Advertisement

ಕೋವಿಡ್ ಭೀತಿಯಲ್ಲೇ ಪಂಚಮಿ

11:32 AM Jul 25, 2020 | Suhan S |

ದಾವಣಗೆರೆ: ಮಹಾಮಾರಿ ಕೋವಿಡ್ ವೈರಸ್‌ನ ವ್ಯಾಪಕ ಹರಡುವಿಕೆ, ಭಯದ ವಾತಾವರಣದ ನಡುವೆಯೂ ದಾವಣಗೆರೆ ಜನರು ಶುಕ್ರವಾರ ನಾಗರಪಂಚಮಿ ಹಬ್ಬವನ್ನು ಆಚರಿಸಿದರು.

Advertisement

ಶ್ರಾವಣ ಮಾಸದ ಪಂಚಮಿ ದಿನ ಕಲ್ಲು ನಾಗರಕ್ಕೆ ಹಾಲು ಎರೆಯುವುದು, ಪೂಜೆ ಸಲ್ಲಿಸುವ ಸಂಪ್ರದಾಯವನ್ನು ದಾವಣಗೆರೆಯಲ್ಲಿ ಬಹುತೇಕ ಕಡೆ ಬಹಳ ಅದ್ಧೂರಿಯಾಗಿ ಆಚರಿಸುವುದು ಸಾಮಾನ್ಯ. ಆದರೆ ಈ ವರ್ಷ ಎಂದೆಂದೂ ಕಂಡು ಕೇಳರಿಯದ ಕೋವಿಡ್ ವೈರಸ್‌ ಹಾವಳಿ ಆ ಎಲ್ಲಾ ಸಂಭ್ರಮವನ್ನು ಆಪೋಶನ ಮಾಡಿದೆ. ಬೆಳಗ್ಗೆಯಿಂದಲೇ ನಾಗರಕಟ್ಟೆ, ದೇವಸ್ಥಾನ, ಹಿಂದಿನ ಕಾಲದಿಂದಲೂ ಹಾಲು ಎರೆಯುವ ಸ್ಥಳಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಹಾಲು ಎರೆಯುವುದು ಕಂಡು ಬಂದಿತು. ಕೋವಿಡ್ ವೈರಸ್‌ ಭಯದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿದ್ದರು. ಸ್ಯಾನಿಟೈಸರ್‌ ಸಹ ಬಳಸಿದರು.

ಪ್ರತಿ ವರ್ಷ ಒಬ್ಬರು ಪೂಜೆ ಮಾಡಿದ್ದ ಕಲ್ಲುನಾಗರ, ದೇವರ ಮೂರ್ತಿಗಳನ್ನು ಶುಚಿಗೊಳಿಸಿ, ಹೂವು, ಹತ್ತಿ ಹಾರ ಹಾಕಿ ಪೂಜೆ ಮಾಡುತ್ತಿದ್ದರು. ಆದರೆ ಈ ವರ್ಷ ಯಾವುದೇ ಗೋಜಿಗೇ ಹೋಗಲಿಲ್ಲ. ಬೇರೆಯವರು ಪೂಜೆ ಮಾಡಿದ್ದನ್ನು ತೆಗೆಯುವುದು, ಮತ್ತೆ ಶೃಂಗರಿಸುವುದನ್ನು ಮಾಡಲಿಲ್ಲ. ಹಾಗೆಯೇ ಪೂಜೆ ಮಾಡಿ ಹಾಲು ಎರೆದರು. ಕಾರಣ ಕೋವಿಡ್ ಭಯ. ಅಷ್ಟೊಂದು ಮುಂಜಾಗ್ರತೆಯೊಂದಿಗೆ ಹಬ್ಬದಾಚರಣೆ ಮಾಡಿದರು. ಕೋವಿಡ್ ಧಾರ್ಮಿಕ ವಿಧಿ, ವಿಧಾನ, ಪೂಜಾ ಕಾರ್ಯಗಳಿಗೂ ತಡೆ ಉಂಟು ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next