Advertisement
ಎನ್.ಆರ್.ಪುರ: ಗ್ರಾಮೀಣ ಭಾಗದಲ್ಲಿ ಎಲ್ಲಾ ಮನೆಗಳಲ್ಲೂ ಶೌಚಾಲಯ ನಿರ್ಮಿಸಿ ಬಯಲು ಬಹಿರ್ದೆಸೆಗೆ ಇತಿಶ್ರೀ ಹಾಡಬೇಕೆಂಬ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಉದ್ದೇಶ ಸಂಪೂರ್ಣ ಕಾರ್ಯಗತವಾಗಿಲ್ಲ ಎಂಬುದಕ್ಕೆ, ತಾಲೂಕಿನ ಗುಬ್ಬಿಗಾ ಗ್ರಾಪಂ ವ್ಯಾಪ್ತಿಯ ಸಿಂಸೆ ಬಳಿಯ ಸರ್ವೆ ನಂ. 50ರ ಬೋವಿ ಕಾಲೋನಿ ಸಾಕ್ಷಿಯಾಗಿದೆ.
Related Articles
Advertisement
ಶೌಚಾಲಯಗಳು ಇಲ್ಲದೇ ಮನೆಯವರು ಬಹಿರ್ದೆಸೆಗಾಗಿ ಕಾಲೋನಿಯ ಸಮೀಪದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಪ್ಲಾಂಟೇಷನ್ ಹಾಗೂ ಕೆರೆಯನ್ನು ಅವಲಂಬಿಸಿದ್ದಾರೆ. ಬಹಿರ್ದೆಸೆಗೆ ಹೋದಾಗ ಸ್ಥಳೀಯ ನಿವಾಸಿಗಳು ಇವರೊಂದಿಗೆ ನಿತ್ಯವೂ ಜಗಳವಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಹಿರ್ದೆಸೆಗೆ ಹೋಗುವ ಅರಣ್ಯ ಇಲಾಖೆಗೆ ಸೇರಿದ ಹಾಗೂ ಕೆರೆಯ ಸಮೀಪದ ವಾತಾವರಣದಲ್ಲಿ ಅನೈರ್ಮಲ್ಯವುಂಟಾಗಿ ದುರ್ವಾಸನೆ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು.
ನಾವು ಹಲವು ವರ್ಷಗಳಿಂದ ಗುಡಿಸಲು ಮನೆಯಲ್ಲಿಯೇ ವಾಸವಾಗಿದ್ದು, ಶೌಚಾಲಯ ಇಲ್ಲ, ಬಹಿರ್ದೆಸೆಗೆ ಪ್ಲಾಂಟೇಷನ್ ಅಥವಾ ಗದ್ದೆಯ ವ್ಯಾಪ್ತಿಯಲ್ಲಿರುವ ಕೆರೆಯ ಸಮೀಪ ಹೋಗಬೇಕಾಗಿದೆ. ವಯಸ್ಸಾದ ಹೆಣ್ಣುಮಕ್ಕಳು ಇದ್ದಾರೆ. ಬಹಿರ್ದೆಸೆಗೆ ಸಾಕಷ್ಟು ದೂರ ಹೋಗಬೇಕು. ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಿದರೂ ಪ್ರಯೋಜವಾಗಿಲ್ಲ. ಶೌಚಾಲಯ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ ಎಂದು ಕಾಲೋನಿ ನಿವಾಸಿ ಗಂಗಮ್ಮ ಸಮಸ್ಯೆಯ ಬಗ್ಗೆಅಲವತ್ತುಕೊಂಡರು.
ಗ್ರಾಮ ಪಂಚಾಯಿತಿಯವರು ನೀರಿನ ಕಂದಾಯ ವಸೂಲಿ ಮಾಡುತ್ತಾರೆ. ಮನೆಯ ಕಂದಾಯ ಕಟ್ಟಿಸಿಕೊಳ್ಳುವುದಿಲ್ಲ. ನಿವೇಶನದ ಸಮಸ್ಯೆ ನ್ಯಾಯಾಲಯದಲ್ಲಿರುವುದರಿಂದ ಅಲ್ಲಿ ಬಗೆಹರಿದ ಮೇಲೆ ಹಕ್ಕು ಪತ್ರ ನೀಡುತ್ತೇವೆ ಎಂಬ ಉತ್ತರ ನೀಡುತ್ತಾರೆ. ಮಕ್ಕಳು ತುರ್ತಾಗಿ ಬಹಿರ್ದೆಸೆಗೆ ಹೋಗಬೇಕಾದರೂ ಕಾಡಿಗೆ ಹೋಗಬೇಕು. ಸಂಜೆ ವೇಳೆ ಸಾಕಷ್ಟು ಸಮಸ್ಯೆಯಾಗಲಿದೆ.
ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡುತ್ತಿಲ್ಲ. ನಿವೇಶನದ ಹಕ್ಕು ಪತ್ರವಿಲ್ಲದೆ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶವಿಲ್ಲ. ಬಹಿರ್ದೆಸೆಗೆ ಹೋದಾಗ ಸ್ಥಳೀಯ ನಿವಾಸಿಗಳೊಂದಿಗೆ ಜಗಳವಾಗಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತಾಗಿದೆ ಎಂದು ಕಾಲೋನಿ ನಿವಾಸಿಗಳಾದ ಯೋಗೀಶ್ ಮತ್ತು ಸಂಜೀವಪ್ಪ ತಿಳಿಸಿದರು.