Advertisement

Nagara Panchami: ಇಷ್ಟಾರ್ಥಗಳನ್ನು ಸಿದ್ಧಿಸುವ ನಾಗರ ಪಂಚಮಿ

11:46 PM Aug 20, 2023 | Team Udayavani |

ನಮ್ಮ ಭಾರತ ದೇಶದ ಮಹತ್ವವೇ ಅದ್ಭುತ. ಇಲ್ಲಿನ ಬಹುತೇಕ ಆಚರಣೆಗಳು ಪ್ರಕೃತಿಯ ಆರಾಧನೆ ಜತೆಗೆ ಇರುತ್ತವೆ. ಇವುಗಳಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯೂ ಒಂದು. ನಮ್ಮ ಸನಾತನ ಧರ್ಮದಲ್ಲಿ ಹಾಗೂ ಧಾರ್ಮಿಕ ಸಂಪ್ರದಾಯಗಳಲ್ಲಿ ದೇವರನ್ನು ಸಮಗ್ರ ರೂಪದಲ್ಲಿ ಕಾಣುವ ಸಂಪ್ರದಾಯವಿದೆ. ಈ ಕಾರಣಕ್ಕಾಗಿ ನಾವು ದೇವರನ್ನು ಪ್ರತಿಯೊಂದು ವಸ್ತುವಿನಲ್ಲಿ ಗಿಡ-ಮರ, ಜೀವಿಗಳಲ್ಲಿ ಕಾಣುತ್ತೇವೆ ಮತ್ತು ಅವುಗಳನ್ನು ಪೂಜಿಸುತ್ತೇವೆ. ಅಲ್ಲದೇ ಗಿಡ-ಮರಗಳನ್ನು ಪ್ರಾಣಿ-ಪಕ್ಷಿಗಳನ್ನು ವಿಶೇಷ ಸಂದರ್ಭಗಳಲ್ಲಿ ಪೂಜಿಸುವುದುಂಟು. ಇವೆಲ್ಲವುಗಳು ನಾಗರ ಪಂಚಮಿಯೇ ಆಗಿದೆ. ಈ ಹಬ್ಬದಲ್ಲಿ ಸರ್ಪಗಳನ್ನು ದೇವರ ರೂಪವೆಂದು ಪೂಜಿಸಲಾಗುತ್ತದೆ.
ಶ್ರಾವಣ ಮಾಸದ ಶುದ್ಧ ಪಂಚಮಿ ದಿವಸ ಕರ್ಕಾಟಕ ಮಾಸದ ಪಂಚಮಿ.

Advertisement

ಈ ಸಲ ಅಧಿಕ ಮಾಸದಲ್ಲಿ ಬಂದ ಕಾರಣ ಸಿಂಹ ಮಾಸ ನಿಜ ಶ್ರಾವಣ ಪಂಚಮಿ ದಿವಸ ಸೋಮವಾರ ( ಆಗಸ್ಟ್‌ 21) ನಾಗರ ಪಂಚಮಿ ಆಚರಿಸಲಾಗುತ್ತಿದೆ. ಅಂದು ಆದಿವಾಸ ನಾಗನಿಗೆ ಹಾಲೆರೆದು ಹರಳು ಕಾಯಿ, ವೀಳ್ಯದೆಲೆ ಬೆಲ್ಲ ಬಾಳೆಹಣ್ಣು ನೈವೇದ್ಯ ಮಾಡಿ ಮಂಗಳಾರತಿ ಮಾಡಿ ಪ್ರಸಾದ ತೆಗೆದುಕೊಂಡಲ್ಲಿ ಸಾಮಾನ್ಯವಾಗಿ ಸರ್ಪದೋಷವೆಲ್ಲ ನಿವಾರಣೆ ಆಗುತ್ತದೆ ಎನ್ನುವ ನಂಬಿಕೆಯಿಂದ ಈ ಪುಣ್ಯ ಕಾರ್ಯ ನೆರವೇರಿಸಲಾಗುತ್ತಿದೆ. ಇದು ವರ್ಷದಲ್ಲಿ ಒಂದು ದಿವಸ. ಆದರೆ ಬೇರೆ ದಿವಸ ಮಾಡಬಹುದು. ನಾಗನಿಗೆ ಪಂಚಮಿ ವಿಶೇಷ ಅಂದರೆ ಒಂದೊಂದು ದೇವತೆಗಳಿಗೆ ಒಂದೊಂದು ತಿಥಿ ಇರುತ್ತದೆ. ನಾಗನಿಗೆ ಶುದ್ಧ ಪಂಚಮಿ ಅಂದರೆ ಕರ್ಕಾಟಕ ಶುದ್ಧ ಪಂಚಮಿ ವಿಶೇಷ. ಹಾಗಾಗಿ ಈ ದಿನ ಭೂಮಿ ಮೇಲೆ ನಾಗರ ಪಂಚಮಿ ಆಚರಿಸಲ್ಪಡುತ್ತದೆ.

ನಮ್ಮ ಭೂಮಿಯಲ್ಲಿ ಹಾವುಗಳ ಪರಂಪರೆ ಕುರಿತು ಪುರಾಣಗಳಲ್ಲಿ ಉಲ್ಲೇಖಗಳಿವೆ. ಈ ಹಿನ್ನೆಲೆಯಲ್ಲಿ ಬಂದ ಅನೇಕ ಆಚರಣೆಗಳು ಇಂದು ಜಾರಿಯಲ್ಲಿವೆ. ನಾಗ ಫ‌ಲವನ್ನು ನೀಡುವ ದೇವರು ಎಂಬುದು ಪೂರ್ವದಿಂದಲೂ ನಡೆದುಕೊಂಡು ಬಂದ ನಂಬಿಕೆ. ಸಂತಾನ ಪ್ರಾಪ್ತಿಗಾಗಿ ನಾಗರಾಧನೆ ನಮ್ಮಲ್ಲಿ ಬಹಳಷ್ಟು ಜನಪ್ರಿಯ. ಭೂಮಿಯನ್ನು ಆದಿಶೇಷ ತನ್ನ ಹೆಡೆಯಲ್ಲಿ ಇರಿಸಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ಅದಕ್ಕೆ ತಕ್ಕಂತೆ ನಮ್ಮ ಫ‌ಲ ಭೂಮಿಯನ್ನು ಹಾವುಗಳು ಬಹುಕಾಲದಿಂದ ರಕ್ಷಿಸುತ್ತ ಬಂದಿವೆ. ಈ ಕಾರಣಕ್ಕೆ ನಾಗದೇವರನ್ನು ಆರಾಧಿಸುತ್ತೇವೆ. ನಾಗನಿಗೆ ವಿಶೇಷವಾಗಿ ಅಂದರೆ ಪಂಚಾಮೃತ-ಹಾಲು, ಬಾಳೆಹಣ್ಣು, ಮೊಸರು, ತುಪ್ಪ, ಜೇನು, ಸಕ್ಕರೆ, ಎಳನೀರು ಅಭಿಷೇಕ ಮಾಡಿ ಚೆನ್ನಾಗಿ ತೊಳೆದು ಆಮೇಲೆ ಅಲಂಕಾರ ಮಾಡಿ ಅರಸಿನ ಇಟ್ಟು ಪೂಜೆ ಮಾಡಲಾಗುತ್ತದೆ. ಅರಶಿನ ನಾಗನಿಗೆ ಬಾರಿ ವಿಶೇಷ. ಅಭಿಷೇಕ ಮಾಡಿ ಹಾಗೆ ಇಟ್ಟು ಬಂದರೆ ಇರುವೆಗಳು ಬರುತ್ತದೆ. ಅದಕ್ಕಾಗಿ ಅರಿಶಿನ ಹಾಕಿ ಶುದ್ಧ ಮಾಡಿ ಇಡಲಾಗುತ್ತದೆ.

ನಾಗರ ಪಂಚಮಿ ದಿನ ಹಾಲೆರೆದರೆ ಅದು ಸಮುದ್ರಕ್ಕೆ ತಲುಪಬೇಕು. ಯಾಕೆಂದರೆ ಇದು ಮಳೆಗಾಲದ ಸಮಯ, ಇಡೀ ದಿನ ಮಳೆ ಬರುತ್ತದೆ. ಮಳೆ ಬರುವಾಗ ಹಾಲು ಎರೆದರೆ ಭೂಮಿಯಿಂದ ಸಮುದ್ರಕ್ಕೆ ತಲುಪುತ್ತದೆ ಎಂಬ ನಂಬಿಕೆ. ಇದರಿಂದ ಸಾಮಾನ್ಯ ಸರ್ಪ ದೋಷ ಪರಿಹಾರ ಆಗುತ್ತದೆ. ಸರ್ಪದೋಷ ನಿವಾರಣೆ ದಿನ ನಾಗರಪಂಚಮಿಯಂದು ಹಾಲೇರದು ಹಾಲು ಪಾಯಸ ನೈವೇದ್ಯ ಮಾಡಿ ಭಕ್ತರಿಗೆ ತೀರ್ಥ ರೂಪದಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಹೀಗೆ ನಾಗರ ಪಂಚಮಿ ದಿವಸ ವಿಶೇಷ ಪೂಜೆ, ಸಮರ್ಪಣೆಗಳನ್ನು ಭಕ್ತರು ನೆರವೇರಿಸುತ್ತಾರೆ.

ನಾಗದೇವರಿಗೆ ಸಂಬಂಧಿಸಿದ ದೇವಸ್ಥಾನಗಳ ಹೊರ ತಾಗಿಯೂ ನಾಗನ ವನ, ಇತ್ಯಾದಿ ಭೂಮಿಗೆ ಸಂಬಂಧಿಸಿದ ಜಾಗದಲ್ಲಿ ನಾಗರ ಪಂಚಮಿ ಆಚರಿಸಲಾಗುತ್ತದೆ. ಭೂಮಿಯಲ್ಲಿನ ಫ‌ಲ, ಪುಷ್ಪ, ಬೆಳೆ ಸಮೃದ್ಧಿಗಾಗಿ ಅಂದು ಭಕ್ತ ಜನರೆಲ್ಲ ತಮ್ಮ ಕೃಷಿ ಭೂಮಿಗಳಲ್ಲಿ ತನು, ಸೀಯಾಳ, ಪರಿಮಳ ಭರಿತ ಹೂವುಗಳನ್ನು ನಾಗನಿಗೆ ಅರ್ಚನೆಗೆ ನೀಡಿ ಜನ್ಮಾರ್ಜಿತ ಸಂಚಿತ ಪಾಪಗಳಿಂದ ಮುಕ್ತಿಯನ್ನು ನೀಡು ಎಂದು ಪ್ರಾರ್ಥಿಸುತ್ತಾರೆ. ಈ ದಿನ ನಾಗನಿಗೆ ತಂಬಿಲ, ನಾಗನ ಕಲ್ಲಿಗೆ ಹಾಲು ಎರೆಯುವ ಸಂಪ್ರದಾಯವನ್ನು ಹಿಂದಿ ನಿಂದಲೂ ನಡೆಸಿಕೊಂಡು ಬಂದ ಆಚರಣೆ.

Advertisement

ವಿಶೇಷವಾಗಿ ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ನಾಗನಿಗೆ ವಿಶೇಷ ಪೂಜೆ ಸಮ ರ್ಪಣೆಗಳು ನಡೆಯುತ್ತದೆ. ಅಂದು ಪ್ರಾತ: ಕಾಲದಲ್ಲಿ ಎಲ್ಲರೂ ಸ್ವತ್ಛವಾಗಿ ಸ್ನಾನ ಮಾಡಿ, ಶುಭ್ರ ವಸ್ತ್ರಧರಿಸಿ ನಾಗನ ಆರಾಧನೆಯನ್ನು ಮಾಡಬೇಕು. ಪೂರ್ವಜರ ಕಾಲದಿಂದಲೂ ಇದು ನಡೆದುಕೊಂಡು ಬಂದ ಸಂಪ್ರದಾಯ. ಈ ದಿನದಂದು ನಾಗದೇವತೆಯನ್ನು ಪೂಜಿ ಸುವುದರಿಂದ ಎಲ್ಲ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ.

ನಾಗರ ಪಂಚಮಿಯಂದು ನಾಗನ ಆರಾಧನೆಯಿಂದ ರಾಹು-ಕೇತು ಮತ್ತು ಕಾಳಸರ್ಪ ದೋಷಗಳ ದುಷ್ಪ ರಿಣಾಮದಿಂದ ಮುಕ್ತಿಯನ್ನು ನೀಡುತ್ತದೆ. ಹಿಂದೂ ಧರ್ಮದಲ್ಲಿ ನಾಗದೇವರಿಗೆ ವಿಶೇಷ ಮಹತ್ವವಿದೆ. ನಾಗರ ಪಂಚಮಿ ದಿನದಂದು ಸಂತೋಷ, ಸಮೃದ್ಧಿ ಹೊಲಗಳಲ್ಲಿ ಬೆಳೆಗಳ ರಕ್ಷಣೆಗಾಗಿ ಹಾವುಗಳನ್ನು ಪೂಜಿಸಲಾಗುತ್ತದೆ. ಎಲ್ಲ ನಾಗರಾಧನೆಯ ಕ್ಷೇತ್ರಗಳಲ್ಲಿ ಅಂದು ವಿಶೇಷ ಸೇವೆ, ಸಮರ್ಪಣೆಗಳು ನಡೆಯುತ್ತವೆ.

ಸಿಂಧೂ ಸಂಸ್ಕೃತಿಯ ಉತ್ಖನನ ತಾಣಗಳಲ್ಲಿ ಸಿಕ್ಕಿರುವ ಅನೇಕ ಅವಶೇಷಗಳು ಅಲ್ಲಿನ ಜನರು ನಾಗ(ಸರ್ಪ) ಪೂಜೆ ಮಾಡುತ್ತಿದ್ದರು ಎನ್ನುವುದನ್ನು ತಿಳಿಸುತ್ತದೆ. ಅನಂತರ ಬಂದಿರುವ ಅನೇಕ ರಾಜಮನೆತನಗಳು ಕೂಡ ಸರ್ಪವನ್ನು ವಿಶೇಷವಾಗಿ ಪೂಜಿಸುತ್ತಿದ್ದರು. ಇತಿಹಾಸದ ಪುಟಗಳಲ್ಲಿ ಇವುಗಳು ಉಲ್ಲೇಖವಿರುವುದನ್ನು ಕಾಣಬಹುದಾಗಿದೆ. ಮಾನವ ಜನಾಂಗ ಅನಾದಿ ಕಾಲದಿಂದಲೂ ನಾಗರಾಧನೆ ನಡೆಸಿಕೊಂಡು ಬಂದಿದ್ದರು ಎನ್ನುವುದು ಇದರಿಂದ ತಿಳಿಯುತ್ತದೆ.

ನಾಗರ ಪಂಚಮಿ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಶ್ರಾವಣ ಶುದ್ಧ ಪಂಚಮಿಯ ದಿನ. ಗೋಮಯ(ಸಗಣಿ)ದಿಂದ ಮುಂ ಬಾಗಿಲು ಸಾರಿಸಿ, ರಂಗೋಲಿ ಇಲ್ಲವೇ ಅರಶಿಣ, ಕುಂಕು ಮದಿಂದ ನಾಗನ ಚಿತ್ರಗಳನ್ನು ಬರೆದು ನೇಮನಿಷ್ಠೆಯಿಂದ ಪೂಜೆ ಮಾಡುತ್ತಾರೆ. ನಾಗರ ಪಂಚಮಿ ದಿನ ವೃತಾಚರಣೆ, ನಾಗನ ಆರಾಧನೆ ಮಾಡು ವುದರಿಂದ ಸಂತಾನ ಭಾಗ್ಯ ಪ್ರಾಪ್ತಿ ಯಾಗುವುದು. ಮಕ್ಕಳಿಗೆ ವಿವಾಹ ತಡ ವಾಗುತ್ತಿದ್ದರೆ ಪರಿಹಾರ ಕಾಣುವುದು, ಕಂಕಣ ಭಾಗ್ಯ ಕೂಡಿ ಬರುವುದು.

ಭೂ ಸಂಬಂಧಿತ ವ್ಯಾಜ್ಯ, ದೃಷ್ಟಿದೋಷ, ಮಾನಸಿಕ ಕಾಯಿಲೆಗಳು ಗುಣ ಮುಖವಾಗುವುವು. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳ ಪರಿಹಾರ ನಾಗರಾಧನೆಯಿಂದ ಆಗಲಿದೆ. ನಾಗರಾಧನೆ ಭಾರತದಲ್ಲಷ್ಟೇ ಅಲ್ಲ. ವಿಶ್ವದ ಹಲವು ದೇಶಗಳಲ್ಲಿ ಆಚರಣೆಯಲ್ಲಿದೆ. ಹಲವು ವಿಧಗಳಲ್ಲಿ ನಡೆಯಲ್ಪಡುತ್ತದೆ. ತಂಪಿರುವ ಜಾಗಗಳು ನಾಗನಿಗಿಷ್ಟ. ನಾಗ ದೇವರ ಸಂಪ್ರೀತಿಗೆ ಭೂಮಿಯನ್ನು ತಂಪಾಗಿಸುವತ್ತ ನಾವು ಗಮನಹರಿಸಬೇಕು. ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪರಿಸರ ಸಂರಕ್ಷಣೆಯ ಪ್ರಕೃತಿ ಆರಾಧನೆಯೊಂದಿಗೆ ನಾಗರ ಪಂಚಮಿ ಆಚರಣೆಗಳು ನಡೆದು ನಾಡಿನ ಜನ ಸುಭೀಕ್ಷೆೆಯಿಂದ ಬಾಳುವಂತಾಗಲು ನಾಗ ದೇವರು ಎಲ್ಲರನ್ನೂ ಹರಸಲಿ.
ಸಮೃದ್ಧಿ ತರಲಿ.

ವೇ|ಮೂ| ರಾಮಕೃಷ್ಣ ಆಸ್ರಣ್ಣ, ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ

 

Advertisement

Udayavani is now on Telegram. Click here to join our channel and stay updated with the latest news.

Next