Advertisement

ನಾಡಹಬ್ಬ ಮೈಸೂರು ದಸರಾ ನಾಳೆಯಿಂದ ಶುರು

10:17 AM Sep 20, 2017 | Team Udayavani |

ಮೈಸೂರು: ವಿಶ್ವವಿಖ್ಯಾತ ಮೈಸೂರಿನ ಚಾಮುಂಡಿಬೆಟ್ಟದಲ್ಲಿ, ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಗುರುವಾರ ಬೆಳಗ್ಗೆ 8.45ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ನಾಡೋಜ ಪ್ರೊ.ಕೆ.ಎಸ್‌ .ನಿಸಾರ್‌ ಅಹಮದ್‌ ಅವರು ದಸರಾ
ಮಹೋತ್ಸವ ಉದ್ಘಾಟಿಸಲಿದ್ದಾರೆ. ದಸರಾದ  ಪ್ರಮುಖ ಆಕರ್ಷಣೆ ಜಂಬೂಸವಾರಿಯ ಮೆರವಣಿಗೆ ಸೆ.30ರಂದು ನಡೆಯಲಿದ್ದು, ಸಂಜೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನೊಂದಿಗೆ 10 ದಿನಗಳ ದಸರಾಕ್ಕೆ ತೆರೆ ಬೀಳಲಿದೆ.

Advertisement

ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ತನ್ವೀರ್‌ಸೇs…, ಉಮಾಶ್ರೀ, ಪ್ರಿಯಾಂಕ ಖರ್ಗೆ, ರುದ್ರಪ್ಪ ಮಾನಪ್ಪ ಲಮಾಣಿ, ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ ಪಾಲ್ಗೊಳ್ಳಲಿದ್ದು, ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಅರಮನೆ  ಮುಂಭಾಗದ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಬಳಿಕ, ಈ ಸಾಲಿನ ಸಂಗೀತ ವಿದ್ವಾನ್‌ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ವಿಜಯದಶಮಿ ಮೆರವಣಿಗೆ: ಸೆ.30ರಂದು ಮಧ್ಯಾಹ್ನ 2.15ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ 4.45ಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಅರಮನೆಯ ಒಳಾವರಣದಲ್ಲಿ ಅರ್ಜುನ ಹೊತ್ತು ತರುವ ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿ ವಿಗ್ರಹಕ್ಕೆ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಲಿದ್ದಾರೆ. ಯದು ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಈ ಸಂದರ್ಭದಲ್ಲಿ ಹಾಜರಿರಲಿದ್ದಾರೆ.

ಪಂಜಿನ ಕವಾಯತು: ಅಂದು ರಾತ್ರಿ 8 ಗಂಟೆಗೆ
ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತು (ಟಾರ್ಚ್‌ ಲೈಟ್‌ ಪರೇಡ್‌) ನಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಭಾಗವಹಿಸಲಿದ್ದು, ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ಹಾಗೂ ಸಚಿವರಾದ ಡಾ. ಎಚ್‌.ಸಿ.ಮಹದೇವಪ್ಪ, ತನ್ವೀರ್‌ ಸೇs… ಈ ಸಂದರ್ಭದಲ್ಲಿ ಹಾಜರಿರಲಿದ್ದಾರೆ. ಅರಮನೆಗೆ ವಾಯುಪಡೆ ಅಧಿಕಾರಿಗಳ ಭೇಟಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ಜಂಬೂ ಸವಾರಿ ಮೆರವಣಿಗೆಯನ್ನು ಈ ಬಾರಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ ಮಾದರಿಯಲ್ಲಿ ಶಿಸ್ತುಬದ್ಧವಾಗಿ ನಡೆಸಲು ಜಿಲ್ಲಾಡಳಿತ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳು ಮಂಗಳವಾರ ಮೈಸೂರು ಅರಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರ ಕಚೇರಿ ಒಪ್ಪಿಗೆ ನೀಡಿದರೆ ವಾಯುಪಡೆ ಬ್ಯಾಂಡ್‌ ತಂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ರಾಜ್ಯದ ಇತರೆಡೆಯೂ ನವರಾತ್ರಿ ಆರಂಭ
ಬೆಂಗಳೂರು: ಶೃಂಗೇರಿ, ಕೊಲ್ಲೂರು, ಬನಶಂಕರಿ ಸೇರಿ ರಾಜ್ಯದ ಇತರ ಕ್ಷೇತ್ರಗಳಲ್ಲಿಯೂ ಗುರುವಾರದಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ. ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಶರನ್ನವ ರಾತ್ರಿ ಮಹೋತ್ಸವ ಗುರುವಾರದಿಂದ ಆರಂಭವಾಗಲಿದ್ದು, 29ರ ಶುಕ್ರವಾರ ಮಹಾನವಮಿ ನೆರವೇರಲಿದೆ. ಸೆ.30ರ ಶನಿವಾರ ವಿಜಯದಶಮಿಯಂದು ಪರಂಪ ರಾಗತ ಶೈಲಿಯ ಮಹಾರಾಜರ ಅಲಂಕಾರದಲ್ಲಿ ಚೆಲುವ ನಾರಾಯಣಸ್ವಾಮಿ ಕಂಗೊಳಿಸಲಿದ್ದಾನೆ. ಸಂಜೆ ವಿಜಯ ದಶಮಿಯ ಅಶ್ವವಾಹನೋತ್ಸವದ ಜಂಬೂಸವಾರಿ, ನಂತರ ಮಹಾಲಕ್ಷ್ಮೀ ಯದುಗಿರಿ ನಾಯಕಿ ಅಮ್ಮನವರ ಶೇಷವಾಹನೋತ್ಸವ ಎರಡೂ ಒಟ್ಟಾಗಿ ನೆರವೇರಲಿದೆ. ಇದೇ ವೇಳೆ, ಶೃಂಗೇರಿ, ಕೊಲ್ಲೂರು, ಬನಶಂಕರಿ ಸೇರಿದಂತೆ ರಾಜ್ಯದ ಎಲ್ಲಾ ದೇವಿಯ ದೇವಸ್ಥಾನಗಳಲ್ಲಿಯೂ ಗುರುವಾರದಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next