Advertisement

Festival: ನಾಗರ ಪಂಚಮಿ; ಹಬ್ಬಗಳ ಹಂಗಾಮಕ್ಕೆ ಮುನ್ನುಡಿ…

03:49 PM Aug 20, 2023 | Team Udayavani |

ಪ್ರಕೃತಿ ಫ‌ಲ ಕೊಡಲು ಗರ್ಭಾಂಕುರವಾಗುವ ಮಾಸ, ಶ್ರಾವಣ. ಮಳೆಗಾಲದಲ್ಲಿ ಸಸ್ಯಶ್ಯಾಮಲೆ ಮೈದುಂಬಿಕೊಳ್ಳುವ ಕಾಲವಿದು. ಶ್ರಾವಣ ಮಾಸದಿಂದ ಹಬ್ಬ ಹರಿದಿನಗಳ ಸರಣಿ ಆರಂಭಗೊಳ್ಳುತ್ತದೆ. ಈ ಸರಣಿಯಲ್ಲಿ ಮೊದಲ ಹಬ್ಬವಾದ ನಾಗರಪಂಚಮಿ ಆ. 21ರಂದು ಆಚರಣೆಯಾಗುತ್ತಿದೆ.

Advertisement

ಸಾಮಾಜಿಕ ಅನುಸಂಧಾನ

ನಾಗ ಎಂಬ ಜನಾಂಗ ಇಲ್ಲಿ ಮೂಲದಲ್ಲಿದ್ದರು. ಅವರಿಂದ ಭೂಮಿಯನ್ನು ಪಡೆದುಕೊಂಡ ಮನುಷ್ಯರು ಆ ನಾಗ ಸಂತತಿಗೆ ಗೌರವ ಸಲ್ಲಿಸಲು ಆರಂಭಿಸಿದರು ಎಂಬ ವಾದವೂ ಇದೆ.

ಕರಾವಳಿಯ ದೈವ ಭೂತಗಳ ಆರಾಧನೆಯೂ ಇದೇ ತೆರನಾಗಿದೆ. ಇದು ಒಂದು ರೀತಿಯಲ್ಲಿ ಭೂತಾಯಿಗೆ ಗೌರವ ತೋರಿಸುವ ವಿಧಾನ. ಭೂತಾಯಿಯನ್ನು ಗೌರವಿಸಬೇಕು ಎಂಬುದನ್ನೇ ಈಗಿನ ಪೀಳಿಗೆಯ ಜನ ಮರೆಯುತ್ತಿದ್ದಾರೆ. “ಪಡೆದ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸುವುದು ಅತ್ಯಗತ್ಯ’ ಎಂದು ಹೆಸರಾಂತ ವೈದ್ಯ ಡಾ|ಬಿ.ಎಂ.ಹೆಗ್ಡೆ ಹೇಳುವುದನ್ನು ಇದಕ್ಕೆ ಪೂರಕವಾಗಿ ಉಲ್ಲೇಖಿಸಬಹುದು.

ನಾಗ ಜನಾಂಗದ ಬದಲಾಗಿ, ಜನಾಂಗದ ಪ್ರತೀಕವಾಗಿ ಕಲ್ಲುಗಳಲ್ಲಿ ಆರಾಧನೆ ಆರಂಭವಾಗಿರಬಹುದು. ದೇವರನ್ನು ಕಲ್ಲಿನಲ್ಲಿ ಕಂಡು ಪೂಜಿಸುವುದಿಲ್ಲವೆ? ಹಾಗೆಂದು ಭಾವಿಸೋಣ. ಕಲ್ಲಿನಲ್ಲಿ ನಾಗನ ಪ್ರತೀಕ ಒಂದಾದರೆ ಹಾವಿನಲ್ಲಿ ನಾಗನ ಪ್ರತೀಕ ಇನ್ನೊಂದು ಬಗೆ. ನಾಗರ ಹಾವು ನಿಜನಾಗನಾದರೆ, ನಾಗನ ಕಲ್ಲು ನಿಜನಾಗನ ಪ್ರಾತಿನಿಧಿಕ ಸಂಕೇತಿಕವೆನ್ನಬಹುದು.

Advertisement

ನಮಗೆ ವಾಸ್ತವಕ್ಕಿಂತಲೂ ಕಲ್ಪನೆ ಹೆಚ್ಚು ಖುಷಿ ಕೊಡುವುದಿದೆ. ಹೀಗಾಗಿಯೋ ಏನೋ ಮನುಷ್ಯನ ಆತ್ಮವಂಚನೆ ವರ್ತನೆ ಕಂಡು ಬಸವಣ್ಣನವರು “ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು| ದಿಟದ ನಾಗರ ಕಂಡರೆ ಕೊಲ್ಲೆಂಬರಯ್ನಾ|| ಉಂಬ ಜಂಗಮ ಬಂದರೆ ನಡೆ ಎಂಬರು| ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ನಾ|| ಎಂದು ಹೇಳಿರಬಹುದು. ನಮ್ಮ ನಡವಳಿಕೆ ಬಸವಣ್ಣನವರ ಟೀಕೆಗೆ ಯೋಗ್ಯವಾಗಿಯೇ ಇರುವುದು ಸತ್ಯ.

ನೈಸರ್ಗಿಕ ಅನುಸಂಧಾನ

ನಾಗರಹಾವಿನಲ್ಲಿರುವ ವಿಷ ಭಯವನ್ನು ಉಂಟು ಮಾಡುವುದರಿಂದಲೇ, ಅದು ವಾಸ ಮಾಡುವ ಸ್ಥಳ ಇದುವರೆಗೂ ಉಳಿಯಲು ಸಾಧ್ಯವಾಯಿತೆನ್ನಬಹುದು. ಇತ್ತೀಚಿನ ವರ್ಷಗಳಲ್ಲಿ ನಾಗ ವಾಸ ಮಾಡುವ ಸ್ಥಳವನ್ನೇ ಮನುಷ್ಯ ತನ್ನ ವಾಸದಂತೆ ಮಾಡುತ್ತಿದ್ದಾನೆ. ಇಲ್ಲಿ ಯಾವ ದಿಟ ನಾಗನೂ ಬದುಕುಳಿಯಲು ಸಾಧ್ಯವಿಲ್ಲ. ಬಸವಣ್ಣನವರು ದಿಟ ನಾಗರ ಕಂಡರೆ ಎಂದರು. ಮುಂದಿನ ಕೆಲವು ವರ್ಷಗಳಲ್ಲಿ ದಿಟ ನಾಗ ಕಾಣದ ಸ್ಥಿತಿಯೂ ಉಂಟಾಗಬಹುದು. ಇದು ಕೂಡ ದೊಡ್ಡ ಅಪಾಯವನ್ನೇ ಸೃಷ್ಟಿಸುತ್ತದೆ. ನಿಸರ್ಗದಲ್ಲಿ ಒಂದು ಆಹಾರ ಸರಪಣಿ ಕ್ರಮವಿದೆ. ಒಂದು ಪ್ರಾಣಿ ಇನ್ನೊಂದಕ್ಕೆ ಆಹಾರವಾಗಿ ಈ ಸರಪಣಿ ವ್ಯವಸ್ಥೆ ಇದೆ. ನಾಗರ ಹಾವಿನ ಸಂತತಿ ಕಡಿಮೆಯಾದರೆ ಇಲಿಗಳ ಸಂಖ್ಯೆ ಹೆಚ್ಚಿ ಇಡೀ ಆರೋಗ್ಯ ವ್ಯವಸ್ಥೆ ಕೆಡಲೂಬಹುದು. ಅದರ ಕೆಟ್ಟ ಪರಿಣಾಮ ಯಾವ ರೀತಿಯಲ್ಲಿ ಆಗುತ್ತದೆ ಎಂದು ಹೇಳಲಾಗದು.

ಅನುಭಾವದ ಅನುಸಂಧಾನ

ನಾಗನ ವಾಸ ಸ್ಥಳವನ್ನು ನಾಗನ ಬನ ಎಂದು ಕರೆದರು. ವನವೇ ಬನವಾಗಿ ಕರೆಯಲ್ಪಟ್ಟಿತು. ಮಾನವ ನಾಗರಿಕತೆ ಅಷ್ಟೊಂದು ದಾಳಿ ಮಾಡದ ಕೆಲವು ನಾಗನ ಬನಗಳು ಇಂದೂ ಇವೆ. ಇಲ್ಲಿ ನೋಕಟೆ ಕಾಯಿ, ಮುಳ್ಳಿನ ಬಳ್ಳಿ, ಹಂದಿ ಬಳ್ಳಿ ಮೊದಲಾದ ಬೀಳಲುಗಳಿಂದ ಕೂಡಿದ ಸಸ್ಯಗಳು ಉಳಿದಿವೆ. ಇವು ಉಳಿದದ್ದು ನಾಗಬನ ಮತ್ತು ಭೂತದ ಬನಗಳಿಂದ ಮಾತ್ರ ಎಂದು ಹೇಳಬಹುದು. ನೋಕಟೆ ಕಾಯಿ ಹೆಬ್ಟಾವಿನ ಗಾತ್ರದ ಬೀಳನ್ನು ಹೊಂದಿರುತ್ತದೆ.

ಇದು ಶೀಘ್ರದಲ್ಲಿ ಬೆಳೆಯುವ ಸಸ್ಯ ಜಾತಿ ಅಲ್ಲ. ಹೀಗಾಗಿ ಇದನ್ನು ಕಾಣಬೇಕಾದರೆ ಹಲವು ತಲೆಮಾರುಗಳು ಬೆಳೆದಿರಬೇಕು. ಇಂತಹ ಬೀಳುಗಳು ಹಲವು ತಲೆಮಾರುಗಳ ಪೂರ್ವಜರನ್ನು ಕಂಡಿವೆ. ನಾವು ಮೂರು ತಲೆಮಾರು ಹಿಂದಿನ ಪೂರ್ವಜರನ್ನು ಕಂಡಿಲ್ಲ. ಆದರೆ ಅದಕ್ಕೂ ಹಿಂದಿನ ಪೂರ್ವಜರನ್ನು ಈ ಬೀಳಲುಗಳು ಕಂಡಿವೆ. ಪೂರ್ವಜರು ಇವುಗಳನ್ನು ಕಡಿಯದೆ ಬಿಟ್ಟ ಕಾರಣ ಇವುಗಳನ್ನು ಕಾಣುವ ಭಾಗ್ಯ ನಮ್ಮದಾಗಿದೆ. ಪರಂಪರಾಗತ ನಾಗಬನಗಳಲ್ಲಿ, ವಿಶೇಷವಾಗಿ ದಲಿತರು ಪೂಜಿಸುವ ನಾಗಬನಗಳಲ್ಲಿ ಇಂತಹ ಬೀಳುಗಳನ್ನು ನೋಡಬಹುದಾಗಿದೆ.

ಶುದ್ಧಾಶುದ್ಧತೆ ಅನುಸಂಧಾನ

ನಾಗ ಪಂಚಮಿಯಂದು ಅಭಿಷೇಕ ಮಾಡುವ ಹಾಲು, ಎಳನೀರು, ಜೇನುತುಪ್ಪ ಮೊದಲಾದವುಗಳು ಸಮುದ್ರಕ್ಕೆ ಸೇರಬೇಕೆಂಬ ಆಶಯವಿತ್ತು. ಹೀಗಾಗಬೇಕಾದರೆ ಉತ್ತಮ ಮಳೆಯಾಗುತ್ತಿರಬೇಕು. ಇತ್ತೀಚಿನ ವರ್ಷಗಳಲ್ಲಿ ಪ್ರಾಕೃತಿಕ ನಿಯಮಗಳೇ ಅದಲು ಬದಲಾಗುತ್ತಿವೆ. ಈಗ ನಾವು ಕಾಣುತ್ತಿರುವ ಹಾಲು, ಶುದ್ಧ ಹಾಲು ಆಗಿಲ್ಲ. ಶುದ್ಧವಲ್ಲ ಎಂಬ ಕಾರಣಕ್ಕೆ ಕರಾವಳಿ ಭಾಗದಲ್ಲಿ ಕೆಲವು ವರ್ಷಗಳ ಹಿಂದೆ ಪ್ಯಾಕೆಟ್‌ ಹಾಲನ್ನು ದೇವರ ಅಭಿಷೇಕಕ್ಕೆ ಬಳಸುತ್ತಿರಲಿಲ್ಲ.

ಈಗ ಪ್ಯಾಕೆಟ್‌ ಹಾಲಿನ ಅಭಿಷೇಕ ಆರಂಭಗೊಂಡಿದೆ. ಒಂದು ಕಡೆ ಮಿಶ್ರತಳಿ ಹಸುವಿನ ಸಂತತಿಯನ್ನು ಜನಪ್ರಿಯಗೊಳಿಸಿದ್ದು, ಇನ್ನೊಂದು ಕಡೆ ನೈಸರ್ಗಿಕವಲ್ಲದ ಪಶು ಆಹಾರ ಕ್ರಮ ಜಾರಿ – ಇದರಿಂದಾಗಿ ಹಾಲು ಹಿಂದಿನ ತನ್ನತನವನ್ನು ಉಳಿಸಿಕೊಂಡಿಲ್ಲ. ಜೇನುತುಪ್ಪದ ಸ್ಥಿತಿಯೂ ಹೀಗೇ ಆಗಿದೆ. ಜೇನುನೊಣಗಳಿಗೆ ಸಕ್ಕರೆ ಪಾಕದ ರುಚಿ ಕಲಿಸಿ ಅವು ನೀಡಿದ ತುಪ್ಪವನ್ನೇ ಉತ್ತಮ ಬ್ರಾಂಡ್‌ ಜೇನುತುಪ್ಪವೆಂದು ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿದ್ದೇವೆ. ಇಂತಹ ವಸ್ತುಗಳು ಸಮುದ್ರಕ್ಕೆ / ಭೂಮಿಗೆ ಸೇರಿದರೆ ಎಂಥಾ ಅನಾಹುತ ಆಗಬಹುದು ಎಂಬ ಯೋಚನೆಯನ್ನೂ ಮಾಡದ ತರಾತುರಿಯ ಬದುಕಿನಲ್ಲಿದ್ದೇವೆ.

ಸ್ವಯಂ ಜಾಗೃತಿ ಅನುಸಂಧಾನ

ನಾಗರಪಂಚಮಿ ಮಾತ್ರವಲ್ಲದೆ ಎಲ್ಲ ಬಗೆಯ ಹಬ್ಬ, ಉತ್ಸವಗಳಲ್ಲಿ ತ್ಯಾಜ್ಯದ ರಾಶಿಯೂ ಏರುತ್ತದೆ. ಆಡಳಿತಗಾರರ ಹೆಚ್ಚಿನ ಗಮನವೆಲ್ಲ ತ್ಯಾಜ್ಯ ವಿಲೇವಾರಿಗೆ ಹೋಗುತ್ತಿದೆಯೆ ವಿನಾ, ತ್ಯಾಜ್ಯ ಉತ್ಪಾದನೆಯ ಪ್ರಮಾಣ ಕಡಿಮೆ ಮಾಡುವ ಬಗೆಗೆ ಇಲ್ಲವಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ವಾಸ್ತವ ಇದುವೇ. ಪೂಜೆ ಪುರಸ್ಕಾರಗಳಂತಹ ಸಂದರ್ಭ ತ್ಯಾಜ್ಯ ಉತ್ಪಾದನೆಯನ್ನು ಶೂನ್ಯ ಸ್ಥಿತಿಗೆ ತಲುಪಿಸಲು ಸಾಧ್ಯವೆ ಎಂಬ ಬಗ್ಗೆ ನಾವೇ ಮುಂಚೂಣಿಯಲ್ಲಿ ನಿಂತು ಯೋಚಿಸಬೇಕು. ಮಾದರಿ ಕಾರ್ಯಗಳು ನಮ್ಮಿಂದಲೇ ಆರಂಭವಾಗಬೇಕು. ಇದಕ್ಕೆ ಬೇಕು ಸಮುದಾಯದ ಪ್ರಬಲ ಇಚ್ಛಾಶಕ್ತಿ.

-ಮಟಪಾಡಿ ಕುಮಾರಸ್ವಾಮಿ

 

Advertisement

Udayavani is now on Telegram. Click here to join our channel and stay updated with the latest news.

Next