ಅವರಿಬ್ಬರ ಸಂಭಾಷಣೆ ಹೀಗೆ ನಡೆಯಿತು:
ನಾಲ್ವಡಿ: ಯಾರ ಬಳಿ ಓದುತ್ತಿದ್ದೀರಿ?
ದ್ಯಾವಣ್ಣ: ಗುರುಗಳ ಬಳಿ ಸ್ವಾಮಿ.
ನಾಲ್ವಡಿ: ಗುರುಗಳು ಹೌದು, ಯಾರು?
ದ್ಯಾವಣ್ಣ: ಕ್ಷಮಿಸಬೇಕು ಸ್ವಾಮಿ. ಗುರುಗಳ ಹೆಸರು ಹೇಳಬಾರದೆಂದು ಶಾಸ್ತ್ರದಲ್ಲಿ ಇದೆಯಂತೆ (ಗಂಡನ ಹೆಸರು ಹೇಳಬಾರದೆಂಬ ವಾಡಿಕೆ ಇರುವಂತೆ).
ಗುರುಗಳು ಯಾರೆಂಬುದನ್ನು ಒಡೆಯರ್ ಪತ್ತೆ ಹಚ್ಚಿದರು. ಪಾಠ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿದುಕೊಂಡರು.
ನಾಲ್ವಡಿ: ಸಂಬಳ ಎಷ್ಟು? ಜೀವನಕ್ಕೆ ಸಾಕೆ?
ದ್ಯಾವಣ್ಣ: ತಿಂಗಳಿಗೆ ಮೂರು ರೂ. ನನ್ನ ತಾಯಿ, ಹೆಂಡತಿ ಎರಡು ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕ್ರಮವಾಗಿ ನಾಲ್ಕು, ಮೂರು ರೂ. ಬರುತ್ತಿದೆ. ಸ್ವಂತ ಮನೆ ಇದೆ. ಸಾಲ ಇಲ್ಲ. ಬರುವ ಆದಾಯ ಸಾಕು. ನನಗೆ ಯಾವುದೇ ಸಮಸ್ಯೆ ಇಲ್ಲ.
Advertisement
ಕೇಡು ಬಗೆಯದ, ಸುಳ್ಳನ್ನೂ ಆಡದ ದ್ಯಾವಣ್ಣರ ಪ್ರಾಮಾಣಿಕತೆ ನಾಲ್ವಡಿಯವರಿಗೆ ಮೆಚ್ಚುಗೆ ಆಯಿತು. ಅಧಿಕಾರಿಯನ್ನು ಬರಲು ಹೇಳಿ 500 ರೂ. ಬಹುಮಾನ ಪ್ರಕಟಿಸಿದರು. “ಪ್ರಭುಗಳು ಮನ್ನಿಸಬೇಕು. ಇಷ್ಟು ದುಡ್ಡು ತೆಗೆದು ಕೊಂಡು ನಾನೇನು ಮಾಡಲಿ? ಇಷ್ಟು ಹಣ ಇಟ್ಟುಕೊಳ್ಳಲು ಮನೆಯಲ್ಲಿ ಸ್ಥಳವಿಲ್ಲ, ಭದ್ರತೆ ಇಲ್ಲ. ಹಣ ಅರಮನೆಯಲ್ಲೇ ಇರಲಿ’ ಎಂದು ದ್ಯಾವಣ್ಣ ಬೇಡಿಕೊಂಡರು.
Related Articles
Advertisement
ದ್ಯಾವಣ್ಣರ ಮನಃಸ್ಥಿತಿಯನ್ನು ಮತ್ತು ಈಗ ನಾವು ಆರ್ಥಿಕ ಲಾಭವೂ ಸೇರಿದಂತೆ ಎಲ್ಲ ಬಗೆಯ ಸೌಲಭ್ಯ/ಲಾಭ ಪಡೆಯಲು ಮಾಡುತ್ತಿರುವ ಪ್ರಯತ್ನವನ್ನು ತುಲನೆ ಮಾಡಬಹುದು. ಆಗ ಸಾಲ ಇಲ್ಲದವ ನೆಮ್ಮದಿ ಕಂಡಿದ್ದರೆ, ಈಗ ಸಾಲದಲ್ಲಿರುವ ನಾವು “ಸುಖಪ್ರಚೋದಕ’ಗಳಲ್ಲಿ ನೆಮ್ಮದಿ ಹುಡುಕುತ್ತಿದ್ದೇವೆ. ಈ ಸಾಲ ತೀರಿಸಲು ಆದಾಯ ಹೆಚ್ಚಳವೇ ಮಾರ್ಗ, ಅದಕ್ಕೆ ಯಾವ್ಯಾವುದೋ ಅಡ್ಡ ಮಾರ್ಗಗಳು ಇವೆ. ಪ್ರಾಥಮಿಕ ಶಾಲೆಯಿಂದ ವಿ.ವಿ.ವರೆಗಿನ ಶಿಕ್ಷಕರ ವೇತನದ ಅಗಾಧ ಅಂತರಗಳು, ಒಂದೇ ಕಾಲೇಜಿನ ಸಿಬಂದಿಯ ವೇತನ ತಾರತಮ್ಯಗಳು ಕಾನೂನುಬದ್ಧವಾಗಿಯೇ ನಡೆಯುತ್ತಿವೆ. ಎಷ್ಟೋ ಕಡೆ ಆಡಳಿತಗಾರರೇ ಕೈಕೆಳಗಿನವರನ್ನು ಮತ್ತು ಎಷ್ಟೋ ಕಡೆ ಕೈಕೆಳಗಿನವರು ಆಡಳಿತಗಾರರನ್ನೇ ಭ್ರಷ್ಟಾಚಾರಕ್ಕೆ ಎಳೆಯುವಂತೆ ಮಾಡುತ್ತಾರೆ.
ದ್ಯಾವಣ್ಣರಿಗೆ ಹಣ ಮಂಜೂರು ಮಾಡಿದವರು ದೊರೆಗಳು. ಈ ಸ್ಥಾನದಲ್ಲಿ ಅನೇಕಾನೇಕರಿದ್ದಾರೆ. ಫಲಾನುಭವಿಗಳೂ ತರಹೇವಾರಿ ಮಾರ್ಗಗಳನ್ನು ಅನುಸರಿಸುತ್ತಾರೆ. ಇದಕ್ಕಾಗಿ ಸಂಖ್ಯಾಬಲ, ತೋಳ್ಬಲದ ಪ್ರದರ್ಶನ, ಪ್ರಭಾವ ಬೀರುವುದೆಲ್ಲ ನಡೆಯುತ್ತಲೇ ಇರುತ್ತವೆ. ನಮ್ಮ ಮಾನದಂಡದಲ್ಲಿ ಇಲ್ಲಿಟರೇಟ್ ಎನಿಸಿದ ದ್ಯಾವಣ್ಣ ಎಲ್ಲಿ? ಲಿಟರೇಟ್ ಆದ ನಾವೆಲ್ಲಿ? ಅವರ ಮಾನಸಿಕ ಸುಖ ಎಲ್ಲಿ? ನಮ್ಮ ಮಾನಸಿಕ ಸುಖ ಎಲ್ಲಿ? ಆ ಆಡಳಿತಗಾರರು ಎಲ್ಲಿ? ಈಗಿನ ಆಡಳಿತಗಾರರು ಎಲ್ಲಿ?ಹೆಚ್ಚು ಹೆಚ್ಚು ಸೌಲಭ್ಯ ಪಡೆದುಕೊಂಡರೆ ಅದು ಯಾರಿಗೋ ಸಿಗಬೇಕಾದುದನ್ನು ತಪ್ಪಿಸಿದಂತೆ (ಕಳ್ಳತನ) ಮತ್ತು ಸೀಮಿತ ಸಂಪನ್ಮೂಲ ಎಲ್ಲ ಜೀವಿಗಳಿಗೂ ಹಂಚಿ ಹೋಗಬೇಕೆಂಬ ಕಾರಣದಿಂದ ಕನಿಷ್ಠ ಅಗತ್ಯಗಳನ್ನು ಮಾತ್ರ ನಿಸರ್ಗದಿಂದ ಪಡೆಯಲು ಧರ್ಮಶಾಸ್ತ್ರಗಳೂ ಹೇಳುತ್ತವೆ. ಗಾಂಧೀಜಿ, ವಿನೋಬಾ ಭಾವೆ, ಲಾಲ್‌ಬಹದ್ದೂರ್ ಶಾಸ್ತ್ರೀ, ಗುಲ್ಜಾರಿಲಾಲ್ ನಂದಾರಂತಹವರು ಹೀಗೆ ಹೇಳಿದಂತೆ ನಡೆದುಕೊಂಡಿದ್ದರು. ನಾವೀಗ ಅವರ ಉತ್ತರಾಧಿಕಾರಿಗಳು, ನಿಜಜೀವನದಲ್ಲಿ ಅಲ್ಲ. – ಮಟಪಾಡಿ ಕುಮಾರಸ್ವಾಮಿ