Advertisement

2022ರೊಳಗೆ ಕಾಲೇಜುಗಳಿಗೆ ನ್ಯಾಕ್‌ ಮಾನ್ಯತೆ ಗುರಿ

11:08 PM Feb 22, 2020 | Lakshmi GovindaRaj |

ಬೆಂಗಳೂರು: ಮೂಲಸೌಕರ್ಯ ಒದಗಿಸಿ, ಶಿಕ್ಷಣ ಗುಣಮಟ್ಟ ಸುಧಾರಿಸುವ ದೃಷ್ಟಿಯಿಂದ 2022ರೊಳಗೆ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಿಗೆ ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್‌(ನ್ಯಾಕ್‌) ಶ್ರೇಯಾಂಕ ಒದಗಿಸಲು ಕಾಲೇಜು ಶಿಕ್ಷಣ ಇಲಾಖೆ ಕಾರ್ಯತಂತ್ರ ರೂಪಿಸಿದೆ.

Advertisement

ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಗುಣಮಟ್ಟ ಸುಧಾರಣೆ ಹಾಗೂ ಮೂಲಸೌಕರ್ಯದ ಅಭಿವೃದ್ಧಿಗೆ ನ್ಯಾಕ್‌ ಮೌಲ್ಯಮಾಪನ ಅತಿ ಅಗತ್ಯವಿದೆ. ನ್ಯಾಕ್‌ನಿಂದ ಶ್ರೇಷ್ಠ ಶ್ರೇಯಾಂಕ ಪಡೆದ ಕಾಲೇಜುಗಳಿಗೆ ವಿಶೇಷ ಸೌಲಭ್ಯದ ಜತೆಗೆ ಅನೇಕ ರೀತಿಯ ಅನುಕೂಲತೆಗಳು ಲಭ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ 2022ರೊಳಗೆ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳು ನ್ಯಾಕ್‌ ಮಾನ್ಯತೆ ಪಡೆಯುವಂತೆ ಮಾಡಲು ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ 412 ಸರ್ಕಾರಿ ಪದವಿ ಕಾಲೇಜುಗಳು, 2 ಚಿತ್ರಕಲಾ ಪದವಿ ಕಾಲೇಜುಗಳು ಹಾಗೂ 321 ಅನುದಾನಿತ ಪದವಿ, ಬಿಇಡಿ ಹಾಗೂ ಕಾನೂನು ಕಾಲೇಜುಗಳಿವೆ. 412 ಸರ್ಕಾರಿ ಪದವಿಕಾಲೇಜುಗಳಲ್ಲಿ ಸುಮಾರು 220 ಕಾಲೇಜು ಈಗಾಗಲೇ ನ್ಯಾಕ್‌ ಮಾನ್ಯತೆ ಪಡೆದಿದೆ. ಉಳಿದ ಸುಮಾರು 190 ಕಾಲೇಜುಗಳಿಗೆ ನ್ಯಾಕ್‌ ಮಾನ್ಯತೆ ಸಿಕ್ಕಿಲ್ಲ. ಅನುದಾನಿತ ಕಾಲೇಜುಗಳಲ್ಲಿ ನ್ಯಾಕ್‌ ಮಾನ್ಯತೆ ಇಲ್ಲದೇ ಇರುವ ಕಾಲೇಜುಗಳೇ ಹೆಚ್ಚಿವೆ ಎಂದು ಇಲಾಖೆಯ ಮೂಲಗಳು ಖಚಿತಪಡಿಸಿವೆ.

ಪದವಿ ಶಿಕ್ಷಣದಲ್ಲಿ ಸೌಲಭ್ಯಗಳ ಪೂರೈಕೆ ಹಾಗೂ ಶಿಕ್ಷಣ ಗುಣಮಟ್ಟ ಸುಧಾರಣೆಯ ದೃಷ್ಟಿಯಿಂದ 2022ರ ವೇಳೆಗೆ ಎಲ್ಲ ಕಾಲೇಜುಗಳು ನ್ಯಾಕ್‌ ಮಾನ್ಯತೆಗೆ ಒಳಪಡಿಸುವ ಗುರಿಯನ್ನು ಇಲಾಖೆ ಹೊಂದಿದ್ದು, ಇದಕ್ಕೆ ಬೇಕಾದ ಕಾಲೇಜು ಹಂತದ ಕಾರ್ಯಕ್ರಮಗಳು, ಬೋಧನೆ ಮತ್ತು ಕಲಿಕಾ ಹಂತದಲ್ಲಿ ಆಗಬೇಕಿರುವ ಸುಧಾರಣೆಗಳು, ಹೊಸ ತಂತ್ರಜ್ಞಾನದ ಅನುಷ್ಠಾನ ಹೀಗೆ ಎಲ್ಲ ರೀತಿಯ ಮಾಹಿತಿಯನ್ನು ಕಾಲೇಜುಗಳಿಗೆ ಈಗಾಗಲೇ ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನ್ಯಾಕ್‌ ಮಾನ್ಯತೆಯ ಲಾಭವೇನು?: ನ್ಯಾಕ್‌ ಮಾನ್ಯತೆ ಪಡೆದ ಕಾಲೇಜುಗಳಿಗೆ ಹಲವು ರೀತಿಯ ಲಾಭವಿದೆ. ಮೂಲಸೌಕರ್ಯ ಸುಧಾರಿಸುವ ಜತೆಗೆ ಶಿಕ್ಷಣದ ಗುಣಮಟ್ಟದಲ್ಲಿ ಉತ್ಕೃಷ್ಟತೆ ಪಡೆಯಲಿದೆ. ಎ ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಯಾಂಕ ಪಡೆಯುವ ಕಾಲೇಜುಗಳು ಸ್ವಾಯತ್ತ ಸ್ಥಾನಮಾನ ಪಡೆಯಲು ಅರ್ಹರಾಗಿರುತ್ತವೆ. ಲೀಡ್‌ ಕಾಲೇಜುಗಳಾಗಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯಲು ಅರ್ಹತೆ ಹೊಂದುತ್ತವೆ.

Advertisement

ಸ್ವಾಯತ್ತ ಸ್ಥಾನಮಾನ ಸಿಕ್ಕರೆ, ಪರೀಕ್ಷೆ, ಮೌಲ್ಯಮಾಪನದ ಜತೆಗೆ ಪಠ್ಯಕ್ರಮ ಸಿದ್ಧಪಡಿಸುವ ವ್ಯವಸ್ಥೆಯನ್ನು ಆ ಕಾಲೇಜಿಗೆ ಒದಗಿಸಲಾಗುತ್ತದೆ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜು, ಕಾರವಾರದ ಸರ್ಕಾರಿ ಕಾಲೇಜು, ಬಳ್ಳಾರಿ ಸರ್ಕಾರಿ ಕಾಲೇಜು, ಗುಬ್ಬಿ ಸರ್ಕಾರಿ ಕಾಲೇಜು ಹೀಗೆ ಕೆಲ ಕಾಲೇಜುಗಳು ನ್ಯಾಕ್‌ ಶ್ರೇಯಾಂಕದ ಆಧಾರದಲ್ಲಿ ಸ್ವಾಯತ್ತ ಸ್ಥಾನಮಾನ ಪಡೆದಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರ ನೀಡಿದರು.

ನ್ಯಾಕ್‌ ಮಾನ್ಯತೆ ಹೇಗೆ?: ಪ್ರತಿ ಐದು ವರ್ಷಗಳಿಗೊಮ್ಮೆ ನ್ಯಾಕ್‌ ಮಾನ್ಯತೆ ನವೀಕರಣ ನಡೆಯುತ್ತದೆ. ನ್ಯಾಕ್‌ ಮಾನ್ಯತೆ ನೀಡುವ ಸಲುವಾಗಿಯೇ ಕಾಲೇಜುಗಳಿಗೆ ನ್ಯಾಕ್‌ ತಂಡಗಳು ಭೇಟಿ ನೀಡಿ, ಪರಿಶೀಲನೆ ನಡೆಸಲಿವೆ. ನ್ಯಾಕ್‌ ಮಾನದಂಡದಂತೆ ಕಾಲೇಜಿನಲ್ಲಿ ಎಲ್ಲ ಅಂಶಗಳು ಚೆನ್ನಾಗಿದ್ದರೆ ಮಾನ್ಯತೆ ನೀಡುತ್ತವೆ. ಶೈಕ್ಷಣಿಕ ಅಥವಾ ಆಡಳಿತಾತ್ಮಕವಾಗಿ ಕಾಲೇಜು ಕಳಪೆಯಾಗಿದ್ದರೆ ಮಾನ್ಯತೆ ನಿರಾಕರಿಸಲಾಗುತ್ತದೆ.

ಎ,ಬಿ ಹಾಗೂ ಸಿ ಶ್ರೇಯಾಂಕವನ್ನು ನೀಡುತ್ತವೆ. ಜತೆಗೆ ಎ, ಬಿ, ಸಿ ಶ್ರೇಯಾಂಕದಲ್ಲೂ ಪ್ಲಸ್‌ ಹಾಗೂ ಪ್ಲಸ್‌-ಪ್ಲಸ್‌ ಇರುತ್ತದೆ. ಎ ಶ್ರೇಯಾಂಕದ ಕಾಲೇಜುಗಳಲ್ಲಿ ಎಲ್ಲ ರೀತಿಯ ಅನುಕೂಲದ ಜತೆಗೆ ಗುಣಮಟ್ಟದ ಬೋಧನೆ, ಕಲಿಕೆ ಎಲ್ಲವೂ ಇರುತ್ತದೆ. ಇದೇ ಆಧಾರದಲ್ಲಿ ಶ್ರೇಯಾಂಕವನ್ನು ನೀಡಲಾಗುತ್ತದೆ.

ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳನ್ನು 2022ರೊಳಗೆ ನ್ಯಾಕ್‌ ಮಾನ್ಯತೆಗೆ ಒಳಪಡಿಸುವ ಗುರಿ ಹೊಂದಿದ್ದೇವೆ. ನ್ಯಾಕ್‌ ಶ್ರೇಯಾಂಕ ಸಿಕ್ಕಂತೆ ರಾಷ್ಟ್ರೀಯ ಉತ್ಛತರ ಶಿಕ್ಷಾ ಅಭಿಯಾನದಡಿ ಅನುದಾನವು ಹೆಚ್ಚು ಸಿಗುತ್ತದೆ ಮತ್ತು ಶೈಕ್ಷಣಿಕ ಗುಣಮಟ್ಟವು ಸುಧಾರಿಸುತ್ತದೆ.
-ಪ್ರೊ.ಎಸ್‌.ಮಲ್ಲೇಶ್ವರಪ್ಪ, ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next