Advertisement

ಹೆಸರಲ್ಲೇ ಭಾಗವತರಾಗಿದ್ದರು ನೆಬ್ಬೂರು

04:50 PM May 20, 2019 | Team Udayavani |

ಶಿರಸಿ: ನೆಬ್ಬೂರು ನಾರಾಯಣ ಭಾಗವತರು ಹಾಡಿದ ಜನಪ್ರಿಯ ಪದ್ಯಗಳ ಪ್ರಸ್ತುತಿ, ಅವರ ಒಡನಾಟದ ಮೆಲಕು ಹಾಕುವ ಮೂಲಕ ನಗರದ ಯೋಗ ಮಂದಿರದಲ್ಲಿ ನೀನೆ ಕುಣಿಸುವೆ ಜೀವರನು ಗಾನ ಹಾಗೂ ವಚನ ನಮನ ಕಾರ್ಯಕ್ರಮ ಜರುಗಿತು.

Advertisement

ರವಿವಾರ ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲೂಕಿನ ವಿವಿಧ ಸಂಘಟನೆಗಳಿಂದ ಅಗಲಿದ ಯಕ್ಷಗಾನದ ಮೇರು ಭಾಗವತ ನೆಬ್ಬೂರು ನಾರಾಯಣ ಭಾಗವತರ ಸಂಸ್ಮರಣೆಯಲ್ಲಿ ಕಲಾಭಿಮಾನಿಗಳು, ಒಡನಾಡಿಗಳು ಭಾವಪೂರ್ಣವಾಗಿ ನಮನ ಸಲ್ಲಿಸಿದರು.

ನುಡಿನಮನ ಸಲ್ಲಿಸಿದ ವಿದ್ವಾನ್‌ ಉಮಾಕಾಂತ ಭಟ್ಟ ಕೆರೇಕೈ, ನೆಬ್ಬೂರರ ಪ್ರೀತಿ, ಭಾಗವತರ ಕಲೆ ನಮಗೆ ಇಷ್ಟವಾಗಲು ಕಾರಣ. ಪ್ರೀತಿ ಇರಬೇಕು ಎಂಬ ನಿರ್ಬಂಧವಿಲ್ಲ. ನಿರ್ವಾಜ್ಯವಾಗಿ ಸಮಾಜವನ್ನು ಪ್ರೀತಿಸುವ ವಿಶಿಷ್ಟ ಅರ್ಹತೆ ಇತ್ತು. ಯಾವ ಕಾರಣಕ್ಕೆ ಒಡನಾಟಕ್ಕೆ ಬಂದರೂ ಪ್ರೀತಿಯಿಂದ ಕಟ್ಟು ಹಾಕುತ್ತಿತ್ತು. ಜಗಳ ಮಾಡಿದವರೂ ಭಾಗವತರನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಒಂದು ಮನೆಯ ಕೊರತೆ ತೋರಿಸದೇ ಅದನ್ನು ದಾಟುವ ಇಂಥ ಆದರ್ಶ ಗೃಹಸ್ಥರನ್ನು ನಾನು ನೋಡಿಲ್ಲ. ಇದು ಅನುಕರಣೀಯ ಸಂಸ್ಕಾರ. ಜೀವನ ಮಾದರಿಯಾಗಿದ್ದವರು. ತುಂಬಾ ಜನರಿಗೆ ಅವರಾಗಿ ಸಹಾಯ ಮಾಡಿದ್ದರು ಎಂದ ಅವರು, ನೆಬ್ಬೂರು ಭಾಗವತರ ಭಾಗವತಿಕೆ ಬಗ್ಗೆ ಮಾತನಾಡಲು ಧೈರ್ಯ ಹಾಗೂ ಅನುಭವ ಬೇಕು. ಏಕೆಂದರೆ ಅವರು 2 ವರ್ಷ ಮಾತ್ರ ಸಂಗೀತ ಮಾಡಿ 63 ವರ್ಷ ಭಾಗವತಿಕೆ ಮಾಡಿದವರು. ಅವರ ಹೆಸರಿನ ಜೊತೆ ಭಾಗವತ ಎಂಬುದೂ ಸೇರುವಷ್ಟು ಒಂದಾಗಿದ್ದರು ಭಾಗವತಿಕೆಯಲ್ಲಿ. ಅವರ ಮಾದರಿ ಶ್ರೇಷ್ಠವಾದದ್ದು. ತೆರೆದ ಕಂಠದ ಭಾಗವತರು ಅವರು ಎಂದೂ ಬಣ್ಣಿಸಿದರು.

ಸಂಕಲ್ಪದ ಮುಖ್ಯಸ್ಥ ಪ್ರಮೋದ ಹೆಗಡೆ ಯಲ್ಲಾಪುರ ನೆಬ್ಬೂರರು ಸರಳ ಭಾಗವತಿಕೆಯಲ್ಲಿ ಶ್ರೀಮಂತಿಕೆ ಇದ್ದವರು. ಅವರ ನೆನಪನ್ನು ಪ್ರತೀ ವರ್ಷ ಮಾಡಿಕೊಳ್ಳಬೇಕು ಎಂದರು.

Advertisement

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ.ಹೆಗಡೆ ದಂಟ್ಕಲ್ ಮಾತನಾಡಿ, ನೆಬ್ಬೂರರ ನೆನಪೇ ಇಲ್ಲಾಗಬೇಕು. ಅದಕ್ಕೇ ಕಟುವಾಗಿ ಹೇಳಬೇಕು. ನಾನು ಅಲ್ಲ, ನಮ್ಮಂತಹ ಹಲವಾರು ಜನರನ್ನು ಸಿದ್ಧಗೊಳಿಸಿದ ಅವಿಸ್ಮರಣೀಯ ಎಂಬ ರೀತಿಯಲ್ಲಿ ಪ್ರಭಾವ ಬೀರಿದ ನೆಬ್ಬೂರರಿಗೆ ಕುಸುಮ ಅರ್ಪಿಸಬೇಕು. ಅವರು ಹೃದಯದ ಭಾಗವತಿಕೆಯಲ್ಲಿ ಗೆದ್ದವರು ಎಂದರು.

ಉದ್ಯಮಿ ಆರ್‌.ಜಿ. ಭಟ್ಟ ವರ್ಗಾಸರ ಉಪಸ್ಥಿತರಿದ್ದರು. ಜಯರಾಮ ಹೆಗಡೆ, ಆರ್‌.ಎಂ. ಹೆಗಡೆ ಕಾನಗೋಡ, ನೇತ್ರಾವತಿ ಹೆಗಡೆ, ವಿ.ಆರ್‌. ಹೆಗಡೆ, ಹಿತ್ಲಕೈ ಗಣಪತಿ ಹೆಗಡೆ, ಜಿ.ಎನ್‌. ಹೆಗಡೆ ಹಾವಳಿಮನೆ ಇತರರು ನುಡಿ ನಮನ ಸಲ್ಲಿಸಿದರು. ಆರ್‌.ಎಸ್‌. ಹೆಗಡೆ ಭೈರುಂಬೆ ಸ್ವಾಗತಿಸಿದರು. ಸಂಘಟಕ ನಾಗರಾಜ್‌ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ದೀಕ್ಷಿತ ನಿರೂಪಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ವಂದಿಸಿದರು.

ಗಾನ ನಮನ: ನೀನೇ ಕುಣಿಸುವೆ ಜೀವರನು, ನೋವು ನಲಿವಿನ ಜೀವನ ಕಂಡಾಯ್ತು, ಇಳಿದ ಪ್ರಶಾಂತದಲಿ.., ಚೆಲುವರನ್ನು ನೋಡಿದರೆ, ರಂಗ ನಾಯಕ ಸೇರಿದಂತೆ ನೆಬ್ಬೂರರ ಇಷ್ಟದ ಪದ್ಯಗಳನ್ನು ಹೆಸರಾಂತ ಭಾಗವತರಾದ ಕೇಶವ ಹೆಗಡೆ ಕೊಳಗಿ, ಶಂಕರ ಬ್ರಹ್ಮೂರು, ಶಂಕರ ಭಾಗವತ್‌, ಪ್ರಸನ್ನ ಹೆಗ್ಗಾರ ಸಹಕಾರ ನೀಡಿದರು.

ಯೋಗ ಮಂದಿರ, ಯಕ್ಷ ಶಾಲ್ಮಲಾ, ನೆಬ್ಬೂರು ಪ್ರತಿಷ್ಠಾನ, ವಿಶ್ವಶಾಂತಿ ಸೇವಾ ಟ್ರಸ್ಟ್‌, ಹವ್ಯಕ ಕ್ಷೇಮಾಭಿವೃದ್ಧಿ ಟ್ರಸ್ಟ್‌, ಸಂಕಲ್ಪ ಯಲ್ಲಾಪುರ, ಮಾತೃ ಮಂಡಳಿ ಸ್ವರ್ಣವಲ್ಲೀ, ಶಬರ ಸಂಸ್ಥೆ ಸೋಂದಾ, ಸಾಮ್ರಾಟ್ ಹೋಟೆಲ್, ಯಕ್ಷ ಸಂಭ್ರಮ, ನಾದ ಶಂಕರ, ಯಕ್ಷ ಭಾರತೀ, ಯಕ್ಷ ಗೆಜ್ಜೆ, ಅಂಕ ಸಂಸಾರ, ಯಕ್ಷ ಶುಭೋದಯ, ಗೆಳೆಯರ ಬಳಗ ಭೈರುಂಬೆ, ಯಕ್ಷಸಿರಿ ವಾನಳ್ಳಿ, ಯಕ್ಷ ಸಂಗಮ ಆದರ್ಶ ವನಿತಾ ಸಮಾಜ, ಯಕ್ಷ ಕಿರಣ ಕೋಳಿಗಾರ, ಅನಂತ ಯಕ್ಷಕಲಾ ಪ್ರತಿಷ್ಠಾನ ಸಿದ್ದಾಪುರ, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನ ಕಲಗದ್ದೆ, ಒಡ್ಡೋಲಗ, ಯಕ್ಷ ಚಂದನ ದಂಟ್ಕಲ್, ರಾಯಸಂ ಮಂಚಿಕೇರೆ ಇನ್ನಿತರ ಸಂಘಟನೆಗಳು ಸಹಕಾರ ನೀಡಿದ್ದವು.

ಭಾಗವತಿಕೆಯಲ್ಲಿ ಪ್ರತ್ಯೇಕತೆ ಮನಸ್ಸೇ ಹೊರತು ಪಾತ್ರದ ಭಾವ ತೋರಿಸುವುದಿಲ್ಲ. ಯಕ್ಷಗಾನದ ಪಾರಂಪರಿಕ ಆಕರ ವ್ಯಕ್ತಿ ಆಗಿದ್ದವರು ನೆಬ್ಬೂರರು.
• ವಿ.ಉಮಾಕಾಂತ ಭಟ್ಟ ಕೆರೇಕೈ, ವಿದ್ವಾಂಸ
ಭಾವ ಅರಿತು, ಸಂಕೀರ್ಣ ಸ್ಥಿತಿ ಅರಿತು ಹಾಡಿದವರು ನೆಬ್ಬೂರರು. ಇಡೀ ಸನ್ನಿವೇಶ ತುಂಬಿಕೊಂಡು ಹಾಡಿ ಜನ ಮಾನಸದಲ್ಲಿ ನಿಂತವರು. ನೆಬ್ಬೂರರಂತೆ ಹಾಡಲು ಸಾಧ್ಯವಿಲ್ಲ.
• ಪ್ರೊ| ಎಂ.ಎ. ಹೆಗಡೆ ದಂಟ್ಕಲ್,ಅಧ್ಯಕ್ಷರು ಯಕ್ಷಗಾನ ಅಕಾಡೆಮಿ
ಯಕ್ಷಗಾನ ಕಲಾವಿದರನ್ನೂ ಜೋಡಿಸುವ ಕಾರ್ಯ ನೆಬ್ಬೂರರು ಮಾಡಿದ್ದರು.
• ಪ್ರಮೋದ ಹೆಗಡೆ ಯಲ್ಲಾಪುರ, ಸಂಕಲ್ಪ
ನೆಬ್ಬೂರು ಪ್ರತಿಷ್ಠಾನದಿಂದ ನೆಬ್ಬೂರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಯೋಜಿಸಿದ್ದೇವೆ.
• ಜಿ.ಎನ್‌. ಹೆಗಡೆ ಹಾವಳಿಮನೆ, ಪ್ರತಿಷ್ಠಾನದ ಅಧ್ಯಕ್ಷರು
Advertisement

Udayavani is now on Telegram. Click here to join our channel and stay updated with the latest news.

Next