ನಾಗಾಲ್ಯಾಂಡ್: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಬೇಕೆಂದು ಒತ್ತಾಯಿಸಿ ಸೆಪ್ಟೆಂಬರ್ 28ರಂದು ಕೋಹಿಮಾದಲ್ಲಿ ನಡೆಸಲು ಉದ್ದೇಶಿಸಿದ್ದ “ಗೋ ಮಹಾಸಭಾ” ಸಭೆಗೆ ಅನುಮತಿ ನೀಡದಿರಲು ನಾಗಾಲ್ಯಾಂಡ್ ಸರ್ಕಾರ ನಿರ್ಧರಿಸಿರುವುದಾಗಿ ಹಿರಿಯ ಸಚಿವರೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಜ್ಯೋರ್ತಿಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ಸೆ.28ರಂದು ಗೋ ಮಹಾಸಭಾ ನಡೆಸಲು ನಿಗದಿಯಾಗಿಯಾಗಿತ್ತು. ನಾಗಾಲ್ಯಾಂಡ್ ನಲ್ಲಿ ಕ್ರಿಶ್ಚಿಯನ್ ಸಮುದಾಯ ಬಹುಸಂಖ್ಯೆಯಲ್ಲಿದ್ದು, ಬಹುತೇಕರು ಇಲ್ಲಿ ಗೋ ಮಾಂಸ ಸೇವಿಸುತ್ತಾರೆ.
ಮುಖ್ಯಮಂತ್ರಿ ನೈಫಿಯ್ಯು ರಿಯೋ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಕ್ತಾರ, ಸಚಿವ ಸಿಎಲ್ ಜಾನ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಸಂವಿಧಾನದ ಆರ್ಟಿಕಲ್ 371ಎ ಪ್ರಕಾರ ನಾಗಾಸ್ ಹಾಗೂ ನಾಗಾ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ ಆಚರಿಸಲು ಅವಕಾಶ ನೀಡಿರುವ ಅಂಶವನ್ನು ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಜನರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಗೋ ಮಹಾಸಭಾ ನಡೆಸಲು ಕ್ಯಾಬಿನೆಟ್ ಅನುಮತಿ ನೀಡಿಲ್ಲ. ಅಲ್ಲದೇ ಸಂಘಟಕರು ಕೂಡಾ ನಾಗಾಲ್ಯಾಂಡ್ ಗೆ ಬಂದು ಈ ಕಾರ್ಯಕ್ರಮ ಮಾಡದಿರುವಂತೆ ಸರ್ಕಾರ ಮುಂಚಿತವಾಗಿಯೇ ತನ್ನ ನಿರ್ಧಾರ ಪ್ರಕಟಿಸಿರುವುದಾಗಿ ವರದಿ ತಿಳಿಸಿದೆ.