Advertisement

ರಂಗಭೂಮಿಯ ಭೀಷ್ಮ, ನಾಡೋಜ ಏಣಗಿ ಬಾಳಪ್ಪ ಇನ್ನಿಲ್ಲ 

10:08 AM Aug 18, 2017 | |

ಬೆಳಗಾವಿ: ಶತಾಯುಷಿ, ಹಿರಿಯ ರಂಗ ಕಾಲಾವಿದ ಏಣಗಿ ಬಾಳಪ್ಪ ಅವರು ಸವದತ್ತಿಯ ಸ್ವಗೃಹದಲ್ಲಿ  ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.ಅವರಿಗೆ 103 ವರ್ಷ ವಯಸ್ಸಾಗಿತ್ತು.

Advertisement

ವಾರ್ಧಕ್ಯದಿಂದ ಬಳಲುತ್ತಿದ್ದ ಅವರು ವರ್ಷದಿಂದ ಹಾಸಿಗೆ ಹಿಡಿದಿದ್ದು, 2 ದಿನಗಳ ಹಿಂದೆ ಕೋಮಾಕ್ಕೆ ಜಾರಿದ್ದರು . 

ಬಾಳಪ್ಪ ಏಣಗಿಯ ಒಕ್ಕಲುತನದ ಲೋಕುರ ಮನೆತನದ  ಕುಟುಂಬ  ಕರಿಬಸಪ್ಪ ಮತ್ತು ಬಾಳಮ್ಮನವರ ಮಗನಾಗಿ 1914ರಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಬಾಳಪ್ಪ  ಹಣದ ಕೊರತೆಯಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೆ  ಬೇಸಾಯ ಹಾಗೂ ಪಶುಪಾಲನೆ ಮಾಡಿಕೊಂಡಿದ್ದರು. ಹಳ್ಳಿಯ ಬಯಲಾಟ,ದೊಡ್ಡಾಟದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಅವರು  ಲವ  ಕುಶ ನಾಟಕ ನೋಡಿದ ಮೇಲೆ ರಂಗ ಭೂಮಿಯತ್ತ ಆಕರ್ಷಿತರಾದರು.

ಸಣ್ಣ ವಯಸ್ಸಿನಲ್ಲಿ ಊರಿನ ಭಜನಾ ಮಂಡಳಿಯಲ್ಲಿ ಹಾಡುತ್ತಿದ್ದರು.ಇದನ್ನು ಗಮನಿಸಿ  ಗುರುಸಿದ್ದಯ್ಯ ಎಂಬುವವರು ಮೊತ್ತಮೊದಲಿಗೆ ಇವರನ್ನು ‘ಲವ ಕುಶ’ ನಾಟಕದಲ್ಲಿ ಲವನ ಪಾತ್ರದ ಮೂಲಕ ರಂಗ ಪ್ರವೇಶ ಮಾಡಿಸಿದ್ದರು. ಆಕರ್ಷಣೀಯ ಮೈಕಟ್ಟು,ಸುಮಧುರ ಕಂಠದವನ್ನೂ ಹೊಂದಿದ್ದ ಬಾಳಪ್ಪನವರು ಪಾತ್ರಗಳಿಗೆ ಹೆಚ್ಚುಗಾರಿಕೆ ನೀಡಿದರು.  

10ನೆಯ ತರಗತಿಯಲ್ಲಿ ಓದುತ್ತಿರುವಾಗಲೇ ರಂಗಭೂಮಿ ಪ್ರವೇಶಿಸಿದ ಅವರು ಸ್ತ್ರೀ ಪಾತ್ರಗಳ ಮೂಲಕವೂ ಜನಜನಿತರಾದರಲ್ಲದೆ ಅಪಾರ ಖ್ಯಾತಿಯನ್ನು ಪಡೆದರು. ‘ಕಿತ್ತೂರು ರುದ್ರಮ್ಮ’ ನಾಟಕದ ರುದ್ರಮ್ಮನ ಪಾತ್ರ ಇವರ ಮೊಟ್ಟಮೊದಲ ಸ್ರೀಪಾತ್ರ. ಚಿಕ್ಕೋಡಿ ಸಿದ್ಧಲಿಂಗ ಸ್ವಾಮೀಜಿಯವರ ಕಂಪೆನಿಯ ಮಹಾನಂಜ ನಾಟಕದಲ್ಲಿ  ಪ್ರಹ್ಲಾದನಾಗಿ ಮನೋಜ್ಞ ಅಭಿನಯ ನೀಡಿದ್ದರು, ರಂಗ ಭೂಮಿಯ ದಾಖಲೆಯಾಗಿತ್ತು. 

Advertisement

 ಕೌಸಲ್ಯೆಯ ಪಾತ್ರದಲ್ಲೂ ಬಹಳ ಯಶಸ್ಸನ್ನು ಕಂಡ ಅವರು  ಕಂಪೆನಿ ಸ್ಥಗಿತಗೊಂಡ ಬಳಿಕ  ‘ಅಬ್ಬಿಗೇರಿ ಕಂಪೆನಿ’ಯನ್ನು ಸೇರಿಕೊಂಡರು. ಅಲ್ಲಿ ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದ ‘ಕಿತ್ತೂರು ರಾಣಿ ಚೆನ್ನಮ್ಮ ನಾಟಕ’ ಬ್ರಿಟಿಷ್ ಸರಕಾರದ ವಿರೋಧದಿಂದ ಲೈಸೆನ್ಸ್ ಕಳೆದುಕೊಂಡು ಕಂಪೆನಿ ನಿಂತಿತು. ಊರಿಗೆ ವಾಪಾಸಾಗುವ ಮನಸ್ಸಿಲ್ಲದ ಬಾಳಪ್ಪ  ಅವರು  ಸಿದ್ಧಲಿಂಗಸ್ವಾಮಿಗಳು  ನಡೆಸುತ್ತಿದ್ದ ಮತ್ತೊಂದು ‘ಮಾರಿಕಾಂಬಾ ನಾಟಕ ಮಂಡಳಿ’ಗೆ  ಸೇರಿಕೊಂಡರು. 

ಹಲವು ವಿಡಂಬನಾ ನಾಟಕಗಳಲ್ಲಿ ನಟಿಸಿದ್ದ ಬಾಳಪ್ಪ ಅವರು ಬಸವೇಶ್ವರ ಪಾತ್ರದ ಮೂಲಕ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು. ಕನ್ನಡ ಚಿತ್ರಗಳಲ್ಲೂ ನಟಿಸಿದ್ದ ಬಾಳಪ್ಪ ಅವರು ಶಿವರಾಜ್‌ ಕುಮಾರ್‌ ಅಭಿನಯಿಸಿದ್ದ ಗಡಿ ಬಿಡಿ ಕೃಷ್ಣ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. 

ನಾಡೋಜ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನಗಳು ಬಾಳಪ್ಪ ಅವರಿಗೆ ಸಂದಿವೆ. 

ಬಾಳಪ್ಪ ನಿಧನಕ್ಕೆ ರಂಗಭೂಮಿಯ ಅನೇಕ ದಿಗ್ಗಜರು, ಸಿನಿ ರಂಗ ಮತ್ತು ರಾಜಕೀಯ ರಂಗದ ಗಣ್ಯರು  ಸಂತಾಪ ಸೂಚಿಸಿದ್ದಾರೆ. 

ಇವರ ಉತ್ತರಾಧಿಕಾರಿ ಎಂದು ಬಿಂಬಿತವಾಗಿದ್ದ ಪುತ್ರ ರಂಗ ನಟ, ನಿರ್ದೇಶಕ ಏಣಗಿ ನಟರಾಜ್‌ ಅವರು ಈಗಾಗಲೇ ವಿಧಿವಶರಾಗಿದ್ದಾರೆ. 

ಕನ್ನಡ ಪರ ನಿಲುವು ಹೊಂದಿದ್ದ  ಬಾಳಪ್ಪ ಅವರು ಸಮಾಜಮುಖೀ ಕಾರ್ಯಗಳಿಂದ ಮನೆ ಮಾತಾಗಿದ್ದರು. 

ಏಣಗಿ ಗ್ರಾಮದಲ್ಲಿ ನಾಳೆ 11 ಗಂಟೆಯ ವೇಳೆಗೆ ಸ್ವಗೃಹದ ಬಳಿ ಅಂತ್ಯಕ್ರಿಯೆ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next