ವರದಿ: ಬಸವರಾಜ ಹೊಂಗಲ್
ಧಾರವಾಡ: ಒಂದೆಡೆ ಕೊರೊನಾ ಕರಿಛಾಯೆ, ಮತ್ತೂಂದೆಡೆ ಲಾಕ್‌ಡೌನ್ ನಿಂದ ಕಂಗೆಟ್ಟಿದ್ದ ಜನರಿಗೆ ಪಂಚಮಿ ಹಬ್ಬ ಸಂಭ್ರಮಿಸುವ ತವಕ. ಬೆನ್ನ ಹಿಂದೆಯೇ 3ನೇ ಅಲೆಯ ಆತಂಕ, ಉಂಡು ಉಸುಳಿ ತಿಂದು ಮೋಜು ಮಸ್ತಿ ಮಾಡುವ ನಾಗರ ಪಂಚಮಿಗೆ ಹಳ್ಳಿಗರು ಈ ವರ್ಷ ಯಾವುದೇ ಕಟ್ಟಳೆಗಳನ್ನು ಹಾಕಿಕೊಳ್ಳದೇ ಸಂಭ್ರಮಿಸಲು ಮುಂದಾಗಿದ್ದಾರೆ.
ಹೌದು. ಪಂಚಮಿ ಹಬ್ಬ ಅಂದರೆ ಹಳ್ಳಿಗರಿಗೆ ಮೂರು ದಿನಗಳ ಹಬ್ಬ, ರೊಟ್ಟಿ ಪಂಚಮಿ, ನಾಗಪ್ಪನಿಗೆ ಹಾಲೆರೆಯುವುದು, ಗ್ರಾಮೀಣ ಕ್ರೀಡೆಗಳ ಮೋಜಿಗಾಗಿ ನಾಗ ಪಂಚಮಿ, ಖರೀದಿ ಪದಾರ್ಥಗಳನ್ನು ಭೂತಾಯಿ(ಹೊಲ)ಗೆ ಚರಗ ಚೆಲ್ಲುವುದು ಹಾಗೂ ಐದನೇ ದಿನ ವರ್ಷ ತೊಡಕು. ಹೀಗೆ ನಾಲ್ಕೈದು ದಿನಗಳ ಕಾಲ ತರಾವರಿ ಉಂಡಿ, ಉಸುಳಿ, ಕೊಬ್ಬರಿ ಬಟ್ಟಲ, ಜೋಕಾಲಿ ಜೀಗುವುದು ಸೇರಿದಂತೆ ದೇಶಿ ಮೋಜಿನಾಟಗಳೊಂದಿಗೆ ಸಂಭ್ರಮಿಸುವ ಹಬ್ಬ. ಎಂತಹ ಬರಗಾಲ ಬಿದ್ದರೂ ಸಾಲ ಮಾಡಿಯಾದರೂ ಸೈ ಪಂಚಮಿ ಹಬ್ಬವನ್ನು ಸಂಭ್ರಮಿಸುತ್ತಿದ್ದರು ಉತ್ತರ ಕರ್ನಾಟಕದ ಜನ. ಇದೀಗ ಕೊರೊನಾ ಕರಿನೆರಳಲ್ಲಿಯೇ ನಾಗರ ಪಂಚಮಿ ಆಚರಿಸುವಂತಾಗಿದೆ.
ಸ್ವಯಂ ಕಟ್ಟುಪಾಡು ಇಲ್ಲ: ಕೊರೊನಾ 2ನೇ ಅಲೆಯ ಹೊಡೆತಕ್ಕೆ ನಲುಗಿ ಹೋಗಿದ್ದ ಹಳ್ಳಿಗಳಲ್ಲಿ ಸಾಕಷ್ಟು ಜನರು ತೀರಿ ಹೋಗಿದ್ದಾರೆ. ಈಗಷ್ಟೇ ಲಾಕ್ ಡೌನ್ ತೆರವಿನಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಹಳ್ಳಿಗರಿಗೆ ಇದೀಗ ಹಬ್ಬಗಳ ಸರಣಿ ಎದೆಯ ಮೇಲೆ ಬಂದು ಕುಳಿತಿದೆ. ಪಂಚಮಿ, ಗಣೇಶ ಚತುರ್ಥಿ, ಮಹಾನವಮಿ, ಸೀಗೆ ಹುಣ್ಣಿಮೆ, ದೀಪಾವಳಿ ಹೀಗೆ ಎಲ್ಲವೂ ದೊಡ್ಡ ದೊಡ್ಡ ಹಬ್ಬಗಳಿದ್ದು, ಕೊರೊನಾ 3ನೇ ಅಲೆ ಆತಂಕ ಮಾತ್ರ ಎಲ್ಲರಲ್ಲೂ ಇದೆ. ಕಳೆದ ವರ್ಷ ಗ್ರಾಮಗಳೇ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್ ಘೋಷಣೆ ಮಾಡಿಕೊಂಡು ನಾಗರ ಪಂಚಮಿ ಹಬ್ಬ ಆಚರಿಸದಂತೆ, ಪರ ಊರುಗಳಿಂದ ಮನೆ ಹೆಣ್ಣು ಮಕ್ಕಳನ್ನು ಕರೆಯದಂತೆ, ಬುತ್ತಿ ರೊಟ್ಟಿ ಹಂಚದಂತೆ, ಎಲ್ಲರೂ ಒಂದೆಡೆ ಸೇರಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಹಬ್ಬ ಮಾಡದಂತೆ ಡಂಗೂರ ಸಾರಿದ್ದವು. ಆದರೆ ಈ ವರ್ಷ ಸದ್ಯ ಯಾವುದೇ ಹಳ್ಳಿಗಳಲ್ಲಿ ಕೊರೊನಾ ಪ್ರಕರಣಗಳು ಇದ್ದಂತಿಲ್ಲ. ಹೀಗಾಗಿ ಹಳ್ಳಿಗರ ಉತ್ಸಾಹ ಹಬ್ಬ ಪಂಚಮಿಯಲ್ಲಿ ಜೋಕಾಲಿ ಜೋರಾಗಿ ಜೀಕಲು ಸಜ್ಜಾಗಿದ್ದಾರೆ.
ಚೇತರಿಸಿಕೊಂಡ ವ್ಯಾಪಾರ: ಪಂಚಮಿ ಹಬ್ಬಕ್ಕೆ ಹೊಸ ಬಟ್ಟೆ ಕಿರಾಣಿ ಸಂತಿ, ಸಿಹಿ ತಿನಿಸುಗಳ ಮಾರಾಟ ಮಾಡುವ ಖುಷಿಯಲ್ಲಿದ್ದಾರೆ ವ್ಯಾಪಾರಸ್ಥರು. ಕಳೆದ ವರ್ಷ ಪೇಟೆ ಸಂಪೂರ್ಣ ಬಂದ್ ಆಗಿತ್ತು. ಉಂಡಿ, ಕಾರದಾನಿ, ಜೋಳದ ಅಳ್ಳು, ಸಿದ್ಧಪಡಿಸಿ ಮಾರುತ್ತಿದ್ದ ಸಣ್ಣ ಸಣ್ಣ ವ್ಯಾಪಾರಸ್ಥರು ಮತ್ತು ಅದನ್ನು ಸಿದ್ಧಪಡಿಸುತ್ತಿದ್ದ ಬಡವರು ನಷ್ಟ ಅನುಭವಿಸಿದ್ದರು. ಈ ವರ್ಷ ಲಾಕ್ ಡೌನ್ ತೆರವುಗೊಂಡಿದ್ದರಿಂದ ಕೊಂಚ ಅನುಕೂಲವಾಗಿದೆ. ವರ್ಷಕ್ಕಾಗುವಷ್ಟು ಲಾಭ ಇದೊಂದೇ ಹಬ್ಬದಲ್ಲಿ ಪಡೆಯುವ ತವಕದಲ್ಲಿದ್ದಾರೆ ವ್ಯಾಪಾರಿಗಳು. ಅಳ್ಳು, ಕೊಬ್ಬರಿ, ಬುಂದಿ, ಖಾರದಾನಿ, ತುಪ್ಪ ಸೇರಿದಂತೆ ಹಬ್ಬದ ವ್ಯಾಪಾರ ಮತ್ತು ಸಾಮಗ್ರಿ ಖರೀದಿ ಜೋರಾಗಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಉಂಡಿಗೆ ಬಳಕೆಯಾಗುವ ಬುಂದಿ, ಖಾರದಾನಿ, ಬೇಸನ್ ಲಾಡು ತುಪ್ಪ ಅತ್ಯಂತ ದುಬಾರಿಯಾಗಿದ್ದು, ಬೆಲೆ ಶೇ.30 ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 100 ರೂ.ಗೆ ಕೆ.ಜಿ. ಇದ್ದ ಬೂಂದಿ ಮತ್ತು ಸಪ್ಪ ಖಾರಾ ಈ ವರ್ಷ 180 ರೂ. ವರೆಗೆ ಏರಿಕೆಯಾಗಿದೆ.