Advertisement
ಸಾಮಾನ್ಯವಾಗಿ ಪ್ರತಿವರ್ಷ ಡಿಸೆಂಬರ್ ಅಂತ್ಯದೊಳಗೆ ಫೈರ್‌ಲೈನ್ ಕಾರ್ಯ ಮುಗಿಯುತ್ತಿತ್ತು. ನಾಗರಹೊಳೆ ಉದ್ಯಾನವನವು ಹುಣಸೂರು, ವಿರಾಜಪೇಟೆ, ಎಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿದ್ದು, ಈಗಾಗಲೇ ಉದ್ಯಾನವನದ ವೀರನಹೊಸಹಳ್ಳಿ, ಮತ್ತಿಗೋಡು, ನಾಗರಹೊಳೆ, ಕಲ್ಲಳ್ಳ, ಅಂತರಸಂತೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ, ಹುಣಸೂರು ಸೇರಿದಂತೆ ಎಂಟು ವಲಯಗಳಲ್ಲಿ 2,537 ಕಿ.ಮೀ.ಯಷ್ಟು ಫೈರ್‌ಲೈನ್ ನಿರ್ಮಿಸಬೇಕಿದ್ದು, ಈಗಾಗಲೇ ಬೆಂಕಿರೇಖೆ ನಿರ್ಮಿಸುವ ಸಲುವಾಗಿ ಗಿಡಗಳನ್ನು ತೆರವುಗೊಳಿಸಲಾಗಿದೆ. ಆದರೆ ಈ ಬಾರಿ ಅಕಾಲಿಕ ಮಳೆಯಾಗಿದ್ದರಿಂದ ಇನ್ನೂ ಭೂಮಿ ತೇವವಿದ್ದು, ಅಲ್ಲಲ್ಲಿ ಹಸಿರಿರುವುದರಿಂದ ಲೈನ್‌ಸುಡಲು ಸಾಧ್ಯವಾಗಿಲ್ಲ. ಇನ್ನು 6-8 ದಿನಗಳ ಕಾಲ ಬಿಸಿಲು ಬಂದಲ್ಲಿ ಮಾತ್ರ ಜನವರಿ ಮಧ್ಯದಲ್ಲಿ ಫೈರ್ ಲೈನ್ ಮುಗಿಯಬಹುದಾದರೂ ಮುನ್ನೆಚ್ಚರಿಕೆವಹಿಸ ಲಾಗಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.
Related Articles
Advertisement
ಡ್ರೋಣ್-ಕ್ಯಾಮೆರಾ ಕಣ್ಗಾವಲು: ಉದ್ಯಾನದ ಹಲವೆಡೆ ಇರುವ ದೊಡ್ಡದಾದ 31 ವಾಚ್‌ಟವರ್ ಮೂಲಕ ಹಾಗೂ ಉದ್ಯಾನದಂಚಿನ ಪ್ರದೇಶದ ಅಲ್ಲಲ್ಲಿ ಮರದ ಮೇಲೆ ಅಟ್ಟಣೆ ನಿರ್ಮಿಸಲಾಗಿದೆ. 24/7 ಮಾದರಿಯಲ್ಲಿ ಹಗಲು-ರಾತ್ರಿವೇಳೆ ಕಣ್ಗಾವಲಿಡಲಾಗು ವುದು. ಛಾಯಾಚಿತ್ರ ತೆಗೆಯುವ ಡ್ರೋಣ್‌ಕ್ಯಾಮೆರಾ ಹಾಗೂ ಅರಣ್ಯದಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಒಳನುಸುಳುವವರ ಪತ್ತೆಗಾಗಿ ಮರಗಳಲ್ಲಿ ಕ್ಯಾಮೆರಾ ಅಳವಡಿಸಲಾಗುವುದು.
ಜೀಪ್ ಮೌಂಟೆಡ್ ಟ್ಯಾಂಕರ್: ಬೆಂಕಿ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆಯಾಗಿ ಪ್ರತಿ ವಲಯಕ್ಕೆ ಒಂದರಂತೆ ಜೀಪ್ ಮೌಂಟೆಡ್‌ಟ್ಯಾಂಕರ್ (ಮಿನಿವಾಟರ್ ಟ್ಯಾಂಕ್) ಇದೆ. 80 ಸ್ಪೈಯರ್, 15 ಪವರ್ ಕಟ್ಟಿಂಗ್ ಯಂತ್ರ, 11 ಬ್ಲೋಯರ್‌ಗಳು ಹಾಗೂ ತಲಾ 1 ಅಗ್ನಿಶಾಮಕದಳದ ವಾಹನ ಮತ್ತು ಕ್ಯೂ.ಆರ್.ಟಿ.ವಾಹನಗಳನ್ನು ಸನ್ನದ್ಧವಾಗಿಡಲಾಗುವುದು. ಕೆಲ ಎನ್‌ಜಿಒಗಳು ಸಹ ಉಚಿತವಾಗಿ ವಾಹನ ನೀಡಲು ಮುಂದೆ ಬಂದಿದ್ದಾರೆ. ಬಾಡಿಗೆ ವಾಹನಗಳನ್ನು ಸಹ ನಿಯೋಜಿಸಲಾಗುವುದು. ಡಿ.17 ಮತ್ತು 19ರಂದು ಸಿಬ್ಬಂದಿಗೆ ಬೆಂಕಿ ತಡೆ ಕುರಿತ ತರಬೇತಿ ನೀಡಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಎಸ್‌ಡಿಆರ್‌ಎಫ್ ಹಾಗೂ ಹೆಲಿಕಾಪ್ಟರ್‌ಗೂ ಮನವಿ ಸಲ್ಲಿಸಲಾಗಿದೆ.
ಅರಣ್ಯದಂಚಿನ ಗ್ರಾಮಸ್ಥರಿಗೆ ಅರಿವು : ಜೀವವೈವಿಧ್ಯತೆಯ ಈ ಉದ್ಯಾನವನವನ್ನು ಸಂರಕ್ಷಿಸುವ ಅಗತ್ಯತೆಯನ್ನು ತಿಳಿಸಿ ಕೊಡಲು ಉದ್ಯಾನದಂಚಿನ ಗ್ರಾಮಗಳಲ್ಲಿ ಜಾಗೃತಿ ಜಾಥಾ, ಬೀದಿನಾಟಕ, ನಾಗರಹೊಳೆ ಜೀವ ವೈವಿಧ್ಯತೆ ಅದರ ಅಗತ್ಯತೆ ಹಾಗೂ ಬೆಂಕಿಯಿಂದ ಅರಣ್ಯ ರಕ್ಷಣೆ ಕುರಿತಾಗಿ ಕೊರೊನಾ ಸಂದರ್ಭದಲ್ಲಿ ತಯಾರಿಸಿರುವ ಡಾಕ್ಯುಮೆಂಟರಿ ಚಿತ್ರಪ್ರದರ್ಶನ ಅಲ್ಲದೆ ಈ ಬಾರಿ ವಿಶೇಷವಾಗಿ ಕಾಡಂಚಿನ ಗ್ರಾಮಗಳಲ್ಲಿ ಬೆಂಕಿಯಿಂದ ಅರಣ್ಯರಕ್ಷಣೆಯ ಮಾಹಿತಿಯುಳ್ಳ 2 ಸಾವಿರ ಕ್ಯಾಲೆಂಡರ್ ವಿತರಣೆಗೆ ಕ್ರಮವಹಿಸಲಾಗಿದೆ. ಜೆಎಲ್‌ಆರ್ ಸಿಬ್ಬಂದಿ, ಸ್ವಯಂ ಸೇವಕರನ್ನು ಸಹ ಬಳಸಿಕೊಳ್ಳಲಾಗುವುದು. ಕಾಡಂಚಿನ ಅದಿವಾಸಿಗಳಿಗೆ ಆಟೋಟ ಸ್ಪರ್ಧೆಯನ್ನು ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು.
ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ತಡೆಗೆ ಸಿಬ್ಬಂದಿ ಸರ್ವ ಸನ್ನದ್ಧರಾಗಿದ್ದಾರೆ. ಅಗತ್ಯಬಿದ್ದಲ್ಲಿ ಎಸ್ ಡಿಆರ್‌ಎಫ್ ತಂಡ ಹಾಗೂ ಹೆಲಿಕಾಪ್ಟರ್ ಬಳಕೆಗೂ ಮನವಿ ಮಾಡಲಾಗಿದೆ. ಕಿಗ್ಸ್‌ಕಾರ್‌ಸಾಕ್ ಆಪ್ (ಅಪ್ಲಿಕೇಷನ್) ಮೂಲಕ ಬೆಂಕಿ ಬೀಳುವ ಪ್ರದೇಶದ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ಪಡೆದು ಸಿಬ್ಬಂದಿ ತ್ವರಿತಗತಿಯಲ್ಲಿ ಘಟನಾ ಸ್ಥಳಕ್ಕೆ ತೆರಳುವ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಪರಿಸರ ಕಾಳಜಿಯ ಕೆಲ ಸ್ವಯಂಸೇವಾ ಸಂಸ್ಥೆಗಳು ನೆರವಿಗೆ ಮುಂದೆ ಬಂದಿವೆ. ಬೆಂಕಿಯಿಂದ ಅರಣ್ಯ ಸಂರಕ್ಷಣೆಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. -ಹರ್ಷಕುಮಾರ್ ಚಿಕ್ಕನರಗುಂದ, ಹುಲಿಯೋಜನೆ ನಿರ್ದೇಶಕ(ಮುಖ್ಯಸ್ಥ) ನಾಗರಹೊಳೆ.
– ಸಂಪತ್‌ಕುಮಾರ್ ಹುಣಸೂರು