Advertisement

ಕಾಮನಕೂಡಿಗೆಯಲ್ಲಿ ಪುಂಡಪೋಕರಿಗಳ ಹಾವಳಿ!

06:43 PM Oct 18, 2019 | Team Udayavani |

ಎನ್‌.ಆರ್‌.ಪುರ: ಇಲ್ಲಿನ ಮಿನಿ ವಿಧಾನಸೌಧದ ಬಳಿ ಹಾದು ಹೋಗುವ ಕಾಮನಕೂಡಿಗೆ ಗ್ರಾಮದ ವ್ಯಾಪ್ತಿಯಲ್ಲಿ ಪುಂಡಪೋಕರಿಗಳ ಹಾವಳಿ ಮಿತಿ ಮೀರಿದ್ದು, ಸಂಜೆಯಾದರೆ ಆತಂಕ ಶುರುವಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Advertisement

ಇಲ್ಲಿನ ಮಿನಿ ವಿಧಾನಸೌಧ ಕಟ್ಟಡದಿಂದ ಕೂಗಳತೆ ದೂರದಲ್ಲಿ ಪ್ಲಾಂಟೇಷನ್‌ ಇದ್ದು, ಈ ಮಾರ್ಗದ ಮೂಲಕವೇ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾಮನಕೂಡಿಗೆ ಗ್ರಾಮಕ್ಕೆ ಹೋಗ ಬೇಕಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಸಂಜೆಯಾದ ಕೂಡಲೇ ಪುಂಡರ ಹಾವಳಿ ಹೆಚ್ಚಾಗುತ್ತದೆ.

ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿಯೇ ಬೇರೆ, ಬೇರೆ ವಾಹನಗಳಲ್ಲಿ ಬಂದು ಮದ್ಯಸೇವನೆ ಮಾಡುತ್ತಾ ವಿಪರೀತ ದಾಂಧಲೆ ಮಾಡುತ್ತಾರೆ. ರಸ್ತೆ ಪಕ್ಕದಲ್ಲಿ ಮಾತ್ರವಲ್ಲದೇ ಗ್ರಾಮದ ವ್ಯಾಪ್ತಿಯ ಎರಡು ಕೆರೆಗಳ ದಂಡೆಯ ಮೇಲೂ ಮೋಜು- ಮಸ್ತಿ ಮಾಡುತ್ತಾರೆ. ರಸ್ತೆಯ ಮಧ್ಯದಲ್ಲಿ ಹಾಗೂ ಕೆರೆ ದಂಡೆಯ ಮೇಲೂ ಮದ್ಯದ ಬಾಟಲಿ ಎಸೆದು ಹೋಗುತ್ತಾರೆ ಎಂದು ದೂರಿದ್ದಾರೆ.

ಈ ಮಾರ್ಗದಲ್ಲಿ ಬೀದಿ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ಪುಂಡರ ಹಾವಳಿ ಹೆಚ್ಚಾಗಿದ್ದು, ಅದಕ್ಕೆ ಹೆದರಿ ಸಂಜೆ 7 ಗಂಟೆಯ ನಂತರ ಈ ರಸ್ತೆಯಲ್ಲಿ ಮಹಿಳೆಯರು, ಮಕ್ಕಳು ಓಡಾಟ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಸಂಕಷ್ಟ ತೋಡಿಕೊಂಡಿದ್ದಾರೆ.

ವಾರದ ರಜಾ ದಿನಗಳಾದ ಶನಿವಾರ ಮತ್ತು ಭಾನುವಾರ ಸಂಜೆ ಸಾಕಷ್ಟು ವಾಹನಗಳನ್ನು ಇಲ್ಲಿನ ರಸ್ತೆ ಬದಿಯಲ್ಲಿ ನಿಲ್ಲಿಸಿ, ವಾಹನದಲ್ಲಿಯೇ ಕುಳಿತು ಮದ್ಯ ಸೇವನೆ ಮಾಡುತ್ತಾರೆ. ರಾತ್ರಿ 12 ಗಂಟೆಯಾದರೂ ಕೂಗಾಡುವುದು, ಗಲಾಟೆ ಇತ್ಯಾದಿ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಮಧ್ಯಾಹ್ನದ ವೇಳೆಯೇ ರಸ್ತೆ ಬದಿ ಹಾಗೂ ಪ್ಲಾಂಟೇಷನ್‌ನಲ್ಲಿ ಮೋಜು ಮಸ್ತಿ ಮಾಡುತ್ತಾರೆ.

Advertisement

ಪ್ಲಾಂಟೇಷನ್‌ನಲ್ಲಿ ಇಸ್ಪೀಟ್‌ ಆಡುವುದು, ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಮನೆಗಳಿದ್ದು, ಪಟ್ಟಣಕ್ಕೆ ಹತ್ತಿರದ ಮಾರ್ಗವಾಗಿ ಇದನ್ನೆ ಅವಲಂಬಿಸಿದ್ದೇವೆ. ಬೀದಿ ದೀಪದ ವ್ಯವಸ್ಥೆಯೂ ಇಲ್ಲದ ಕಾರಣ ಸಂಜೆಯಾದರೆ ಗ್ರಾಮದಿಂದ ಹೋರ ಹೋಗಲು ಹೆದರುವಂತಹ ಸ್ಥಿತಿ ಇದೆ ಎಂದು ಗ್ರಾಮಸ್ಥರೊಬ್ಬರು ಆತಂಕ ವ್ಯಕ್ತಪಡಿಸಿದರು.

ಮದ್ಯಪಾನ ಮಾಡುವವರು ಮದ್ಯದ ಬಾಟಲಿಗಳನ್ನು ರಸ್ತೆಗೆ ಎಸೆದು ಹೋಗುತ್ತಾರೆ. ಇತ್ತೀಚೆಗೆ ಕೆಲವರು ವಿವಾಹ ಮತ್ತಿತರ ಕಾರ್ಯಕ್ರಮಗಳಲ್ಲಿ ಉಳಿದ ಆಹಾರ ಪದಾರ್ಥ, ಪ್ಲಾಸ್ಟಿಕ್‌ ತ್ಯಾಜ್ಯ, ಸತ್ತ ದನ ಮತ್ತಿತರ ತ್ಯಾಜ್ಯಗಳನ್ನೂ ಇದೇ ರಸ್ತೆ ಪಕ್ಕದಲ್ಲಿರುವ ಪ್ಲಾಂಟೇಷ್‌ ನ್‌ನಲ್ಲಿ ತಂದು ಸುರಿಯುತ್ತಾರೆ. ಇದು ಇನ್ನಿಲ್ಲದ ದುರ್ವಾಸನೆ ಬೀರುತ್ತಿದೆ.

ಮದ್ಯ ವ್ಯಸನಿಗಳ ಹಾವಳಿಯಿಂದ ಮುಕ್ತಿ ಕೂಡಿಸುವಂತೆ ಪೊಲೀಸ್‌ ಇಲಾಖೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜವಾಗಿಲ್ಲ. ಪುಂಡರ ಹಾವಳಿ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಸಂಬಂಧಪಟ್ಟವರು ಈಗಾಲಾದರೂ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next