ಕಟಪಾಡಿ: ಜಾಗತಿಕವಾಗಿ ಮಾನ್ಯತೆ ಹೊಂದಿರುವ ಮಟ್ಟುಗುಳ್ಳದ ಬೆಳೆಗಾರರ ಸಂಘಕ್ಕೆ ನಬಾರ್ಡ್ ಇದರ ಚೀಫ್ ಜನರಲ್ ಮ್ಯಾನೇಜರ್ ಸೂರ್ಯಕುಮಾರ್ ಬೆಂಗಳೂರು ಅವರು ಭೇಟಿ ನೀಡಿ ಮಟ್ಟುಗುಳ್ಳದ ಮಾರುಕಟ್ಟೆ, ಗ್ರೇಡಿಂಗ್ ವಿಧಾನ, ಬೆಳೆಗಾರರ ಸಂಘಕ್ಕೆ ಬೇಕಾದ ಸವಲತ್ತುಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.
ಮಟ್ಟುಗುಳ್ಳದ ಮಾರುಕಟ್ಟೆ, ಬೆಳೆಯುವ ವಿಧಾನದ ಕುರಿತು ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ, ಪ್ರಬಂಧಕ ಲಕ್ಷ್ಮಣ್ ಮಟ್ಟು ಸಹಿತ ಇತರ ಪ್ರಮುಖರಲ್ಲಿ ಸಮಾಲೋಚನೆ, ಸಂವಹನ ನಡೆಸಿದರು.
ಮಾರುಕಟ್ಟೆಯಲ್ಲಿ ಖರೀದಿದಾರರಿಗೆ ವಂಚನೆ ಆಗದಂತೆ, ಬೆಳೆಗಾರರಿಗೆ ತೊಡಕು ಉಂಟಾಗದಂತೆ ನಕಲಿ ಹಾವಳಿ ತಡೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು, ಸುಲಭದಲ್ಲಿ ಗುರುತಿಸುವುದು, ಮಾರುಕಟ್ಟೆಯಲ್ಲಿ ಇರುವ ಇತರ ಗುಳ್ಳಗಳೊಂದಿಗೆ ನಕಲಿ ಆಗದಂತೆ ನೋಡಿಕೊಳ್ಳಬಹುದಾದ ಮುಂಜಾಗ್ರತಾ ಕ್ರಮ ತಿಳಿಸಿದರು. ಇಲ್ಲಿನ ಬೆಳೆಗಾರರ ಸಂಘಕ್ಕೆ ಹೆಚ್ಚಿನ ಸೌಲಭ್ಯ, ಸವಲತ್ತನ್ನು ನಬಾರ್ಡ್ ಮೂಲಕ ಒದಗಿಸಲು ಬದ್ಧನಿದ್ದು, ಮಾರುಕಟ್ಟೆ ವಿಸ್ತರಣೆ, ವಾಹನ ಸೌಲಭ್ಯ, ಪ್ಯಾಕ್‌ಹೌಸ್ ರಚನೆ ಬಗ್ಗೆ ಸಮಾಲೋಚನೆ ನಡೆಸಿದರು.
ಮಣಿಪಾಲ ವಿಶ್ವವಿದ್ಯಾಲಯದ ಡಾ| ಹರೀಶ್ ಜೋಷಿ ಮಟ್ಟುಗುಳ್ಳ ಬೆಳೆ ಮತ್ತು ಬೆಳೆಗಾರರ ಸಂಘದ ಡೆವಲಪ್‌ಮೆಂಟ್ ಫಂಡ್ ನೀಡಲಿರುವ ಸಭೆಗೆ ಪೂರ್ವ ಭಾವಿಯಾಗಿ ಇದೀಗ ಮಾಹಿತಿ ಕಲೆ ಹಾಕಲು ಬಂದಿರುವುದಾಗಿ ತಿಳಿಸಿದರು. ನಬಾರ್ಡ್‌ನ ಡಿ.ಡಿ.ಎಂ. ರಮೇಶ್ ಅವರು, ಸ್ಥಳೀಯವಾಗಿ ಮಂಗಳೂರು, ಕಾರ್ಕಳ, ಉಡುಪಿ ಬೆಂಗಳೂರು, ಮುಂಬಯಿ ಭಾಗಗಳಿಗೆ ಮಾರುಕಟ್ಟೆ ಹಾಗೂ ಇತ್ತೀಚೆಗೆ ಕತಾರ್‌ಗೆ ರಫ್ತಾಗಿರುವ ಬಗ್ಗೆ ವಿವರಿಸಿದರು. ಉಪ್ಪು ನೀರಿನ ಬಾಧೆಯ ಬಗ್ಗೆ ಸೂಕ್ತ ಕ್ರಮಕ್ಕೆ ವರದಿ ಸಲ್ಲಿಸಿರುವ ಬಗ್ಗೆ ಸಮಾಲೋಚನೆ ನಡೆಸಿದರು.
ಬೆಳೆಗಾರರ ಸಂಘದ ಕಾರ್ಯದರ್ಶಿ ನಾಗರಾಜ್ ಮಟ್ಟು, ಪ್ರಮುಖರಾದ ಜಯೇಂದ್ರ ಪೂಜಾರಿ, ನಾರಾಯಣ ಬಂಗೇರ, ಸಂತೋಷ್ ಕುಮಾರ್, ಸದಾನಂದ ಪೂಜಾರಿ, ಪ್ರದೀಪ್ ಪೂಜಾರಿ, ಸಿಬಂದಿ ವರ್ಗದವರು ಉಪಸ್ಥಿತರಿದ್ದರು.