Advertisement

ಅನಾಹುತಕ್ಕೆ ಕಾದು ಕುಳಿತ ಹಿಳುವಳ್ಳಿ ಕೆರೆ

01:39 PM Mar 07, 2020 | Naveen |

ಎನ್‌.ಆರ್‌.ಪುರ: ಪಟ್ಟಣದ ಬಸ್‌ ನಿಲ್ದಾಣ ಮುಂಭಾಗದಲ್ಲಿರುವ ಹಿಳುವಳ್ಳಿಯ ಕೆರೆ ಯಾವುದೇ ತಡೆಗೋಡೆ ಇಲ್ಲದೆ ಅನಾಹುತಕ್ಕೆ ಕಾದು ಕುಳಿತಿದೆ. ಪಟ್ಟಣದ ಬಸ್‌ ನಿಲ್ದಾಣ ಹಾಗೂ ಡಿಸಿಎಂಸಿ ಪ್ರೌಢಶಾಲೆಯ ಮುಂಭಾಗದಲ್ಲಿರುವ ಸುಮಾರು ವರ್ಷಗಳ ಇತಿಹಾಸವುಳ್ಳ ಸ.ನಂ.196ರ ಕೆರೆಯಲ್ಲಿ ಜೊಂಡು ತುಂಬಿಕೊಂಡು ನೀರೇ ಕಾಣದಾಗಿದೆ.

Advertisement

ಇನ್ನು ಈ ಕೆರೆಯ ಸುತ್ತಾ ಯಾವುದೇ ತಡೆಗೋಡೆಗಳಾಗಲಿ, ನಟ್‌ಗಳಾಗಲಿ ಅಳವಡಿಸದೇ ಇರುವುದರಿಂದ ಇಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಇತ್ತೀಚೆಗೆ ಈ ಕೆರೆಯಲ್ಲಿ ಯುವಕನೋರ್ವ ಆತ್ಮಹತ್ಯಗೆ ಯತ್ನಿಸಿ, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತನನ್ನು ರಕ್ಷಿಸಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕೆರೆಯ ನೀರು ಎಷ್ಟು ಕಲ್ಮಷವಾಗಿದೆ ಎಂದರೆ, ಕೆರೆಗೆ ಬಿದ್ದ ಕೆಲವೇ ನಿಮಿಷಗಳಲ್ಲಿ ಯುವಕನ ಲಂಗ್ಸ್‌ ಇನ್ಫೆಕ್ಷನ್‌ ಆಗಿಹೋಗಿತ್ತು. ಚಿಕಿತ್ಸೆ ನೀಡಿದ ವೈದ್ಯರೇ ಆಶ್ಚರ್ಯರಾಗಿದ್ದರು. ಈ ಕೆರೆಗೆ ಪಟ್ಟಣದ ಪ್ರಮುಖ ರಸ್ತೆಗಳ ಚರಂಡಿ ನೀರು ನೇರವಾಗಿ ಬಿಡಲಾಗಿದೆ. ಅಲ್ಲದೇ, ಪಕ್ಕದಲ್ಲಿ ಹೊಂದಿಕೊಂಡಂತಿರುವ ವಸತಿ ಗೃಹ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಹೋಟೆಲ್‌, ಬೇಕರಿ ಇನ್ನು ಡಿಸಿಎಂಸಿ ಪ್ರೌಢಶಾಲೆ ಹಾಗೂ ವಸತಿ ನಿಲಯಗಳ ಶೌಚಗೃಹದ ನೀರೂ ಕೂಡ ಇದೇ ಕೆರೆಗೆ
ಬಿಡಲಾಗುತ್ತಿದೆ. ಇದರಿಂದ ನೀರು ಸಂಪೂರ್ಣವಾಗಿ ಕಲ್ಮಷವಾಗಿದೆ. ಈ ನೀರು ಇದೀಗ ಆ್ಯಸಿಡ್‌ ರೂಪಕ್ಕೆ ತೆರಳಿದೆ.

ಕೆರೆ ಅಭಿವೃದ್ಧಿ ಕಾಣದೆ ಅದೇಷ್ಟೋ ವರ್ಷಗಳೇ ಕಳೆದು ಹೋಗಿವೆ. ಕೆರೆಯಲ್ಲಿ ನೀರೇ ಕಾಣದ ಹಾಗೆ ಹುಲ್ಲು, ಜೊಂಡುಗಳು ಬೆಳೆದು ನಿಂತಿವೆ. ಅಲ್ಲದೇ, ಈ ಕೆರೆಗೆ ಅಕ್ಕಪಕ್ಕದ ಬೀದಿಯ ತ್ಯಾಜ್ಯ ವಸ್ತುಗಳನ್ನು ತಂದು ಸುರಿಯಲಾಗುತ್ತಿದೆ. ಇತ್ತೀಚೆಗಷ್ಟೆ ಯುವಕನೋರ್ವ ನಡೆದುಕೊಂಡು ಬರುವಾಗ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ. ಒಟ್ಟಾರೆಯಾಗಿ ಈ ಕೆರೆಗೆ ಯಾವುದೇ ತಡೆಗೋಡೆಗಳೇ ಇಲ್ಲದಿರುವುದು ಅಪಯಾಕ್ಕೆ ಕೈ ಬೀಸಿ ಕರೆಯುವಂತಿದೆ.

ಇನ್ನು ಸಾವಿರಾರು ಮಕ್ಕಳು ಈ ಕೆರೆಯ ಮುಂಭಾಗದ
ಡಿಸಿಎಂಎಸಿ ಶಾಲೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳು ಎಲ್ಲರೂ ಗುಂಪು ಗುಂಪಾಗಿ ನಡೆದುಕೊಂಡು ಬರುತ್ತಾರೆ. ಆಟವಾಡಿಕೊಂಡು ನಡೆದು ಬರುವಾಗ ಆಯತಪ್ಪಿ ಬೀಳುವ ಸಂಭವೂ ಇದೆ.

Advertisement

ಇನ್ನು ಈ ಕೆರೆ ಏರಿ ಮೇಲೆ ಸುಸಜ್ಜಿತವಾದ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿರುವುದರಿಂದ ವಾಹನಗಳ ಸಂಚಾರವೂ ಕುಡ ಅಧಿ ಕವಾಗಿವೆ. ಇನ್ನು ಶಾಲೆ-ಕಾಲೇಜಿಗೆ ತಮ್ಮ ಮಕ್ಕಳನ್ನು ಬಿಡಲು ತಾಯಂದಿರು ಸ್ಕೂಟಿ ಮತ್ತಿತರ ಬೈಕ್‌ಗಳಲ್ಲಿ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಅನಾಹುತಗಳು ಸಂಭವಿಸಬಹುದಾಗಿದೆ. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಯವರಾಗಲಿ, ಜನಪ್ರತಿನಿಧಿ ಗಳಾಗಲಿ ಅಥವಾ ಶಾಲಾ ಆಡಳಿತ ಮಂಡಳಿಯಾಗಲಿ ಗಮನ ಹರಿಸಿ, ಕೆರೆಗೆ ತಡೆಗೋಡೆ ನಿರ್ಮಿಸಿ, ಕೆರೆಯನ್ನು ಅಭಿವೃದ್ಧಿಪಡಿಸಬೇಕಿದೆ. ಕೆರೆಗೆ ಯಾವುದೇ ಶೌಚಗೃಹದ ಹಾಗೂ ಚರಂಡಿಗಳ ನೀರು ಬಾರದ ಹಾಗೆ ಎಚ್ಚರ ವಹಿಸಬೇಕಾಗಿದೆ. ಇಲ್ಲವಾದಲ್ಲಿ ಅನಾಹುತ ತಪ್ಪಿದ್ದಲ್ಲ.

ಬೇಕಿದೆ ತಡೆಗೋಡೆ: ಜಾನುವಾರುಗಳು ನೀರಿನ ಮೇಲಿನ ಹುಲ್ಲನ್ನು ನೋಡಿ ಮೇಯಲು ಕೆರೆಗೆ ಇಳಿಯುತ್ತಿವೆ. ಇಂತಹ ಸಂದರ್ಭದಲ್ಲಿ ದನಕರುಗಳೂ ಸಹ ಈ ಕೆರೆಗೆ ಬೀಳುವ ಸಾಧ್ಯತೆಗಳಿವೆ. ಕೆರೆಯ ಸುತ್ತಾ ತಡೆಗೋಡೆ ನಿರ್ಮಿಸಬೇಕು. ಅಥವಾ ಕೆರೆಯ ಸುತ್ತಾ ನೆಟ್‌ನ್ನಾದರೂ ಅಳವಡಿಸಬೇಕಾಗಿದೆ. ಇನ್ನು ಈ ಕೆರೆಯಲ್ಲಿರುವ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್‌ಗಳನ್ನು ಜಾನುವಾರುಗಳು ತಿಂದು ಸಾವನ್ನಪ್ಪುವ ಸಂಭವವಿದೆ.

ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ : ಈ ಕೆರೆಗೆ ಬಹಳಷ್ಟು ವರ್ಷಗಳ ಇತಿಹಾಸವಿದ್ದು, ಅತ್ಯಂತ ಹಳೆಯ ಕೆರೆಯಾಗಿದೆ. ಕೆರೆ ಅಭಿವೃದ್ಧಿಪಡಿಸಿದರೆ ಊರಿಗೆ ಒಳಿತಾಗುತ್ತದೆ. ಈ ಕೆರೆ ವಾರ್ಡ್‌ ನಂ.1ರ ವ್ಯಾಪ್ತಿಗೆ ಬರುತ್ತದೆ. ಆದರೆ, ಹಿಂದೆ ಪ.ಪಂ. ವ್ಯಾಪ್ತಿಯ ವಾರ್ಡ್‌ 1 ರಿಂದ ಆಯ್ಕೆಯಾದ ಯಾವುದೇ ಜನಪ್ರತಿನಿಧಿಗಳೂ ಕೂಡ ಈ ಕೆರೆ ಅಭಿವೃದ್ಧಿಗೆ ಗಮನ ಹರಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ಮುಂದಾದರೂ ಹಾಲಿ ಇರುವ ಈ ವಾರ್ಡಿನ ಜನಪ್ರತಿನಿಧಿ ಯಾದರೂ ಈ ಕೆರೆ ಅಭಿವೃದ್ಧಿಗೆ ಕಾಯಕಲ್ಪ ನೀಡಬೇಕೆಂಬುದು ವಾರ್ಡಿನ ಜನರ ಒತ್ತಾಯವಾಗಿದೆ.

ಫ್ಲಡ್ ಅನುದಾನದಡಿ 18 ಲಕ್ಷ ರೂ. ವೆಚ್ಚದಲ್ಲಿ ಕೆರೆ ಏರಿಗೆ ದಂಡು ಹಾಗೂ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಆಡಳಿತ ಮಂಡಳಿ ರಚನೆಯಾದ ಬಳಿಕ ಸಭೆಯಲ್ಲಿ ಕೆರೆ ಅಭಿವೃದ್ಧಿ ಬಗ್ಗೆ ಚರ್ಚಿಸಿ, ಕೆರೆ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಈ ಕೆರೆ ನಿರ್ವಹಣೆ ಜಿ.ಪಂ. ವ್ಯಾಪ್ತಿಗೆ ಬರುತ್ತದೆ.
ಕುರಿಯಕೋಸ್‌,
ಪಪಂ ಮುಖ್ಯಾಧಿಕಾರಿ

ಪಟ್ಟಣದ ಕೆರೆ ಅತ್ಯಂತ ಹಳೆಯ ಕೆರೆಯಾಗಿದೆ. ಕೇವಲ ರಸ್ತೆ ಕಲ್ಪಿಸುವ ಉದ್ದೇಶದಿಂದ ಕೆರೆ ದಂಡು ರಿಪೇರಿ ಮಾಡಿ, ಕಾಂಕ್ರೀಟ್‌ ರಸ್ತೆ ಮಾತ್ರ ಮಾಡಲಾಗಿದೆ. ಆದರೆ, ಈ ಕೆರೆ ಸುತ್ತಾ ಭದ್ರತೆ ಅವಶ್ಯಕತೆಯಿದೆ. ಶಾಲೆಯ ಸಣ್ಣಪುಟ್ಟ ಮಕ್ಕಳು ಸೈಕಲ್‌ನಲ್ಲಿ ಓಡಾಡುವಾಗ ಅನಾಹುತವಾಗಬಹುದು. ಕೂಡಲೇ ಸಂಬಂಧಪಟ್ಟ ಇಲಾಖೆಯಾಗಲಿ, ಜನಪ್ರತಿನಿಧಿ ಯಾಗಲಿ ಕೆರೆಗೆ ನೆಟ್‌ ಅಥವಾ ತಡೆಗೋಡೆ ನಿರ್ಮಿಸಬೇಕು.
ಸಿ.ರಾಘವೇಂದ್ರ,
ಸ್ಥಳೀಯರು

ಪ್ರಶಾಂತ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next