Advertisement
ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದಯವಾಣಿ ನೀರಿನ ಸಮಸ್ಯೆ ಕುರಿತು ಭೇಟಿ ನೀಡಿದಾಗ, ಒಂದೊಂದು ಪ್ರದೇಶದವರು ತಮಗಿಂತ ತೀವ್ರವಾದ ಸಮಸ್ಯೆ ಇನ್ನೊಂದೆಡೆ ಇದೆ ಎಂದು ಬೊಟ್ಟು ಮಾಡುತ್ತಿದ್ದರು.
ಬಡಾಕೆರೆಯ ಆಚಾರ್‌ಬೆಟ್ಟು ಎಂಬಲ್ಲಿ 12 ಮನೆಗಳಿವೆ. ಬಾವಿ ಇದ್ದರೂ ನೀರಾರಿದೆ. 3 ದಿನಕ್ಕೊಮ್ಮೆ ಟ್ಯಾಂಕರ್ ಬರುತ್ತದೆ. 10 ಕೊಡ ಮಾತ್ರ ಕೊಡುವುದು ಎಂದರೂ ನಾವಷ್ಟೇ ಪಾತ್ರೆ ಇಟ್ಟರೂ ಕೊಡದೇ ಹೋಗುವುದಿಲ್ಲ. ಕೊಡುತ್ತಿದ್ದಾರೆ. ಆದರೆ ನಿತ್ಯ ಇಲ್ಲದ ಕಾರಣ ಸಾಲುತ್ತಿಲ್ಲ ಎಂದರು ಶಾರದಾ.
Related Articles
Advertisement
ಇಲ್ಲಿ ಪದ್ಮಾವತಿ, ಸಿಂಗಾರಿ, ಬೇಬಿ, ಲಲಿತಾ, ಶ್ರೀಮತಿ ಅವರ ಮನೆಯವರಿಗೆಲ್ಲ ನೀರಿನ ಸಮಸ್ಯೆ ಇದೆ. ಸ್ವಲ್ಪ ಮಟ್ಟಿಗೆ ನೀರಿದೆ ಎನ್ನುತ್ತಾರೆ ಸುಶೀಲಾ. ಅದೂ ಎಷ್ಟು ದಿನ ಎಂದು ನೋಡಬೇಕು. ಮಳೆ ಬೇಗ ಬರದಿದ್ದರೆ ನೀರು ಖೋತಾ.
ಬಾವಿ ಬರಿದಾಗಿದೆಬಡಾಕೆರೆ ಗ್ರಾಮದ ವಕ್ಕೇಡಿಯಲ್ಲಿ ಇರುವ ಬಾವಿಗಳು ಬರಿದಾಗಿವೆ. ಬಾವಿ ಇದ್ದವರಿಗೆ ನೀರಿಲ್ಲ ಎನ್ನುತ್ತಿದ್ದಾರೆ. ಬಂದು ನೋಡಿ ಬಾವಿಯಲ್ಲಿ ನೀರಿಲ್ಲದಿದ್ದರೆ ಮಾತ್ರ ಕೊಡುತ್ತಾರಂತೆ ಎಂದರು ಸಾದಮ್ಮ ಶೆಡ್ತಿ. ಕಳೆದ ಎರಡು ತಿಂಗಳಿನಿಂದ ನೀರಿಲ್ಲ. ಕಷ್ಟವಾಗಿದೆ. ನಮಗಿಂತಲೂ ಜಾನುವಾರುಗಳಿಗೆ ಕಷ್ಟವಾಗಿದೆ. ಹೇಳಲೂ ಬರದು. ಪಾಪ. ಅವುಗಳಿಗೆ ಒಂದೊಂದಕ್ಕೆ ಕನಿಷ್ಠ 3 ಕೊಡ ನೀರು ಬೇಕು. ಆದರೆ ನಮಗೇ ಇಲ್ಲ ಏನು ಮಾಡೋಣ. ಪರಿಸ್ಥಿತಿ ನೆನೆದು ಕಣ್ಣೀರು ಬರುತ್ತದೆ ಎನ್ನುತ್ತಾರೆ ಮುತ್ತಮ್ಮ ಶೆಡ್ತಿ ಬಗ್ವಾಡಿ ಮನೆ. ಈ ಪರಿಸರದಲ್ಲಿ ಕಮಲಮ್ಮ ಶೆಡ್ತಿ, ಗಿರಿಜಮ್ಮ ಶೆಡ್ತಿ, ಮೂಕಾಂಬು ಅವರ ಮನೆಯಲ್ಲೂ ಇದೇ ಸಮಸ್ಯೆ. ಜಾನುವಾರುಗಳಿಗೂ ನೀರಿಲ್ಲ ನಮಗೂ ಇಲ್ಲ ಎನ್ನುತ್ತಾರೆ ಅವರು. ಕಿರಿದಾದ ರಸ್ತೆ
ಆಚಾರ್‌ಬೆಟ್ಟು, ವಕ್ಕೇಡಿ ಕಡೆಗೆ ಹೋಗುವ ಡಾಮರು ರಸ್ತೆ ಅಗಲ ಕಿರಿದಾಗಿದೆ. ನೀರಿನ ಟ್ಯಾಂಕರ್ ಬಂದಾಗ ಇತರ ವಾಹನಗಳು ಬಂದರೆ ಯಾವುದಾದರೊಂದು ವಾಹನ ಕಿಮೀ.ಗಟ್ಟಲೆ ಹಿಮ್ಮುಖ ಹೋಗಬೇಕಾಗುತ್ತದೆ. ಇದರಿಂದಾಗಿ ಅನಗತ್ಯ ಗೊಂದಲ ಉಂಟಾಗುತ್ತಿದೆ. ರಸ್ತೆಯನ್ನೂ ಅಗಲಗೊಳಿಸು ವಂತಿಲ್ಲ. ಈ ಭಾಗದಲ್ಲಿ ಮೊದಲು ಪಂಚಾಯತ್‌ನ ನಳ್ಳಿ ನೀರಿತ್ತು. ಆದರೆ ರಸ್ತೆ ಕಾಮಗಾರಿ ನಡೆಯುವಾಗ ಪೈಪ್‌ಲೈನ್ ಒಡೆದು ಹೋಯಿತು. ಬಾವಿಗಳಿದ್ದುದರಿಂದ ಯಾರೂ ದೂರಲಿಲ್ಲ, ಸರಿಪಡಿಸಿ ಎನ್ನಲಿಲ್ಲ. ಈಗ ಬಾವಿ ನೀರಾರಿದಾಗ ತೊಂದರೆ ಗೊತ್ತಾಗುತ್ತಿದೆ. ಜಲಮೂಲ
ಸೌಪರ್ಣಿಕಾ ನದಿಯ ನೀರಿದ್ದರೂ ವಿತರಣೆ ಇನ್ನಷ್ಟೇ ನಡೆಯಬೇಕಿದೆ. ಪ್ರಸ್ತುತ 4 ಬಾವಿ, 6 ಕೊಳವೆಬಾವಿಗಳಿಂದ ಪಂಚಾಯತ್ ನೀರು ಒದಗಿಸುತ್ತಿದೆ. ಬೇಸಗೆಯಲ್ಲಿ ಟ್ಯಾಂಕರ್ ಮೂಲಕ ನೀರು ನೀಡಲು ಟೆಂಡರ್ ಆಗಿದ್ದು ತ್ರಾಸಿಯಿಂದ ನೀರು ತಂದು ಕೊಡಲಾಗುತ್ತಿದೆ. ದೊಡ್ಡ ಪಂಚಾಯತ್
ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಇದು 15 ಕಿಮೀ. ಸುತ್ತಳತೆಯ ಎರಡನೆ ದೊಡ್ಡ ಪಂಚಾಯತ್ ಆಗಿದೆ. 10,528 ಜನಸಂಖ್ಯೆ ಇದ್ದು ನಾಡಾ, ಹಡವು, ಬಡಾಕೆರೆ, ಸೇನಾಪುರ ಎಂಬ ನಾಲ್ಕು ಗ್ರಾಮಗಳನ್ನು ಒಳಗೊಂಡಿದೆ. ಸದ್ಯಕ್ಕೆ ನಾಲ್ಕು ಬಾವಿ, 6 ಕೊಳವೆಬಾವಿಗಳು ಪಂಚಾಯತ್‌ನ ನೀರಿನ ಆಸ್ತಿ. ಗಂಟಿಗೆ ನೀರಿಲ್ಲ
ಎಲ್ಲರ ಮನೇಲೂ ಹಸುವಿದೆ. ನಮಗೇ ನೀರಿಲ್ಲ. ಹಸುವಿಗೂ ಕೊಡುವುದು ಸಮಸ್ಯೆಯಾಗುತ್ತಿದೆ. ಎಲ್ಲ ಕಡೆಯೂ ಬಾವಿಯೂ ಬತ್ತಿದೆ. ಹಾಗಾಗಿ ಸಮಸ್ಯೆ ಹೆಚ್ಚಾಗಿದೆ.
-ಸಾದಮ್ಮ ಶೆಡ್ತಿ, ವಕ್ಕೇಡಿ ನೀರಿನ ಪ್ರಮಾಣ ಹೆಚ್ಚಳ
ಎರಡನೆ ಅತಿದೊಡ್ಡ ಪಂಚಾಯತ್ ನಮ್ಮದು. ನಾಲ್ಕೂ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. 4 ಸಾವಿರ ಲೀ. ಸಾಮರ್ಥ್ಯದ 3 ಟ್ಯಾಂಕರ್‌ಗಳಲ್ಲಿ 2 ದಿನಕ್ಕೊಮ್ಮೆಯಂತೆ ನೀರು ವಿತರಿಸಲಾಗುತ್ತಿದೆ. ವಿಶ್ವಬ್ಯಾಂಕ್ ನೆರವಿನ ನೀರಿನ ಘಟಕ ಯೋಜನೆ ಪೂರ್ಣವಾದ ಬಳಿಕ ಸಮಸ್ಯೆ ನಿವಾರಣೆಯಾಗಲಿದೆ. ಈ ವರ್ಷ ಮಾತ್ರ ಸುಧಾರಿಸಿಕೊಳ್ಳಬೇಕು. ಸಾಧ್ಯವಾದಷ್ಟು ನೀರಿನ ಪ್ರಮಾಣ ಹೆಚ್ಚಿಸಲಾಗುವುದು.
-ಪಾಂಡುರಂಗ ಶೇಟ್,
ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನಾಡಾ ವಾರ್ಡ್‌ನವರ ಬೇಡಿಕೆ
– ನೀರಿನ ಟ್ಯಾಂಕರ್ ಬರಲು ರಸ್ತೆ ವಿಸ್ತರಿಸಿ.
– ಸೌಪರ್ಣಿಕಾ ನದಿ ನೀರು ಬಳಕೆಗೆ ವ್ಯವಸ್ಥೆ.
– ನೀರಿನ ಪೂರೈಕೆಯಲ್ಲಿ ಹೆಚ್ಚಳ
– ಬತ್ತುತ್ತಿರುವ ಬಾವಿಗೆ ಕಾಯಕಲ್ಪ ಹೊಸ ಯೋಜನೆ
ಈ ವರ್ಷ ನೀರಿನ ಸಮಸ್ಯೆ ಎಂದಿಗಿಂತ ಹೆಚ್ಚೇ ಇದೆ. ಇದುವರೆಗೆ ನೀರಾರದ ಬಾವಿಗಳಲ್ಲೂ ಈ ಬಾರಿ ನೀರಿಲ್ಲ. ಆದರೆ ಮುಂದಿನ ವರ್ಷದಿಂದ ನೀರಿನ ಸಮಸ್ಯೆಯೇ ಇರದು ಎನ್ನುವ ವಿಶ್ವಾಸ ಪಂಚಾಯತ್ ಆಡಳಿತದ್ದು. ಅದಕ್ಕೆ ಕಾರಣ ಈಗ ಮುಕ್ತಾಯ ಹಂತದಲ್ಲಿರುವ ವಿಶ್ವಬ್ಯಾಂಕ್ ಕುಡಿಯುವ ನೀರಿನ ಯೋಜನೆ. ಉಡುಪಿ ಜಿಲ್ಲೆಯಲ್ಲಿ ನಾಡಾ ಪಂಚಾಯತ್ ಮಾತ್ರ ಈ ಯೋಜನೆಗೆ ಆಯ್ಕೆಯಾಗಿದ್ದು 10 ಕೋ.ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ. ಜೂನ್ ವೇಳೆಗೆ ಪೂರ್ಣವಾಗಲಿದ್ದು ಅನಂತರ ಸುತ್ತಲಿನ 8-10 ಪಂಚಾಯತ್‌ಗಳಿಗೆ ಇಲ್ಲಿಂದಲೇ ನೀರು ಒದಗಿಸಬಹುದು. – ಲಕ್ಷ್ಮೀ ಮಚ್ಚಿನ