ಮುಂಬಯಿ: ಮಹಾನಗರದ ಹಿರಿಯ ಧಾರ್ಮಿಕ ಸಂಘಟನೆಯಾಗಿರುವ ಶ್ರೀ ಮದ್ಭಾರತ ಮಂಡಳಿಯ ಸಂಚಾಲಕತ್ವದ ಅಂಧೇರಿಯಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ನಾಗದೇವರ ಸನ್ನಿಧಿಯಲ್ಲಿ ನಾಗರಪಂಚಮಿ ಆಚರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ಗುರುಪ್ರಸಾದ ತಂತ್ರಿ ಅವರು ನಾಗದೇವರ ಬಿಂಬಕ್ಕೆ ಪಂಚಾಮೃತ ಅಭಿಷೇಕ, ತನು, ತಂಬಿಲ ಸೇವೆಯನ್ನು ಭಕ್ತರ ಪರವಾಗಿ ಅರ್ಪಿಸಿದರು. ಬಳಿಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ವಿಶ್ವಕ್ಕೆ ಪಸರಿಸಿರುವ ಕೊರೊನಾ ಮಹಾಮಾರಿ ತೊಲಗಿ, ಸರ್ವರೂ ನಿಶ್ಚಿಂತೆಯಿಂದ ದೇವತಾ ಕಾರ್ಯಗಳಲ್ಲಿ ಎಂದಿನಂತೆ ಭಾಗವಹಿಸುವಂತೆ ದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ಇದನ್ನೂ ಓದಿ:ಸ್ಟೇಜ್ ಕ್ಯಾರೇಜ್, ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳ ತೆರಿಗೆ ಪಾವತಿಗೆ ಒಂದು ತಿಂಗಳ ಕಾಲಾವಕಾಶ
ಮಹಾಪೂಜೆಯಲ್ಲಿ ಅಧ್ಯಕ್ಷ ಜಗನ್ನಾಥ್ ಪಿ. ಪುತ್ರನ್, ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಜತೆ ಕಾರ್ಯದರ್ಶಿ ಲೋಕನಾಥ್ ಕಾಂಚನ್, ಹರೀಶ್ಚಂದ್ರ ಕಾಂಚನ್, ಟ್ರಸ್ಟಿ ನಾಗೇಶ್ ಮೆಂಡನ್, ಅಶೋಕ್ ಎನ್. ಸುವರ್ಣ, ಎಚ್. ಮಹಾಬಲ, ಶಶಿಕುಮಾರ್ ಕೋಟ್ಯಾನ್, ಅರ್ಚಕ ವಾಸು ಉಪ್ಪುರು, ಮೋಹನ್ ಒ. ಡಿ. ಮೆಂಡನ್, ಅಶೋಕ್ ಕರ್ಕೇರ, ಹಾಗೂ ಮಹಿಳಾ ಮಂಡಳಿಯ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷ ಅಶೋಕ್ ಸುವರ್ಣ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು. ಕೊರೊನಾ ನಿಯಮದಂತೆ ಪೂಜೆಯಲ್ಲಿ ನಿಗದಿತ ಸಂಖ್ಯೆಯಲ್ಲಿ ಭಕ್ತರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. 3 ಪ್ರತ್ಯೇಕ ಸಮಯವನ್ನು ನಿಗದಿಪಡಿಸಿ ಪೂಜೆಯ ವ್ಯವಸ್ಥೆಯನ್ನು ಮಾಡಲಾಗಿದ್ದು, ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.