Advertisement
ಅಪಹರಣ ಪ್ರಕರಣ ಸಂಬಂಧ ಸರ್ಚ್ ವಾರಂಟ್ ಪಡೆದಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಗ್ಗೆ 5.30ರ ವೇಳೆಗೆ ಶ್ರೀರಾಂಪುರದ ನಾಗರಾಜ್‌ನ ನಾಲ್ಕು ಅಂತಸ್ತಿನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
Related Articles
Advertisement
ನಾಗರಾಜ್ ಕುಟುಂಬ ವಾಸವಿರುವ ಮನೆಯಲ್ಲಿ ಯಾವುದೇ ನಗದು ಪತ್ತೆಯಾಗಿಲ್ಲ. ಆದರೆ, ವಾಣಿಜ್ಯ ಸಂಕೀರ್ಣದ ಕಚೇರಿಯಲ್ಲಿ ಹಳೆಯ ನೋಟುಗಳು, ಬೇನಾಮಿ ಆಸ್ತಿ ಹಾಗೂ ಕೆಲ ಉದ್ಯಮಿಗಳು, ಸ್ಥಳೀಯರ ಹೆಸರಿನಲ್ಲಿರುವ ಆಸ್ತಿಗಳ ದಾಖಲೆಗಳು ಪತ್ತೆಯಾಗಿವೆ. ಅಮಾನ್ಯಗೊಂಡ 1000 ರೂ. ಹಾಗೂ 500 ರೂ. ನೋಟುಗಳನ್ನು ಪೊಲೀಸರು ಆರ್‌ಬಿಐ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ: 18ರಂದು ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿ ಕಿಶೋರ್, ಉಮೇಶ್ ಹಾಗೂ ಗಣೇಶ್ ಅವರನ್ನು ಅಪಹರಿಸಿದ ನಾಗರಾಜ್, ತನ್ನ ಸ್ನೇಹ ಸೇವಾ ಸಮಿತಿ ಕಚೇರಿಗೆ ಕರೆ ತಂದು 50 ಲಕ್ಷ ರೂ. ವಸೂಲಿ ಮಾಡಿ ಪ್ರಾಣ ಬೆದರಿಕೆಯೊಡ್ಡಿದ್ದ. ಜತೆಗೆ ಅವರ ಬಳಿಯಿದ್ದ ಉಂಗುರ, ಸರ ಕಿತ್ತುಕೊಂಡಿದ್ದ. ಆದರೆ ಈ ಸಂಬಂಧ ತತ್‌ಕ್ಷಣ ಉಮೇಶ್ ದೂರು ನೀಡಿರಲಿಲ್ಲ. ಅನಂತರ ಎ. 7ರಂದು ಹೆಣ್ಣೂರು ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಪ್ರಕರಣ ತನಿಖೆ ನಡೆಸಿದ ಪೊಲೀಸರು, ಆರೋಪಿಯ ವಿರುದ್ಧ ಸರ್ಚ್ ವಾರಂಟ್ ಪಡೆದು ಒಂದು ವಾರದ ಹಿಂದೆಯೇ ಬಂಧಿಸಲು ಯತ್ನಿಸಿದ್ದು, ಆತನ ಸಂಪೂರ್ಣ ವ್ಯವಹಾರ ಬಗ್ಗೆ ಮಾಹಿತಿ ಸಂಗ್ರಹಿಸಲು ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬಂದಿ ಮಾರುವೇಷದಲ್ಲಿ ಆತನ ಮನೆ ಮತ್ತು ಕಚೇರಿಗೆ ಭೇಟಿ ನೀಡಿದ್ದರು. ಅಲ್ಲದೇ ಮಫ್ತಿಯಲ್ಲಿ ಪೊಲೀಸ್ ಪೇದೆಗಳು ಮಾಹಿತಿ ಕಲೆ ಹಾಕಿದ್ದರು. ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿದ್ದ ನಾಗರಾಜ್ ಎ.14ರಂದು ಅಂಬೇಡ್ಕರ್ ಜಯಂತಿಗೆ ಬರುವ ಮಾಹಿತಿ ಲಭಿಸಿತು. ಅದರಂತೆ ಪೊಲೀಸರು ದಾಳಿ ನಡೆಸಿದರು. ಆದರೆ ಇದರ ಮಾಹಿತಿಯೂ ತಿಳಿದುಕೊಂಡ ನಾಗರಾಜ್ ಪೊಲೀಸರ ದಾಳಿಗೆ ಮುನ್ನವೇ ಪರಾರಿಯಾಗಿದ್ದ.
ಮನೆಯಲ್ಲಿ ಪತ್ನಿ ಹಾಗೂ ಪುತ್ರಿ ಇದ್ದು, ಪೊಲೀಸರ ದಾಳಿ ಸಂದರ್ಭದಲ್ಲಿ ಪತ್ನಿ ಲಕ್ಷ್ಮಿ ಹೈಡ್ರಾಮಾ ನಡೆಸಿದರು. ಪತಿ ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ನಾನೇನೂ ಬಚ್ಚಿಟ್ಟುಕೊಂಡಿಲ್ಲ ಎಂದು ಜೋರು ಧ್ವನಿಯಲ್ಲಿ ಉತ್ತರಿಸಿದಳು. ಜತೆಗೆ ಸಂಜೆ ನನಗೆ ವಾಯುವಿಹಾರಕ್ಕೆ ಹೋಗಬೇಕು, ಅವಕಾಶ ಮಾಡಿಕೊಡಿ. ಇಲ್ಲವಾದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುತ್ತೇನೆ ಎಂದು ಧಮ್ಕಿ ಹಾಕಿದರು ಎಂದು ಮೂಲಗಳು ತಿಳಿಸಿವೆ.
ಸಿಕ್ಕಿದ್ದು ಕೋಟಿ ಕೋಟಿ: ಉದ್ಯಮಿ ಉಮೇಶ್ ಅಪಹರಿಸಿ 50 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು, ಆತನ ಮನೆಯಲ್ಲಿ ದೊರೆತ ಕಂತೆ ಕಂತೆ ನೋಟುಗಳನ್ನು ಕಂಡು ಒಂದು ಕ್ಷಣ ಆಶ್ಚರ್ಯ ಚಕಿತರಾದರು. ಐಷಾರಾಮಿ ಕಚೇರಿ ಮತ್ತು ಮನೆಯ ಪ್ರತಿ ಕಪಾಟುಗಳಲ್ಲಿ ಆಸ್ತಿಗಳಿಗೆ ಸಂಬಂಧಿಸಿ ದಾಖಲೆಗಳು, ಹಣದ ಕಂತೆಗಳು ಪತ್ತೆಯಾಗಿವೆ. ಆತನ ಮನೆಯ ಚಪ್ಪಲಿ ಸ್ಟಾಂಡ್‌ನ ಹಿಂಭಾಗದಲ್ಲೂ ಆಸ್ತಿಯ ದಾಖಲೆಗಳನ್ನು ಅಡಗಿಸಿಟ್ಟಿದ್ದು ಪತ್ತೆಯಾಗಿದೆ.