ಕಲಬುರಗಿ: ನಾಡೋಜ, ಖ್ಯಾತ ಚಿತ್ರಕಲಾವಿದ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಜೆ.ಎಸ್.
ಖಂಡೇರಾವ್ ಅವರಿಗೆ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಜೀವಮಾನದ ಸಾಧನೆಗಾಗಿ ಮುಂಬೈನದ ಬಾಂಬೆ ಆರ್ಟ್ ಸಂಸ್ಥೆ ನೀಡುವ ಕಲಾಕ್ಷೇತ್ರದ ಅಪ್ರತಿಮ “ರೂಪಧರ’ ಪ್ರಶಸ್ತಿಯನ್ನು ಮುಂಬೈನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಕಲಾಕ್ಷೇತ್ರದ ದೊಡ್ಡ ಸಂಸ್ಥೆಯಾಗಿರುವ ಬಾಂಬೆ ಆರ್ಟ್ ಸಂಸ್ಥೆಯು ನೀಡುವ ಅತ್ಯುನ್ನತ ರೂಪಧರ ಪ್ರಶಸ್ತಿ ಯನ್ನು ಮುಂಬೈನ ದೇಶದ ಸುಪ್ರಸಿದ್ದ ಜಹಾಂಗೀರ ಆರ್ಟ್ ಗ್ಯಾಲರಿಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಡಾ| ಖಂಡೇರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು.
ಮಹಾರಾಷ್ಟ್ರದ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಸಚಿವ ವಿನೋದ್ಜಿತಾವಡೆ ಅವರು ಖಂಡೇರಾವ್ ಅವರಿಗೆ ಪ್ರಶಸ್ತಿ ಪ್ರದಾನಗೈದು, ಕಲಾ ಕ್ಷೇತ್ರದ ದೇಶದ ಅತ್ಯುನ್ನತ ಸಂಸ್ಥೆಯ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯದ ಖ್ಯಾತ ಅಂತಾರಾಷ್ಟ್ರೀಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಬಹಳ ಸಂತಸ ತರುತ್ತಿದೆ. ಬಾಂಬೆ ಆರ್ಟ್ ಸಂಸ್ಥೆಯ ಹೆಸರು ಇನ್ನೂ ಎತ್ತರಕ್ಕೆ ಬೆಳೆಯಲಿ. ಇದಕ್ಕೆ ತಮ್ಮ ಸಹಕಾರವಿದೆ ಎಂದು ಹೇಳಿದರು.
ಬಾಂಬೆ ಆರ್ಟ್ ಸಂಸ್ಥೆಯ 126ನೇ ಅಖೀಲ ಭಾರತ ವಾರ್ಷಿಕ ಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಖಂಡೇರಾವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಮನೋಜ ಜೋಶಿ, ಪದ್ಮಶ್ರೀ ಸುಧಾಕರ ಒಲ್ವೆ, ಪ್ರೋ| ನರೇಂದ್ರ ವಿಚಾರೆ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.
ಆರ್ಟ್ ಸಂಸ್ಥೆಯ ಅಧ್ಯಕ್ಷ ವಾಸುದೇವ ಕಾಮತ್, ಚೇರ್ಮನ್ ಅನಿಲ ನಾಯ್ಕ, ಗೌರವ ಕಾರ್ಯದರ್ಶಿ ಚಂದ್ರಜೀತ ಯಾದವ್ ಇದ್ದರು. ಡಾ| ಜೆ.ಎಸ್. ಖಂಡೇ ರಾವ್ ಅವರು ಚಿತ್ರಕಲೆಯು ರಾಷ್ಟ್ರೀಯ ಗಮನ ಸೆಳೆದಿದ್ದಲ್ಲದೇ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿ ಕಲಾಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಸೇರಿದಂತೆ ಹಲವಾರು ಪ್ರಶಸ್ತಿಗಳು ಖಂಡೇರಾವ್ ಅವರಿಗೆ ದೊರಕಿವೆ. ಈಗ ಮುಕುಟ ಎನ್ನುವಂತೆ ಬಾಂಬೆ ಆರ್ಟ್ ಸಂಸ್ಥೆ ನೀಡುವ ಕಲಾಕ್ಷೇತ್ರದ ಅಪ್ರಮತಿಮ “ರೂಪಧರ’ ಪ್ರಶಸ್ತಿ ದೊರಕಿರುವುದು ಹೈದ್ರಾಬಾದ್ ಕರ್ನಾಟಕ ಭಾಗಕ್ಕ ಹೆಮ್ಮೆ ಮೂಡಿಸಿದೆ.