Advertisement

ನಡಾಲ್‌ ಗೆಲುವಿನ ಆಟ

03:45 AM Jan 18, 2017 | |

ಮೆಲ್ಬರ್ನ್: ಜರ್ಮನಿಯ ಫ್ಲೋರಿಯಾನ್‌ ಮೇಯರ್‌ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿದ ರಫೆಲ್‌ ನಡಾಲ್‌ “ಆಸ್ಟ್ರೇಲಿಯನ್‌ ಓಪನ್‌’ ಟೆನಿಸ್‌ ಪಂದ್ಯಾವಳಿಯ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಇವರೊಂದಿಗೆ ಕೆನಡಾದ ಬಲಾಡ್ಯ ಆಟಗಾರ ಮಿಲೋಸ್‌ ರಾನಿಕ್‌, ಸ್ಪೇನಿನ ಡೇವಿಡ್‌ ಫೆರರ್‌, ಬೆಲ್ಜಿಯಂನ ಡೇವಿಡ್‌ ಗೊಫಿನ್‌, ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌, ಫ್ರಾನ್ಸ್‌ನ ಗೇಲ್‌ ಮಾನ್‌ಫಿಲ್ಸ್‌ ಕೂಡ ಪುರುಷರ ಸಿಂಗಲ್ಸ್‌ ವಿಭಾಗದಿಂದ ಮೊದಲ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

14 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ರಫೆಲ್‌ ನಡಾಲ್‌ ಎಂದಿನ ಶಕ್ತಿಶಾಲಿ ಹೊಡೆತಗಳ ಮೂಲಕ ಗಮನ ಸೆಳೆದರು. ಕಳೆದ ವರ್ಷ ಗಾಯಾಳಾಗಿ ಬಹುತೇಕ ಆವಧಿಯನ್ನು ವಿಶ್ರಾಂತಿಯಲ್ಲಿ ಕಳೆದಿದ್ದ ನಡಾಲ್‌, ಈ ಆಟದ ಮೂಲಕ ತಮ್ಮ ದೈಹಿಕ ಕ್ಷಮತೆಯನ್ನೂ ಸಾಬೀತುಪಡಿಸಿದರು. 49ನೇ ರ್‍ಯಾಂಕಿಂಗ್‌ನ ಮೇಯರ್‌ ವಿರುದ್ಧ ನಡಾಲ್‌ ಗೆಲುವಿನ ಅಂತರ 6-3, 6-4, 6-4. ದ್ವಿತೀಯ ಸುತ್ತಿನಲ್ಲಿ ಅವರು ಸೈಪ್ರಸ್‌ನ ಮಾರ್ಕೋಸ್‌ ಬಗ್ಧಾಟಿಸ್‌ ವಿರುದ್ಧ ಸೆಣಸಲಿದ್ದಾರೆ. ಕಳೆದ ವರ್ಷ ಈ ಕೂಟದ ಮೊದಲ ಸುತ್ತಿನಲ್ಲೇ ಅವರು ಫೆರ್ನಾಂಡೊ ವೆರ್ದಸ್ಕೊ ಕೈಯಲ್ಲಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದರು.

2009ರಲ್ಲಿ ರೋಜರ್‌ ಫೆಡರರ್‌ ಅವ ರನ್ನು ಮಣಿಸುವ ಮೂಲಕ ನಡಾಲ್‌ ಮೊದಲ ಹಾಗೂ ಏಕೈಕ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು.

ರಾನಿಕ್‌: ರಭಸದ ಆಟ
ಕಳೆದ ವರ್ಷದ ಸೆಮಿಫೈನಲಿಸ್ಟ್‌ ಮಿಲೋಸ್‌ ರಾನಿಕ್‌ ಕೇವಲ 93 ನಿಮಿಷ ಗಳಲ್ಲಿ ಜರ್ಮನಿಯ ಮತ್ತೂಬ್ಬ ಆಟಗಾರ ಡಸ್ಟಿನ್‌ ಬ್ರೌನ್‌ ಅವರನ್ನು ಮನೆಗೆ ಅಟ್ಟಿದರು. ರಾನಿಕ್‌ 6-3, 6-4, 6-2 ಅಂತರದ ಜಯ ಸಾಧಿಸಿದರು. ವಿಂಬಲ್ಡನ್‌ ರನ್ನರ್ ಅಪ್‌ ಆಗಿರುವ ಕೆನಡಿಯನ್‌ ಟೆನಿಸಿಗ ಇನ್ನು ಲಕ್ಸೆಂಬರ್ಗ್‌ನ ಗಿಲ್ಲೆಸ್‌ ಮುಲ್ಲರ್‌ ವಿರುದ್ಧ ಆಡಲಿದ್ದಾರೆ. 

ಡಿಮಿಟ್ರೋವ್‌: 5 ಸೆಟ್‌ ಹೋರಾಟ
11ನೇ ಶ್ರೇಯಾಂಕದ ಗ್ರೆಗರ್‌ ಡಿಮಿ ಟ್ರೋವ್‌ 5 ಸೆಟ್‌ಗಳ ಕಾದಾಟದ ಬಳಿಕ ಅಮೆರಿಕದ ರೀಲಿ ಒಪೆಲ್ಕ ಅವರನ್ನು 6-4, 4-6, 6-2, 4-6, 6-4 ಆಂತರದಿಂದ ಸೋಲಿಸಿ ನಿಟ್ಟುಸಿರೆಳೆದರು.

Advertisement

ಸ್ಪೇನಿನ 21ನೇ ಶ್ರೇಯಾಂಕಿತ ಡೇವಿಡ್‌ ಫೆರರ್‌ ಆಸ್ಟ್ರೇಲಿಯದ ಒಮರ್‌ ಜೆಸಿಕ ಅವರನ್ನು 6-3, 6-0, 6-2 ಅಂತರದಿಂದ; ಆಸ್ಟ್ರಿಯಾದ 8ನೇ ಶ್ರೇಯಾಂಕದ ಡೊಮಿನಿಕ್‌ ಥೀಮ್‌ ಜರ್ಮನಿಯ ಜಾನ್‌ ಲೆನಾರ್ಡ್‌ ಸ್ಟಫ್ ಅವರನ್ನು 4-6, 6-4, 6-4, 6-3 ಅಂತರದಿಂದ ಪರಾಭವಗೊಳಿಸಿ ಮೊದಲ ಸುತ್ತು ದಾಟಿದರು.

ಫ್ರಾನ್ಸ್‌ನ 6ನೇ ಶ್ರೇಯಾಂಕದ ಗೇಲ್‌ ಮಾನ್‌ಫಿಲ್ಸ್‌ 6-2, 6-3, 6-2ರಿಂದ ಜೆಕ್‌ ಆಟಗಾರ ಜಿರಿ ವೆಸ್ಲಿ ಅವರಿಗೆ ಸೋಲುಣಿಸಿದರು. ಸ್ಪೇನಿನ ರಾಬರ್ಟ ಬಾಟಿಸ್ಟ ಅಗುಟ್‌ (13) ಆರ್ಜೆಂಟೀನಾದ ಗೀಡೊ ಪೆಲ್ಲ ಅವರನ್ನು 6-3, 6-1, 6-1ರಿಂದ; ಫ್ರಾನ್ಸ್‌ನ ರಿಚರ್ಡ್‌ ಗಾಸ್ಕ್ವೆಟ್‌ (18) ಆಸ್ಟ್ರೇಲಿಯದ ಬ್ಲೇಕ್‌ ಮಾಟ್‌ ಅವರನ್ನು 6-4, 6-4, 6-2ರಿಂದ ಪರಾಭವಗೊಳಿ ಸಿದರು.

ಮಂಗಳವಾರದ ಆಟದಲ್ಲಿ ಸೋಲುಂಡ ಶ್ರೇಯಾಂಕಿತ ಟೆನಿಸಿಗನೆಂದರೆ ಸ್ಪೇನಿನ ಫೆಲಿಶಿಯಾನೊ ಲೋಪೆಜ್‌ (28). ಅವರನ್ನು ಇಟಲಿಯ ಫ್ಯಾಗಿಯೊ ಫೊಗಿನಿ ಭಾರೀ ಹೋರಾಟದ ಬಳಿಕ 7-5, 6-3, 7-5ರಿಂದ ಉರುಳಿಸಿದರು.

ವೆರ್ದಸ್ಕೊ  ವಿರುದ್ಧ  ಜೊಕೋವಿಕ್‌ ಜಯ
ಕಳೆದ ವರ್ಷ ಮೊದಲ ಸುತ್ತಿನಲ್ಲೇ ರಫೆಲ್‌ ನಡಾಲ್‌ ಅವರನ್ನು ಸೋಲಿಸಿದ್ದ ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ಅವರಿಗೆ ಈ ಬಾರಿ ಇಂಥದೊಂದು ಸಾಹಸವನ್ನು ಪುನರಾವರ್ತಿಸಲಾಗಲಿಲ್ಲ. ಅವರು ಹಾಲಿ ಚಾಂಪಿಯನ್‌, ವಿಶ್ವದ ನಂ.2 ಆಟಗಾರ ನೊವಾಕ್‌ ಜೊಕೋವಿಕ್‌ ಬಲೆಗೆ ಬಿದ್ದಿದ್ದಾರೆ. ಮಂಗಳವಾರ ಸುಮಾರು 2 ಗಂಟೆ, 20 ನಿಮಿಷಗಳ ಕಾಲ ನಡೆದ ಮುಖಾಮುಖೀಯಲ್ಲಿ ಜೊಕೋವಿಕ್‌ 6-1, 7-6 (7-4), 6-2 ಅಂತರದಿಂದ ಜಯ ಸಾಧಿಸಿದರು. ದ್ವಿತೀಯ ಸೆಟ್‌ ಅನ್ನು ಟೈ-ಬ್ರೇಕರ್‌ಗೆ ಎಳೆದದ್ದೊಂದೇ ವೆರ್ದಸ್ಕೊ ಸಾಹಸವೆನಿಸಿಕೊಂಡಿತು. ಜೊಕೋವಿಕ್‌ ದ್ವಿತೀಯ ಸುತ್ತಿನಲ್ಲಿ ಉಜ್ಬೆಕಿಸ್ಥಾನದ ಡೆನಿಸ್‌ ಇಸ್ತೋಮಿನ್‌ ಅಥವಾ ಕ್ರೊವೇಶಿಯಾದ ಇವಾನ್‌ ಡೊಡಿಗ್‌ ಅವರನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next