ಮಹಾನಗರ: ನಗರದ ವಿವಿಧ ದೇವಸ್ಥಾನಗಳ ನಾಗಸನ್ನಿಧಿ, ನಾಗಬನಗಳಲ್ಲಿ ಭಕ್ತರು ಸೀಯಾಳ, ಕ್ಷೀರಾಭಿಷೇಕ ಮಾಡುವ ಮೂಲಕ ನಾಗರಪಂಚಮಿಯನ್ನು ಭಕ್ತಿ, ಸಡಗರದಿಂದ ಆಚರಿಸಿದರು.
ಸೋಮವಾರ ಮುಂಜಾನೆಯಿಂದಲೇ ವಿವಿಧ ದೇವಸ್ಥಾನಗಳಲ್ಲಿ ಭಕ್ತರು ನಾಗ ದೇವರಿಗೆ ಹಾಲು, ಸೀಯಾಳ, ಪಂಚಾಮೃತ ಅಭಿಷೇಕ ನೆರವೇರಿಸಿದರು. ಆಲಯಗಳ ಮುಂಭಾಗದಲ್ಲಿ ವಾಹನದಟ್ಟಣೆ ಅಧಿಕವಿತ್ತು. ಹಬ್ಬದ ಹಿನ್ನೆಲೆಯಲ್ಲಿ ರವಿವಾರ ಸಂಜೆ ಯಿಂದಲೇ ನಗರದಲ್ಲಿ ಸೀಯಾಳ, ಹೂವಿನ ವ್ಯಾಪಾರ ಬಿರುಸಿನಿಂದ ನಡೆಯಿತು.
ಕುಡುಪು ಕ್ಷೇತ್ರ
ಕುಕ್ಕೆ ಸುಬ್ರಹ್ಮಣ್ಯದ ಬಳಿಕ 2ನೇ ಅತಿದೊಡ್ಡ ನಾಗ ಕ್ಷೇತ್ರ ಎನಿಸಿರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಭಕ್ತ ಜನಸಾಗರವೇ ಸೇರಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ದರುಶನ ಪಡೆದರು. ಕ್ಷೇತ್ರದಲ್ಲಿ ಅನ್ನದಾನದ ವ್ಯವಸ್ಥೆ ಯನ್ನೂ ಮಾಡಲಾಗಿತ್ತು. ಕ್ಷೇತ್ರದಲ್ಲಿ ಮುಂಜಾನೆ 4 ಗಂಟೆಯಿಂದಲೇ ಮಳೆ ಯನ್ನು ಲೆಕ್ಕಿಸದೆ ಭಕ್ತರ ಸರತಿ ಸಾಲು ಕಂಡುಬಂತು. ಶ್ರೀ ಅನಂತ ಪದ್ಮನಾಭ ದೇವರಿಗೆ ಮುಂಜಾನೆ 4 ಗಂಟೆಗೆ ಉಷಃ ಕಾಲ ಪೂಜೆ ಜರಗಿ ತದನಂತರ ಶ್ರೀ ದೇವರಿಗೆ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಅರ್ಚನೆ, ಸಹಸ್ರನಾಮ ಅರ್ಚನೆ, ನಾಗರ ಪಂಚಮಿಯ ವಿಶೇಷವಾದ ಹರಿವಾಣ ನೈವೇದ್ಯ ಸೇವೆ ಜರಗಿತು. ಮಧ್ಯಾಹ್ನ ಹೂವಿನ ಅಲಂಕಾರ ಗೊಂಡ ಶ್ರೀ ಅನಂತ ಪದ್ಮನಾಭ ದೇವರಿಗೆ ವಿಶೇಷ ಮಹಾಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಛತ್ರದಲ್ಲಿ ಸುಮಾರು 20 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ವಿಶೇಷವಾದ ಹಾಲು-ಪಾಯಸ ನೀಡಲಾಯಿತು.
ಸುಮಾರು 50 ಸಾವಿರಕ್ಕೂ ಅಧಿಕ ಜನ ನಾಗದೇವರ ದರ್ಶನ ಪಡೆದರು. ಸುಮಾರು 15 ಸಾವಿರದಷ್ಟು ತಂಬಿಲ ಸೇವೆ, 5 ಸಾವಿರದಷ್ಟು ಪಂಚಾಮೃತ ಅಭಿಷೇಕ ಸೇವೆ ನಡೆಯಿತು. ಮಧ್ಯಾಹ್ನ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಸೀಯಾಳವನ್ನು ಭಕ್ತರು ದೇವರಿಗೆ ಅರ್ಪಿಸಿದರು.
ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ, ಆನುವಂಶಿಕ ಮೊಕ್ತೇಸರ ಬಾಲಕೃಷ್ಣ ಕಾರಂತ, ಮೊಕ್ತೇಸರ ಭಾಸ್ಕರ್ ಕೆ., ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಕ್ತರು ನಾಗರಪಂಚಮಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಶರವು ಮಹಾಗಣಪತಿ ದೇವಸ್ಥಾನ, ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವ ಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಸಹಿತ ವಿವಿಧ ದೇವಾಲಯಗಳಲ್ಲಿ ನಾಗರಪಂಚಮಿ ಆಚರಿಸಲಾಯಿತು.