Advertisement

ನಾಗರಹೊಳೆಯಲ್ಲಿ ಫೆ.12ರವರೆಗೆ ಪಕ್ಷಿಗಳ ಸಮೀಕ್ಷೆ

12:26 PM Feb 11, 2023 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಅತ್ತ ತಮಿಳುನಾಡಿನ ಮಧುಮಲೈ ಇತ್ತ ಕೇರಳದ ವೈನಾಡು ಅರಣ್ಯದ ಮದ್ಯೆ ಸಮತೋಲನ ಕಾಯ್ದುಕೊಳ್ಳುವ ಹರಿಧ್ವರ್ಣದ ಕಾನನವಾಗಿದ್ದು, ವನ್ಯಪ್ರಾಣಿ, ಸಸ್ಯ ಪ್ರಭೇಧಗಳು ಜೊತೆಗೆ ಅಪರೂಪದ ಸಸ್ಯ ಪ್ರಬೇಧಗಳನ್ನು ಕಾಪಾಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಿ.ಎಫ್) ಸಿ.ಎನ್.ಎನ್.ಮೂರ್ತಿ ತಿಳಿಸಿದರು.

Advertisement

ನಾಗರಹೊಳೆ ಹೆಬ್ಬಾಗಿಲು ವೀರನ ಹೊಸಹಳ್ಳಿ ವಲಯ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪಕ್ಷಿಗಳ ಸಮೀಕ್ಷೆಗೆ ಚಾಲನೆ ನೀಡಿ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿ ಮಾತನಾಡಿದ ಅವರು ಫೆ.12ರವರೆಗೆ ನಾಗರಹೊಳೆ ಉದ್ಯಾನದ ಎಲ್ಲ 8 ವಲಯಗಳಲ್ಲೂ ಏಕಕಾಲಕ್ಕೆ ಪಕ್ಷಿಗಳ ಸಮೀಕ್ಷೆ ನಡೆಯಲಿದೆ ಎಂದರು.

ವಿಶ್ವದಲ್ಲೇ ಹೆಸರುವಾಸಿಯಾಗಿರುವ ಪ್ರವಾಸಿ ತಾಣಗಳಲ್ಲೊಂದಾಗಿರುವ ನಾಗರಹೊಳೆ ಉದ್ಯಾನವನದಲ್ಲಿ ಹುಲಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅರಣ್ಯದಲ್ಲಿ ಸಮತೋಲನ ಕಾಪಾಡಿಕೊಂಡಿರುವುದರಿಂದ  ಹುಲಿಯೊಂದಿಗೆ ಆನೆ ಮತ್ತಿತರ ಸಸ್ಯಹಾರಿ ಪ್ರಾಣಿಗಳು, ಸಸ್ಯಪ್ರಭೇಧದ ಮತ್ತು ಅಪರೂಪಗಳಲ್ಲಿ ಅಪರೂಪವಾದ ವಿವಿಧ ಪ್ರಭೇಧದ ಪಕ್ಷಿ ಸಂಕುಲಗಳು ಇಲ್ಲಿವೆ ಎಂದು ಹೇಳಿದರು.

ಇಷ್ಟೆ ಅಲ್ಲದೆ ಹರಿಧ್ವರ್ಣದ ಅರಣ್ಯಗಳ್ಲೊಂದಾಗಿರುವ ಈ ಅರಣ್ಯದಲ್ಲಿ ಹಲವು ಔಷಧಗುಣಗಳುಳ್ಳ ಸಸ್ಯ ಪ್ರಬೇಧಗಳು ಇಲ್ಲಿವೆ. ಒಟ್ಟಾರೆ ಈ ಎಲ್ಲವನ್ನೂ ಜತನದಿಂದ ಕಾಪಾಡುವ ಹೊಣೆಗಾರಿಕೆ ಮನುಷ್ಯರಾದ ನಮ್ಮ ಮೇಲಿದೆ ಎಂದರು.

Advertisement

 

ನಿಯಮ ಪಾಲಿಸಿ: ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಮಾತನಾಡಿ, ಸ್ವಯಂಸೇವಕರು ಪಕ್ಷಿ ವೀಕ್ಷಣೆ ಹಾಗೂ ದಾಖಲೆ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಲಾಖೆ ಸಿಬ್ಬಂದಿಗಳು ಹೇಳುವ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಮೂರು ದಿನಕಾಲ ಸಾಮಾಜಿಕ ಜಾಲತಾಣ, ವ್ಯಾಟ್ಸಪ್‌ನಿಂದ ದೂರುವಿರುವುದೇ ಒಳಿತು. ಸಮೀಕ್ಷೆವೇಳೆ ಸಿಗುವ ವನ್ಯಪ್ರಾಣಿಗಳ ಪೋಟೋ ತೆಗೆಯದಂತೆ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡದಂತೆ ಸೂಚಿಸಿದರು.

ಅಂತರಾಷ್ಟ್ರೀಯ ಪಕ್ಷಿತಜ್ಞ ಮಹಾರಾಷ್ಟದ ಸ್ವರಾಜ್ ಅಮ್ಟೆ ಪಕ್ಷಿ ಸಮೀಕ್ಷೆ ನಡೆಸುವ ಮತ್ತು ಪಕ್ಷಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಸಮೀಕ್ಷೆಗೆ 118 ಮಂದಿ: ಸಮೀಕ್ಷೆಗಾಗಿ ಹೊರ ರಾಜ್ಯಗಳಿಂದ 45 ಮಂದಿ ಸೇರಿದಂತೆ ಒಟ್ಟು 118 ಮಂದಿ ನೊಂದಾಯಿಸಿಕೊಂಡಿದ್ದು, ಉದ್ಯಾನದ 8 ವಲಯಗಳಲ್ಲಿ ತಂಡಗಳಾಗಿ ರಚಿಸಲಾಗಿದ್ದು, ಎಲ್ಲರಿಗೂ ವಸತಿ-ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಆಯಾ ತಾಣಗಳಲ್ಲೇ ಸಮೀಕ್ಷೆ ನಡೆಸಲು ಸಿಬ್ಬಂದಿಗಳೊಂದಿಗೆ ನೆರವಾಗಬೇಕೆಂದು ಎಸಿಎಫ್ ದಯಾನಂದ್ ಸೂಚಿಸಿದರು.

ಕಾರ್ಯಕ್ರಮದಲ್ಲಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ನವೀನ್ ಬೋಪಣ್ಣ, ಎಸಿಎಫ್‌ಗಳಾದ ಗೋಪಾಲ್, ದಯಾನಂದ್, ಆರ್.ಎಫ್.ಓ.ಗಳಾದ ನವೀನ್ ಪಟಗಾರ್, ರತನ್, ಸಿದ್ದರಾಜು,  ಹರ್ಷಿತಾ, ನ್ಯಾಚುರಲಿಸ್ಟ್ ಗೋಪಿ,  ಡಿ.ಆರ್.ಎಫ್.ಓಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next