ಪ್ರಶಾಂತ್ ಶೆಟ್ಟಿ
ಎನ್.ಆರ್.ಪುರ: ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗ್ಗಡೆಯಿಂದ ಮಾವಿನ ಮನೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಶಿಥಿಲಾವಸ್ಥೆಗೆ ತಲುಪಿದ್ದು, ಪಾದಚಾರಿಗಳು ಸೇರಿದಂತೆ ಯಾವುದೇ ವಾಹನಗಳು ಓಡಾಡುವುದೇ ಪ್ರಯಾಸದ ಕೆಲಸವಾಗಿದೆ.
ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 5 ಕಿ.ಮೀ. ಉದ್ದವಿದೆ. ಅಲ್ಲದೇ, ವಗ್ಗಡೆ, ಗುಬ್ಬಿಗಾ,ಅರಳಿಕೊಪ್ಪ, 8ನೇ ಮೈಲಿಕಲ್ಲು, ಮೂಡಬಾಗಿಲು, ಬಂಗುವಾನಿ, ಗುಂಡುವಾಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಸಾಕಷ್ಟು ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಹಾಗೂ ಬೇರೆ ಬೇರೆ ಊರುಗಳಿಗೆ ಹೋಗಬೇಕಾದರೆ ಮುಖ್ಯರಸ್ತೆಗೆ ತಲುಪಲು ಇದೇ ರಸ್ತೆ ಅವಲಂಬಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಜನರು ಹೆಚ್ಚಾಗಿ ವಾಸವಾಗಿದ್ದಾರೆ. ಸುಮಾರು 53 ಮನೆಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ.
ರಸ್ತೆ ಪ್ರಸ್ತುತ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ರಸ್ತೆಗೆ ಹಾಕಿದ್ದ ಡಾಂಬರು ಸಂಪೂರ್ಣ ಮಾಯವಾಗಿದೆ. ಜಲ್ಲಿ ಕಿತ್ತುಹೋಗಿದೆ . ಕೆಲವು ಕಡೆಗಳಲ್ಲಿ ರಸ್ತೆ ತುಂಬಾ ಗುಂಡಿ ಬಿದ್ದಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವುದರಿಂದ ಕೆಸರುಗದ್ದೆಯಾಗಿ ಪರಿಣಮಿಸುತ್ತದೆ. ಕಾರು, ದ್ವಿಚಕ್ರ ವಾಹನಗಳಲ್ಲೂ ಸಂಚರಿಸುವುದು ದುಸ್ತರವಾಗಿ ಪರಿಗಣಿಸಿದೆ ಎಂಬುದು ಗ್ರಾಮಸ್ಥರ ಅಳಲು.
ರಸ್ತೆಯ ಎರಡೂ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಇರುವುದರಿಂದ ಮಳೆ ನೀರು ಸಂಪೂರ್ಣವಾಗಿ ರಸ್ತೆಯ ಮೇಲೆ ಹರಿಯುತ್ತದೆ. ಇದರಿಂದಾಗಿ ರಸ್ತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಈ ಗ್ರಾಮಕ್ಕೆ ಮಳೆಗಾಲ ದಲ್ಲಿ ಆಟೋದವರು ಬರುವುದಕ್ಕೂಹಿಂಜರಿಯುತ್ತಾರೆ. ಒಂದು ವೇಳೆ ಬಂದರೂ ದುಪ್ಪಟ್ಟು ಹಣ ಪಾವತಿ ಮಾಡಬೇಕಾದ ಸ್ಥಿತಿಯಿದೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಎಚ್.ಜಿ.ಗೋವಿಂದೇಗೌಡರು ಶಾಸಕರಾಗಿದ್ದಾಗ ಜಲ್ಲಿ ಹಾಕಿಸಿದ್ದರು.
ಆನಂತರದಲ್ಲಿ ಬಂದ ಶಾಸಕರು ರಸ್ತೆ ಅಭಿವೃದ್ಧಿಪಡಿಸುವತ್ತ ಗಮನ ಹರಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳು ಗ್ರಾಮಸ್ಥರ ಕಣ್ಣು ವರೆಸುವ ತಂತ್ರವಾಗಿ ಆಗಾಗ ಡಾಂಬರು ಹಾಕಿಸುತ್ತಾರೆ.
ಚುನಾವಣೆ ಮುಗಿದ ನಂತರ ಇತ್ತ ಸುಳಿಯುವುದೇ ಇಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಜಿಲ್ಲಾಡಳಿತ ಕೂಡಲೇ ಇತ್ತ ಗಮನ ಹರಿಸಿ ಟೆಂಡರ್ ಪ್ರಕ್ರಿಯೆ ಮುಗಿಸಬೇಕು. ಜತೆಗೆ ರಸ್ತೆ ಅಭಿವೃದ್ಧಿಪಡಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.