Advertisement

ಹುಡ್ಕೋ ಅಧಿಕಾರಿಗಳ ನೀರಿಳಿಸಿದ ನಡಹಳ್ಳಿ

02:36 PM Oct 14, 2018 | |

ತಾಳಿಕೋಟೆ: ಮನೆಗಳನ್ನು ಮಾರಾಟ ಮಾಡಬೇಕಾದರೆ ಅದಕ್ಕೂ ಮೊದಲು ಲೇಔಟ್‌ನಲ್ಲಿ ಸಾರ್ವಜನಿಕ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಅದ್ಯಾವುದನ್ನು ಮಾಡದೇ ಮನೆಗಳನ್ನು ಹಂಚಿಕೆ ಮಾಡಿದ್ದೀರಿ ಎಂದು ಹುಡ್ಕೋ ಅಧಿಕಾರಿಗಳಿಗೆ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ತರಾಟೆಗೆ ತೆಗೆದುಕೊಂಡರು.

Advertisement

ಪಟ್ಟಣದ ಹುಡ್ಕೋ ನಿವಾಸಿಗಳ ಮನವಿ ಮೇರೆಗೆ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಹುಡ್ಕೋ ಅಧಿಕಾರಿಗಳ ಹಾಗೂ ಪುರಸಭೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಮನೆಗಳನ್ನು ಕಟ್ಟಿಸಿ ಅಲ್ಲಿ ನಿವಾಸಿಗಳಿಂದ ಸಂಪೂರ್ಣ ಹಣ ತುಂಬಿಸಿಕೊಂಡಿದ್ದೀರಿ. ಅಲ್ಲಿ ಜನರಿಗೆ ನೀಡಬೇಕಾದ ಯಾವ ಮೂಲ ಸೌಲಭ್ಯವೂ ಸಮರ್ಪಕವಾಗಿ ನೀಡಿಲ್ಲ. ಕನಿಷ್ಠ ಪಕ್ಷ ಕುಡಿಯುವ ನೀರಿನ ಪೈಪ್‌ಲೈನ್‌, ಬೀದಿ ದೀಪ, ಚರಂಡಿಗಳನ್ನಾದರೂ ಸರಿಯಾಗಿ ಒದಗಿಸಿದ್ದರೆ ಪುರಸಭೆಯವರು ಹಸ್ತಾಂತರ ಮಾಡಿಕೊಳ್ಳಲು ಒಪ್ಪುತ್ತಿದ್ದರು.

ಆದರೆ ಹಸ್ತಾಂತರಕ್ಕೂ ಮುಂಚೆ ಪುರಸಭೆಗೆ ಕಟ್ಟಬೇಕಾದ ಹಣವನ್ನಾದರೂ ಕಟ್ಟಿದ್ದರೆ ಹಸ್ತಾಂತರ ಪಡೆಯುತ್ತಿದ್ದರು. ಅದ್ಯಾವುದನ್ನು ಮಾಡದೇ ಪುರಸಭೆ ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತ ಸಾಗಿರುವುದು ದಾಖಲಾತಿಗಳಿಂದಲೇ ಸ್ಪಷ್ಟವಾಗಿದೆ. ಇಲ್ಲಿ ನಿವಾಸಿಗಳು ಸುಮಾರು 7 ವರ್ಷದಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ ಎಂದು ಶಾಸಕ ನಡಹಳ್ಳಿ ಅವರು ಹುಡ್ಕೋ ಕಾರ್ಯಪಾಲಕ ಅಭಿಯಂತರ ಕೆ.ಎಲ್‌. ಕುಲಕರ್ಣಿ, ಎಇಇ ದಯಾನಂದ ಮಳಶೇಖರ
ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಹುಡ್ಕೋ ನಿವಾಸಿಗಳು ಮಾತನಾಡಿ, ಪುರಸಭೆಯವರು ನೀರು ಕೊಡಲು ಮುಂದಾದರೂ ಅಲ್ಲಿ ನಿರ್ಮಿಸಿದ ಸಿಂಪಿನೊಳಗೆ ನೀರು ನಿಲ್ಲುತ್ತಿಲ್ಲ. ನೇರವಾಗಿ ಪೈಪ್‌ಲೈನ್‌ ಮೂಲಕ ನೀರು ಕೊಡಲು ಹೋದರೆ ಎಲ್ಲ ನೀರು ಸೋರಿಕೆಯಾಗುತ್ತಿದೆ. ಹುಡ್ಕೋ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಅಲ್ಲಿ ಜನರು ಇದ್ದ ಮನೆ ಬಿಟ್ಟು ಮತ್ತೂಂದೆಡೆ ಬಾಡಿಗೆ ಮನೆ ನೋಡಿಕೊಳ್ಳುತ್ತ ಸಾಗಿದ್ದಾರೆ. ಮೊದಲು ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲು ಸೂಚಿಸಿ ಎಂದು ಒತ್ತಾಯಿಸಿದರು.

Advertisement

ಕರ್ನಾಟಕ ರಾಜ್ಯ ನೀರು ಸರಬರಾಜು ಒಳಚರಂಡಿ ಮಂಡಳಿ ಅಧಿಕಾರಿ ಪಟ್ಟಣಶೆಟ್ಟಿ ಮಾತನಾಡಿ, ಈಗಾಗಲೇ ಹುಡ್ಕೋ ಅಧಿಕಾರಿಗಳು ಕಟ್ಟಿದ ದುಡ್ಡಿನಂತೆ ಪೈಪ್‌ಲೈನ್‌ ಕಾರ್ಯಗಳನ್ನು ಮಾಡಿದ್ದೇವೆ. ನೀರು ಸರಬರಾಜು, ಮೇಂಟೆನೆನ್ಸ್‌ ಇಲ್ಲದ್ದಕ್ಕೆ ಎಲ್ಲಾದರೂ ಒಂದೆರಡೂ ಕಡೆ ಕೂಡಿಸಿದ ವಾಲ್‌ಗ‌ಳು ಜಾಮ್‌ ಆಗಿರಬಹುದು ಎಂದರು. ಆಗ ಶಾಸಕ ನಡಹಳ್ಳಿ ಮಾತನಾಡಿ, ನಿಯಮ ಮೀರಿ ಹುಡ್ಕೊà ತನ್ನದಲ್ಲದ ಟೆಂಡರ್‌ ಕರೆಯುವ ಕೆಲಸ ಮಾಡಿದ್ದು ತಪ್ಪು ಎಂದು ತರಾಟೆಗೆ ತೆಗೆದುಕೊಂಡರು.

ಪುರಸಭೆ ಮುಖ್ಯಾಧಿಕಾರಿ ಎ.ಬಿ. ಕಲಾಲ್‌, ಗೃಹ ಮಂಡಳಿ ಗುಲಬರ್ಗಾದ ಕಾರ್ಯಪಾಲಕ ಅಭಿಯಂತರ ಕೆ.ಎಲ್‌. ಕುಲಕರ್ಣಿ, ಎಇಇ ದಯಾನಂದ ಮಳಶೇಖರ, ಪುರಸಭೆ ನೀರು ಸರಬರಾಜು ವಿಭಾಗದ ಶಂಕರಗೌಡ ಬಿರಾದಾರ,
ಮುಖಂಡರಾದ ವಾಸು ಹೆಬಸೂರ, ರಾಜುಗೌಡ ಗುಂಡಕನಾಳ, ಪುರಸಭಾ ಸದಸ್ಯರುಗಳಾದ ಅಣ್ಣಾಜಿ ಜಗತಾಪ, ಪ್ರಕಾಶ ಹಜೇರಿ, ಮಾನಸಿಂಗ್‌ ಕೊಕಟನೂರ, ಕಾಶೀನಾಥ ಮುರಾಳ, ನಾಗಭೂಷಣ ಸೋಂಡೂರ, ಹುಡ್ಕೋ ನಿವಾಸಿಗಳು ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next