ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಅಪಹರಣ ಮತ್ತು ಹಲ್ಲೆ ಪ್ರಕರಣ ಸಂಬಂಧ ಮಾಜಿ ರೌಡಿಶೀಟರ್ ನಾಗರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಏ.27ಕ್ಕೆ ಮುಂದೂಡಿಕೆಯಾಗಿದೆ.
ಆರೋಪಿ ನಾಗರಾಜ್ ಪರ ವಾದ ಮಂಡಿಸಿದ ವಕೀಲ ಶ್ರೀರಾಮರೆಡ್ಡಿ, “ನಾಗರಾಜ್ ವಿರುದ್ಧ ಹಾಕಿರುವುದು ಶಸ್ತ್ರಾಸ್ತ್ರ ಕಾಯ್ದೆ ಮತ್ತು “ಸ್ಪೆಸಿಫೈಡ್ ಬ್ಯಾಂಕ್ ನೋಟ್ಸ್’ ಕಾಯ್ದೆ. ಈ ಎರಡು ಕಾಯ್ದೆಯಡಿ ದಾಖಲಿಸಿದ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಬಹುದು. ನಾಗರಾಜ್ ಮನೆಯಲ್ಲಿ ಸಿಕ್ಕ ಹಣಕ್ಕೆ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಪೊಲೀಸರ ತನಿಖೆ ಸಾಧ್ಯವಿಲ್ಲ. ಆದ್ದರಿಂದ ನಾಗರಾಜ್‌ಗೆ ಜಾಮೀನು ನೀಡಬೇಕು,’ ಎಂದು ವಾದಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿವಾದ ಮಂಡಿಸಿದ ಸರ್ಕಾರಿ ಅಭಿಯೋಜಕ ಕೆಂಭಾವಿ, “ನಾಗರಾಜ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 44 ಪ್ರಕರಣಗಳಿವೆ. ಹಾಗೆಂದು ಆತನೇ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಒಪ್ಪಿಕೊಂಡಿದ್ದಾನೆ. ನಮ್ಮ ಮನೆಯಲ್ಲಿ ಹಣ ಇತ್ತು. ಅದು ರಾಜಕೀಯ ಮುಖಂಡರು, ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದೆಂದು ಹೇಳಿಕೆ ನೀಡಿದ್ದಾನೆ.
ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿ ಜಾಮೀನು ನೀಡಬಾರದು. ಒಂದು ವೇಳೆ ಜಾಮೀನು ನೀಡಿದರೆ ಆರೋಪಿ ಸಾûಾಧಾರ ನಾಶಪಡಿಸುವ ಸಾಧ್ಯತೆಯಿದೆ.ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೊಡಬೇಕೆಂದು,’ ಮನವಿ ಮಾಡಿದರು. ಸರ್ಕಾರಿ ಅಭಿಯೋಜಕ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಏ.27ಕ್ಕೆ ಮುಂದೂಡಿದರು.
ನಾಗರಾಜ್ ವಿರುದ್ಧ ದಾಖಲಾಗಿರುವ 44 ಪ್ರಕರಣಗಳಲ್ಲಿ ಆತ ದೋಷಿ ಎಂದು ಸಾಬೀತಾಗಿಲ್ಲ. ನಾಗರಾಜ್ ಮನೆ ಮೇಲೆ ದಾಳಿ ನಡೆಸಿದಾಗ ಸಿಕ್ಕ ಹಣದ ಬಗ್ಗೆ ಸಿಬಿಐ ತನಿಖೆಯಾಗಲಿ. ಇಲ್ಲವಾದರೆ ಹೈ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸುತ್ತೇವೆ.
-ಶ್ರೀರಾಮರೆಡ್ಡಿ, ನಾಗರಾಜ್ ಪರ ವಕೀಲರು