಅದು ನಡೆದುಹೋಯಿತಲ್ಲ; ಅದೇನು ರೋಷವೋ, ಅದೇನು ಹಗೆತನವೋ? ಮಸ್ತಿಯೋ, ಕುಸ್ತಿಯೋ ನಾನರಿಯೆ. ಬನ್ನಿರಿ. ತ್ಯಾಗದೂರಿನಲ್ಲಿ ನಿಧಾನವಾಗಿ ಒಂದು ಸುತ್ತು ಹಾಕುವಿರಂತೆ. ಬರುವುದಕ್ಕೆ ಮುನ್ನ ಒಂದು ಮಾತು ನೆನಪಿಡಿ: ನಿಮ್ಮ ರಭಸದ ವೇಗದ ಕ್ಷಣಗಳನ್ನೆಲ್ಲ ಹೊರಗಿನ ಗೇಟಿನಲ್ಲಿ ಬಿಡಲು ಮರೆಯದಿರಿ. ಮೊಬೈಲ್ ಸಹ ಅಲ್ಲಿ ರಿಂಗಣಿಸದಿರಲಿ.
Related Articles
Advertisement
ಬರೋಬ್ಬರಿ ಹನ್ನೆರಡು ತಾಸಿನ ಪ್ರವಾಸದ ದಿನ ಅದು. ಹುಣಸೂರು ಮೂಲಕ ವೀರನಹೊಸಹಳ್ಳಿಯ ಹೆಬ್ಟಾಗಿಲಿನಲ್ಲಿ ಒಂದು ತಾಸು ಅವಧಿಯ ಚಿತ್ರ ದೇಖಾವೆಯ ತರಗತಿ ಇತ್ತು. ಅಲ್ಲಿಯ ವನ್ಯಜೀವಿ ವಲಯ ಅರಣ್ಯಾಧಿಕಾರಿ ಮಧುಸೂದನ್‌ಗೆ ಜೀವಿಗಳ ಮತ್ತು ಕಾಡಿನ ಬಗ್ಗೆ ಇರುವ ಅನನ್ಯ ಪ್ರೀತಿ, ಕಾಳಜಿ ಕೆಲವೇ ಕ್ಷಣಗಳಲ್ಲಿ ಎಲ್ಲರ ಅರಿವಿಗೆ ಬಂತು. ಅನಂತರ ಅರ್ಧ ಸೆಂಚುರಿ ಮಂದಿಯ ತಂಡದ ನಮ್ಮ ಮಂದಗತಿಯ ಚಾರಣ ಆರಂಭ. ಅಲ್ಲಲ್ಲಿ ಸಫಾರಿ ವಾಹನ. ಉಳಿದಂತೆ ರಿಂಗ್ ರಸ್ತೆ ಉದ್ದಕ್ಕೆ ಬರಿಗಾಲ ನಡಿಗೆ. ಹಾಂ. ಗಾಬರಿಯಾಗದಿರಿ. ಕಾಡಿನ ಅಂಚುಗಳಲ್ಲಿ ಗಸ್ತು ತಿರುಗಲು ಪ್ರಾಣಿಗಳು ಅತ್ತಿತ್ತ ಗ್ರಾಮಗಳಿಗೆ ಚದುರದಂತೆ ಕಾವಲು ಕಾಯಲು ನಿರ್ಮಾಣವಾದ ಕಚ್ಚಾ ಮಣ್ಣು ರಸ್ತೆ ಅದು. ಗೇಮ್ ರೂಟ್. ಅದರ ಉದ್ದಕ್ಕೂ ಆನೆಗಳ ಗ್ರಾಮ ಪ್ರವೇಶ ನಿರ್ಬಂಧಕ್ಕೆ ರೈಲು ಹಳಿಯ ತಡೆ ಬೇಲಿ ಇದೆ. ಅದರ ನಿರ್ಮಾಣದ ಹಿಂದಿನ ಕತೆ, ವಿವರಗಳನ್ನು ಮಧುಸೂದನ್ ವಿವರಿಸುತ್ತಾ ಸಾಗಿದರು. ಅಲ್ಲಲ್ಲಿ ಕಾಣುವ ಅತಿ ಎತ್ತರದ ಕಾವಲು ಗೋಪುರದ ಉದ್ದೇಶ ತಿಳಿದೆವು. ಕಳ್ಳ ಬೇಟೆ ತಡೆಯಲು ಹಗಲು ರಾತ್ರಿಯೆನ್ನದೆ ಕಾವಲು ಕಾಯುವ ಶಿಬಿರಗಳ ಉದ್ದೇಶ ಅರಿತೆವು.
ಬೇಸಿಗೆಯ ದಿನಗಳ ಬಾಯಾರಿಕೆ ನೀಗಲು ಜಲಮೂಲಗಳ ಅಗತ್ಯವಿದೆ. ಅಂತಹ ಜಲಮೂಲಗಳ ಪುನರುಜ್ಜೀವನಕ್ಕೆ ಅರಣ್ಯ ಇಲಾಖೆ ಅಂತಿಂಥ ಶ್ರಮ ಪಡುತ್ತಿಲ್ಲ. ಹಿಂದೆ ವರ್ಷವಿಡೀ ನೀರಾಸರೆಯ ಕೆರೆಗಳು ತುಂಬಿರುತ್ತಿದ್ದವು. ಕಾರಣಾಂತರಗಳಿಂದ ಇದೀಗ ಒಳ ಹರಿವು ಕಡಿಮೆಯಾಗಿದೆ. ಫೆಬ್ರವರಿಗೇ ನೀರು ಬತ್ತಿ ಕೆರೆ ಖಾಲಿ. ಹಾಗಾಗಿ ಬೋರ್, ಬಾವಿ ಕೊರೆದು ಸೌರ ಶಕ್ತಿಯ ಪಂಪ್ ಅಳವಡಿಸಿ ಇಲಾಖೆ ಕೆರೆಗಳ ಕಾಯಕಲ್ಪ ಕೈಗೊಂಡಿದೆ. ಎಲ್ಲವೂ ಕಣ್ಣ ಮುಂದೆ ಅನಾವರಣಗೊಂಡಿತು. ನಿಮಿಷಾರ್ಧದಲ್ಲಿ ನೂರು ಲೀಟರ್ ನೀರೆತ್ತುವ ಸೌರಶಕ್ತಿಯ ಸುದ್ದಿ ತಿಳಿದು ದಂಗಾದೆವು. ಕೆರೆಯ ನೀರು ಕುಡಿಯಲು ಬಂದಿದ್ದ ಎರಡು ಆನೆಗಳ ಪ್ರಥಮ ದರ್ಶನ ನಮಗೆ ದಿನದ ಶುಭಾರಂಭ. ದೂರದಿಂದಲೇ ನಮ್ಮ ದೊಡ್ಡ ಗುಂಪು ಕಂಡು ಅವು ಬೇರೆ ದಾರಿ ಹಿಡಿದವು. ಅಲ್ಲಿದ್ದ ಕೆರೆಯಲ್ಲಿ ಕಂಡದ್ದು ಅದ್ಭುತ ಸಸ್ಯವೈವಿಧ್ಯ ರಾಶಿ. ಅಷ್ಟೇ ಅಲ್ಲ, ತುಂಬಿ ತುಳುಕುತ್ತಿದ್ದ ಆ ಸಲಿಲದ ಸವಿಗೆ ಬಾರದ ಪ್ರಾಣಿ ಸಂಕುಲವಿಲ್ಲವಂತೆ. ರಾತ್ರಿ ವೇಳೆ ಬಂದ ಪಟ್ಟೆ ಹುಲಿಯ ಆನಂದದ ಕ್ಷಣಗಳನ್ನು ಅವಿತಿಟ್ಟ ಕ್ಯಾಮೆರಾ ಕಣ್ಣು ಚಿತ್ರಿಸಿದೆ.
ಒಂದೊಂದು ಕೆರೆಯ ಸುತ್ತ ಬೆಳೆದ ಮರ ಗಿಡಗಳನ್ನು ಹೆಸರಿಸುತ್ತಾ ಹೋದೆ. ದೊಡ್ಡ ಇಪ್ಪೆ, ಕೋಲಾರ ಸಾಂಭಾರ, ಊದಿ, ಗೊದ್ದ, ಡೊಳ್ಳೆ, ಮದ್ದಿ, ಮಡ್ಡಿ, ಜಾಲರಿ, ಉಲುವೆ, ಕಡಗ, ಕೊಂದೆ, ಬೆಟ್ಟ ಹೊನ್ನೆ, ಹೆತ್ತೇಗ… ಹೀಗೆ ಮರಗಳ ಪಟ್ಟಿ ಬೆಳೆಯುತ್ತಲೇ ಹೋಯಿತು. ಕಿವಿಯೋಲೆಯಂಥ ಸುಂದರ ಕಾಯಿ ಹೊತ್ತ ಭಾರೀ ಗಟ್ಟಿ ಮರ ದಿಂಡಲು. ಅದು ವೇದ ಕಾಲದ ರಥದ್ರುಮ ಧವ! ದಿಂಡಲು ಮರದ ಭಾರಿ ತೋಪು ವೀರನಹೊಸಹಳ್ಳಿಯ ಕಾಡಿನ ಹೆಗ್ಗುರುತು. ಅಷ್ಟು ಹೊತ್ತಿಗೆ ನಡು ಮಧ್ಯಾಹ್ನದ ವೇಳೆ. ಊಟದ ಸಲುವಾಗಿ ಕಿರು ವಿರಾಮ. ಅನಂತರ ಮತ್ತೆ ಕಂಡದ್ದು ತ್ಯಾಗದ ತೋಪಿನ ನಾಗರಹೊಳೆಯ ದಿವ್ಯದರುಶನ ಭಾಗ್ಯ!
ಹಾವೇರಿಯ ಅರ್ಪಿತಾ ಚಕ್ರಸಾಲಿ, ಬಾಗಲಕೋಟೆಯ ಐಶ್ವರ್ಯ ಗೌಡರ್, ಬೆಳಗಾವಿಯ ನರೇಂದ್ರನಾಥ್ ಕದಂ, ಉತ್ತರಕನ್ನಡದ ನಾಯಕ್… ಹೀಗೆ ಅರಣ್ಯ ಕಾಯುವ ಉಪವಲಯ ಅಧಿಕಾರಿ ತರಬೇತಿಗೆ ಬಂದವರು ರಾಜ್ಯದ ಎಲ್ಲ ಜಿಲ್ಲೆಯ ಪ್ರತಿನಿಧಿಗಳಾಗಿಬಿಟ್ಟಿದ್ದರು. ಐಶ್ವರ್ಯಾ ಬಾಯಿ ತೆಗೆದು “ಅಬ್ಬಬ್ಟಾ, ಅಲ್ಲಿ ನೋಡಿ ಸಾರ್, ಚಿನ್ನದ ಹೂಗಳ ರಾಶಿ ರಾಶಿ ಹೊತ್ತು ನಿಂತ ಮರದ ಸೊಬಗು’ ಅಂದರು. ಹೌದು ಅದು ನಿಜ. ಇಡೀ ಕಾಡಿನ ನಡುವೆ ಇತ್ತು ಅಂತಹ ಅತಿ ರಮ್ಯ ಚಿನ್ನದ ಮರ ತೇರುಗಳು! ಆಂಗ್ಲ ಭಾಷೆಯ ಗೋಲ್ಡನ್ ಶವರ್ ಅಂದರೆ ಚಿನ್ನದ ಮಳೆಯ ಹೆಸರಿನ ಕಕ್ಕೆ ಮರ ಸಾಲುಗಳು! ಕಕ್ಕೆಯ ಸುವರ್ಣ ರಥದ ವಸಂತ ಋತು ಸಿಂಗಾರ ಕಂಡು ನಾವೆಲ್ಲ ಧನ್ಯರಾದೆವು. ಕಾಡುಹಂದಿಗಳ ದೊಡ್ಡ ಹಿಂಡು, ಎರಡು ಬಗೆಯ ಕಪಿ ಹಿಂಡು, ಕಾಡೆಮ್ಮೆಗಳ, ಕಡವೆ, ಹರಿಣಗಳ ಸಂಚಲನ, ಕೆಂದಳಿಲು, ಉಡ, ಆಮೆಗಳ ದರ್ಶನದಿಂದ ಪುನೀತರಾದೆವು.
ಒಂಟಿ ಸಲಗದ ನೀರಾಟದ ಸಂಭ್ರಮ ಅದರ ಸುತ್ತ ಅಡ್ಡಾಡುತ್ತಾ ಮಜಾ ತೆಗೆದುಕೊಳ್ಳುತ್ತಿದ್ದ ನೀರುಕೋಳಿ, ಬಾನಾಡಿಗಳ ವೈವಿಧ್ಯ, ಚಿಟ್ಟೆ ಜೇನ್ನೊಣಗಳ ಝೇಂಕಾರದಿಂದ ನಮ್ಮ ಸಫಾರಿಯ ಸಫರ್(ಪ್ರವಾಸ) ಫಲದಾಯಕವಾಗಿತ್ತು. ನಗರದಿಂದ ಅಷ್ಟು ದೂರ ಇದ್ದು ಕಾಡಿನ ಹಣ್ಣು ನಗಾರಿಯ ಸಾಲು ಸಾಲು ಸಸಿಗಳನ್ನು ಹೊಸ ಪೀಳಿಗೆಗೆ ಪರಿಚಯಿಸಿದ ಧನ್ಯತಾಭಾವ ನನ್ನಲ್ಲಿ ಮನೆ ಮಾಡಿತ್ತು.
– ಡಾ. ಸತ್ಯನಾರಾಯಣ ಭಟ್ ಪಿ.