ಬೆಂಗಳೂರು: ಮದುವೆ ಪ್ರಸ್ತಾಪ ನಿರಾಕರಿಸಿದ ದಂತವೈದ್ಯೆಯೊಬ್ಬರ ವಿರುದ್ಧ ವ್ಯಕ್ತಿಯೊಬ್ಬ ಪ್ರತಿಕಾರ ಈಡೇರಿಸಿಕೊಳ್ಳಲು ಅತ್ಯಂತ ಕೀಳು ಮಾರ್ಗ ಅನುಸರಿಸಿದ್ದಾನೆ. ವೈದ್ಯೆಯ ಮೊಬೈಲ್ ನಂಬರ್ ಸಹಿತ ಆಕೆಯ ವಿವರನ್ನು “ಅಗತ್ಯವಿರುವವರು ಸಂಪರ್ಕಿಸಿ,” ಎಂದು ಆನ್‌ಲೈನ್ ಕ್ಲಾಸಿಫೈಡ್ ಪೋರ್ಟ್‌ಲ್‌ಗೆ ಜಾಹೀರಾತು ನೀಡಿದ್ದಾನೆ. ಹೀಗಾಗಿ ಲೈಂಗಿಕ ಕ್ರಿಯೆ ಕೋರಿ ಮಹಿಳೆಗೆ ಈ ವರೆಗೆ ನೂರಕ್ಕೂ ಅಧಿಕ ಕರೆಗಳು ಬಂದಿವೆ.
ಈ ಬೆಳವಣಿಗೆಯಿಂದ ಬೇಸತ್ತ ವೈದ್ಯೆ ಇದೀಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದು, ವಿವರವನ್ನು ವೆಬ್‌ಸೈಟ್‌ಗೆ ನೀಡಿದ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾರೆ. ವಿಚ್ಛೇದಿತರಾಗಿರುವ, ಮಧ್ಯವಯಸ್ಸಿನ ವೈದ್ಯೆಯು ನಗರದಲ್ಲಿ ತಮ್ಮ ಪೋಷಕರೊಂದಿಗೆ ನೆಲೆಸಿದ್ದಾರೆ. ವೈದ್ಯೆಯು ಮತ್ತೂಂದು ವಿವಾಹಕ್ಕಾಗಿ ತಮ್ಮ ಹೆಸರನ್ನು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನೊಂದಾಯಿಸಿಕೊಂಡು, ವರನ ಹುಡುಕಾಟದಲ್ಲಿದ್ದರು.
ಇತ್ತೀಚೆಗೆ ವ್ಯಕ್ತಿಯೊಬ್ಬ ವೆಬ್‌ಸೈಟ್‌ನಲ್ಲಿದ್ದ ವೈದ್ಯೆಯ ಸಂಖ್ಯೆಗೆ ಕರೆ ಮಾಡಿ ತನ್ನ ವಿವರ ತಿಳಿಸಿದ್ದ. ಈ ವೇಳೆ ಆತನ ವೃತ್ತಿ, ಶಿಕ್ಷಣ ಸೇರಿದಂತೆ ಇತರೆ ವಿವರಗಳ ಬಗ್ಗೆ ವೈದ್ಯೆ ವಿಚಾರಿಸಿದ್ದರು. ಜ.1ರಂದು ವೈದ್ಯೆಗೆ ಕರೆ ಮಾಡಿದ ಆ ವ್ಯಕ್ತಿ ತನ್ನ ಬಗ್ಗೆ ಆಸಕ್ತಿ ಇದೆಯೇ? ಅಥವಾ ಇಲ್ಲವೋ ಎಂಬುದನ್ನು ಪ್ರಶ್ನಿಸಿದ್ದ. ತನ್ನ ಪೋಷಕರೊಂದಿಗೆ ಚರ್ಚಿಸಿದ್ದ ವೈದ್ಯೆಯು ವ್ಯಕ್ತಿಯ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದರು. ಈ ಬಗ್ಗೆ ವ್ಯಕ್ತಿಗೆ ಸ್ಪಷ್ಟವಾಗಿ ತಿಳಿಸಿದ್ದರು.
ಮದುವೆ ನಿರಾಕರಿಸಿದ ವೈದ್ಯೆಗೆ ವ್ಯಕ್ತಿಯು, ನಾವಿಬ್ಬರೂ ಸ್ನೇಹಿತರಾಗಿ ಮುಂದುವರಿಯೋಣ ಎಂದು ಹೇಳಿದ್ದ. ಈ ಬಗ್ಗೆ ವೈದ್ಯೆಯು ಸ್ಪಷ್ಟನೆ ಕೇಳಿದ್ದಾರೆ. ಆಗ ವ್ಯಕ್ತಿಯು ವೈದ್ಯೆಯನ್ನು ಲೈಂಗಿಕ ಸಂಪರ್ಕಕ್ಕೆ ಆಹ್ವಾನಿಸಿದ್ದ. ಇದರಿಂದ ಕೆರಳಿದ ವೈದ್ಯೆಯು ಆತನಿಗೆ ಬೈದು ಮತ್ತೂಮ್ಮೆ ಕರೆಮಾಡದಂತೆ ಎಚ್ಚರಿಕೆ ನೀಡಿದ್ದರು. ಇದಾದ ನಂತರವೂ ವೈದ್ಯೆಗೆ ಕರೆ ಮಾಡಿ ಕಿರುಕುಳ ನೀಡಲಾರಂಭಿಸಿದ್ದ ವ್ಯಕ್ತಿ, ತನ್ನ ಪ್ರಸ್ತಾಪ ಒಪ್ಪಿಕೊಳ್ಳುವುಂತೆಯೂ, ಇಲ್ಲವೇ ತನ್ನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುವಂತೆಯೂ ಕೋರಿದ್ದ ಎನ್ನಲಾಗಿದೆ. ಕೊನೆಗೆ ವೈದ್ಯೆ ತಾನು ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದರು.
ಹೀಗಿರುವಾಗಲೇ ವೈದ್ಯೆಯ ವಿವರವನ್ನು “ಲೈಂಗಿಕ ಸಂಪರ್ಕಕಕ್ಕೆ ಅಗತ್ಯವಿರುವವರು ಸಂಪರ್ಕಿಸಿ,” ಎಂದು ಆನ್‌ಲೈನ್ ಪೋರ್ಟಲ್‌ಗೆ ಆತ ಜಾಹಿರಾತು ನೀಡಿದ್ದಾನೆ. ಹೀಗಾಗಿ ಜನವರಿ ಮೊದಲ ವಾರದಿಂದ ಈ ವರೆಗೆ ವೈದ್ಯೆಯು ಲೈಂಗಿಕ ಕೋರಿಕೆಯ ಸರಿಸುಮಾರು 100ಕ್ಕೂ ಹೆಚ್ಚು ಕರೆಗಳನ್ನು ಎದುರಿಸಿದ್ದಾರೆ. ಕರೆ ಮಾಡಿದವರಲ್ಲಿ ಕೆಲವೊಬ್ಬರು ನಮಗೆ ವ್ಯಕ್ತಿಯೊಬ್ಬ ಈ ಸಂಖ್ಯೆ ನೀಡಿದ ಎಂದು ಹೇಳಿದರೆ, ಮತ್ತೂ ಒಂದಷ್ಟು ಜನ ಆನ್‌ಲೈನ್ ಪೋರ್ಟಲ್‌ನಲ್ಲಿ ನಿಮ್ಮ ಸಂಖ್ಯೆ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.
ಇದರಿಂದ ರೋಸಿಹೋದ ವೈದ್ಯೆಯು ಸದ್ಯ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ಕೈಗೆತ್ತಿಕೊಂಡಿರುವ ಪೊಲೀಸರು ಜಾಹೀರಾತನ್ನು ಪ್ರದರ್ಶಿಸದಂತೆ ಪೋರ್ಟಲ್‌ಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಜಾಹೀರಾತು ನೀಡಿದವರ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ ಎಂದಿದ್ದಾರೆ. ಒಂದು ವೇಳೆ ಮಹಿಳೆ ಹೇಳಿದ ವ್ಯಕ್ತಿಯೇ ಈ ರೀತಿಯ ಜಾಹೀರಾತು ನೀಡಿದ್ದೇ ಆದರೆ, ಆತನ್ನನ್ನು ಖಂಡಿತವಾಗಿಯೂ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.