Advertisement

ಪರಿಸರ ಸಹ್ಯ ನಾಗರ ಪಂಚಮಿ ಆಚರಣೆಗೆ ಇರಲಿ ಆದ್ಯತೆ

05:43 PM Aug 05, 2019 | Sriram |

ಉಡುಪಿ: ವರ್ಷದ ಮೊದಲನೆಯ ಹಬ್ಬವಾದ ನಾಗರ ಪಂಚಮಿ ಆ. 5ರಂದು ನಡೆಯಲಿದೆ. ನಾಗರ ಪಂಚಮಿ ಸಂಭ್ರಮಾಚರಣೆ ಮಧ್ಯೆಯೇ ಬನಗಳನ್ನು ಬೆಳೆಸುವ ಮತ್ತು ಅಲ್ಲಿ ಸ್ವಚ್ಛತೆಯನ್ನು ಉಳಿಸಿ ಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

Advertisement

ಪ್ರಕೃತಿ ವಿಕೋಪದ ಬಿಸಿ
ಈ ಬಾರಿ ಬೇಸಗೆಯಲ್ಲಿ ಬರದ ತೀವ್ರತೆ ಉಂಟಾಗಲು, ಊರಿನಲ್ಲಿದ್ದ ಹತ್ತಾರು ನಾಗಬನಗಳು ನಶಿಸಿರುವುದೂ ಒಂದು ಕಾರಣ. ವನಗಳು ನಾಶವಾದ ಕಾರಣ ನಾಗರ ಹಾವು ಸಹಿತ ಇತರ ಹಾವುಗಳೂ, ಪಕ್ಷಿ ಸಂಕುಲಗಳೂ ಆಶ್ರಯ ತಾಣವಿಲ್ಲದೆ ಸಂತತಿ ನಷ್ಟದಲ್ಲಿವೆ. ಜತೆಗೆ ಹಾವುಗಳ ಸಂತಾನವೃದ್ಧಿ ನಿಯಂತ್ರಿಸುವ ಮುಂಗುಸಿ, ನವಿಲುಗಳು ನಾಡಿನಲ್ಲಿವೆ. ಇದರಿಂದ ಜೀವಚಕ್ರಕ್ಕೆ ಪೆಟ್ಟುಬಿದ್ದಿದ್ದು, ಅಸಮತೋಲನಕ್ಕೆ ಕಾರಣವಾಗಿದೆ. ನಾಗ ಆರಾಧನೆ ಹಣದ ಖರ್ಚಿಗೆ ಮಾತ್ರ ಸೀಮಿತವಾಗಿದೆ.

ಎಂತಹ ಹಾಲಿನ ಅಭಿಷೇಕ?
ನಾಗರ ಪಂಚಮಿ ದಿನ ಹಾಲು, ಎಳನೀರು, ಜೇನುತುಪ್ಪ ಅಭಿಷೇಕ ಮಾಡುವ ಕ್ರಮವಿದೆ. ಹಿಂದೆ ನೈಸರ್ಗಿಕ ಗಿಡಮೂಲಿಕೆಗಳನ್ನು ತಿನ್ನುತ್ತಿದ್ದ ಹಸುಗಳ ಹಾಲನ್ನು ಅಭಿಷೇಕಕ್ಕೆ ಕೊಡುವ ಕ್ರಮವಿತ್ತು. ಆದರೆ ಈಗ ಪ್ಯಾಕೇಟ್ ಹಾಲು ಸೀಮಿತವಾಗಿದೆೆ. ಈಗಿನ ಹಸುಗಳೂ ಕೃತಕ ಆಹಾರ ತಿನ್ನುತ್ತಿವೆ. ಮೇಯಲು ಬಿಟ್ಟ ಹಸುಗಳು ಪ್ಲಾಸ್ಟಿಕ್‌ ಕೂಡ ತಿನ್ನುತ್ತವೆ. ಇದರಿಂದ ಹಾಲು ಕೂಡ ರಾಸಾಯನಿಕ ಸಹಿತವಾಗಿದೆ.

ಎಳನೀರಿನ ಚಿಪ್ಪು ಎಸೆಯಬೇಡಿ
ಎಳನೀರೊಂದೇ ಸದ್ಯ ಕಡಿಮೆ ರಾಸಾಯನಿಕ ಹೊಂದಿರುವ ವಸ್ತು ಎನ್ನಬಹುದು. ಆದರೂ ತೆಂಗಿನಮರಗಳಿಗೆ ಹಾಕುವ ರಸಗೊಬ್ಬರವನ್ನು ಮರೆಯುವಂತಿಲ್ಲ. ಎಳನೀರನ್ನೂ ಅಭಿಷೇಕ ಮಾಡಿ ಅಲ್ಲೇ ಬಿಸಾಡಿದರೆ ಅದರಲ್ಲಿ ಮಳೆ ನೀರು ತುಂಬಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇದಕ್ಕಾಗಿ ಭಕ್ತರು ತೀರ್ಥವನ್ನು ಅದರಲ್ಲೇ ತುಂಬಿಸಬಹುದು. ಮನೆಯವರು ಉರುವಲಾಗಿಯೂ ಬಳಸಬಹುದು. ಅಥವಾ ಇವುಗಳನ್ನು ಒಡೆದು ಬೋರಲಾಗಿ ತೆಂಗಿನ ಮರಗಳ ಕಟ್ಟೆಗೆ ಹಾಕಿದರೆ ಅತ್ಯುತ್ತಮ ಸಾರವಾಗುತ್ತದೆ. ನೈವೇದ್ಯಕ್ಕಾಗಿ ಕೊಂಡುಕೊಳ್ಳುವ ಬಾಳೆಹಣ್ಣನ್ನೂ ಕೃತಕವಾಗಿ ಹಣ್ಣು ಮಾಡುವುದರಿಂದ ಅದರ ಪರಿಣಾಮ ನಮ್ಮ ದೇಹದ ಮೇಲಾಗುತ್ತಿದೆ.

ಬನದಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ ಬೇಡ
ಅರಶಿನ, ಎಣ್ಣೆ, ಅಗರಬತ್ತಿ, ಹತ್ತಿಬತ್ತಿಯನ್ನೂ ನಾಗನ ತಂಬಿಲ ಹಾಕುವಾಗ ಕೊಂಡೊಯ್ಯುತ್ತಾರೆ. ಪ್ಲಾಸ್ಟಿಕ್‌ ಪ್ಯಾಕಿಂಗ್‌ನಲ್ಲೇ ಈ ವಸ್ತುಗಳು ಬರುವುದರಿಂದ ಬನಗಳು ಪ್ಲಾಸ್ಟಿಕ್‌ ಕೇಂದ್ರವಾಗುತ್ತಿವೆ. ನೈರ್ಮಲ್ಯ ಕಾಪಾಡಲು ಇವುಗಳನ್ನು ಬಳಸದೆ, ಬಟ್ಟೆಯ ಚೀಲ, ಬುಟ್ಟಿ ಇತ್ಯಾದಿಗಳನ್ನು ಬಳಸಬೇಕು. ಜತೆಗೆ ಸ್ಥಳೀಯರು ಸ್ವತ್ಛತೆಗೆ ಗರಿಷ್ಠ ಆದ್ಯತೆ ನೀಡಬೇಕು. ಮಳೆಗಾಲದಲ್ಲಿ ವಿವಿಧ ಗಿಡಗಳನ್ನೂ ಬನದ ಸನಿಹ ನೆಡುವುದರಿಂದ ತನು ತಂಬಿಲಕ್ಕಿಂತಲೂ ಶ್ರೇಷ್ಠ ಪೂಜೆ ಎಂದೆನಿಸೀತು.

ನಾಗಬನಗಳ ರಕ್ಷಣೆ ಅತ್ಯಗತ್ಯ

ಎಳನೀರು, ಶುದ್ಧ ಹಾಲನ್ನು ಭೂಮಿಗೆ ಎರೆಯುವುದರಿಂದ ಅಲ್ಲಿ ಉಂಟಾಗುವ ರಾಸಾಯನಿಕ ಪ್ರಕ್ರಿಯೆ ಔಷಧೀಯ ಗುಣವನ್ನು ಹೊಂದಿರುತ್ತದೆ. ಇದುವೇ ಮೃತ್ತಿಕಾ ಪ್ರಸಾದ ಎನಿಸಿತು. ಕೇವಲ ಇಷ್ಟಕ್ಕೆ ನಿಲ್ಲದೆ ಪಕ್ಷಿ ಸಂಕುಲ, ಹಾವುಗಳಿಗೆ ಆಶ್ರಯತಾಣವಾದ ನಾಗಬನಗಳ ರಕ್ಷಣೆ ನಮ್ಮ ಪರಿಸರ ಉಳಿಸಲು ಮಾಡಬಹುದಾದ ಆದ್ಯ ಕರ್ತವ್ಯ.
– ಡಾ| ರವೀಂದ್ರನಾಥ ಐತಾಳ, ಉರಗತಜ್ಞರು, ಪುತ್ತೂರು.

ನಾಗ ವನ ನೈಸರ್ಗಿಕ ಆಗಿರಬೇಕು

ಈಗ ನಾವು ನಿರ್ಮಿಸುತ್ತಿರುವ ನಾಗ(ಭ)ವನಗಳಿಂದ ಹಾವುಗಳು ಬಿಡಿ ಇರುವೆಗಳೂ ಆ ಉಷ್ಣಾಂಶಕ್ಕೆ ಬದುಕಲಾರವು. ಹುತ್ತ ಬೆಳೆಯಲು ಅಗತ್ಯವಿರುವ ಗೆದ್ದಲುಗಳೂ ಸೇರಿದಂತೆ ಎಲ್ಲ ಜೀವ ಸಂಕುಲಗಳು ಮಾನವ ಸಂಕುಲಕ್ಕೆ ಅತೀ ಅಗತ್ಯ.
– ಗುರುರಾಜ ಸನಿಲ್, ಉರಗತಜ್ಞರು, ಉಡುಪಿ
-ಮಟಪಾಡಿ ಕುಮಾರಸ್ವಾಮಿ
Advertisement
Advertisement

Udayavani is now on Telegram. Click here to join our channel and stay updated with the latest news.

Next