Advertisement

ಸಾವಿನಿಂದ ಪಾರಾದ ಶುನಃಶೇಪ!

09:08 AM Apr 28, 2019 | Hari Prasad |

“ಹಿರಿಯ ಮಗನನ್ನು ಯಾವ ತಂದೆಯೂ ಬಿಟ್ಟು ಕೊಡಲಾರ’ ಎಂದು ಋಚೀಕ ಮುನಿ ಹೇಳಿದನು. ಕಿರಿಯ ಮಕ್ಕಳೆಂದರೆ ಎಲ್ಲ ಅಮ್ಮಂದಿರಿಗೂ ಅತಿಯಾದ ಪ್ರೀತಿ ಎಂದು ಋಚೀಕನ ಪತ್ನಿ ನುಡಿದಳು. ಮಧ್ಯದವನಾಗಿದ್ದ ಶುನಃಶೇಪ, ಅಪ್ಪ-ಅಮ್ಮ ಇಬ್ಬರಿಗೂ ಬೇಡವಾದವ ನಾನು ಎಂದು ನೊಂದುಕೊಂಡ…

Advertisement

ವಿಶ್ವಾಮಿತ್ರರು ತಮ್ಮ ತಪಸ್ಸಿನ ಬಲದಿಂದ ತ್ರಿಶಂಕುವಿನ ಇಚ್ಛೆಯನ್ನು ಪೂರ್ಣಗೊಳಿಸಿದ ಬಳಿಕ, ದಕ್ಷಿಣ ದಿಕ್ಕಿನಲ್ಲಿ ಮಾಡಿದ ತಪಸ್ಸಿಗೆ ವಿಘ್ನಗಳು ಉಂಟಾದವು. ಇದರಿಂದ ಚಿಂತಿತರಾದ ಅವರು ಬೇರೆ ದಿಕ್ಕಿಗೆ ಹೋಗಿ ತಪಸ್ಸನ್ನು ಪೂರ್ಣಗೊಳಿಸುವ ಬಗ್ಗೆ ಚಿಂತಿಸಿದರು. ಅದರಂತೆ ಪತ್ನಿ , ಪುತ್ರ, ಶಿಷ್ಯರಿಂದ ಕೂಡಿಕೊಂಡು, ಪುಷ್ಕರದ ಕಡೆಗೆ ಹೋಗಿ ಕೇವಲ ಫ‌ಲ, ಜಲಾದಿಗಳನ್ನು ಸ್ವೀಕರಿಸುತ್ತಾ ಕಠಿಣವಾದ ತಪಸ್ಸನ್ನು ಮಾಡಲು ಪ್ರಾರಂಭಿಸಿದರು.

ಇದೇ ಸಮಯದಲ್ಲಿ ಅಯೋಧ್ಯೆಯ ಮಹಾರಾಜನಾದ ಅಂಬರೀಷನು ಒಂದು ಯಜ್ಞದ ಸಿದ್ಧತೆಯಲ್ಲಿ ತೊಡಗಿದ್ದನು. ಆಗ ಇಂದ್ರನು ಅಂಬರೀಷನ ಯಜ್ಞದ ಪಶುವನ್ನು ಕದ್ದುಬಿಟ್ಟನು. ಆಗ ಪುರೋಹಿತರು- “ಎಲೈ ರಾಜನೇ ! ನಿನ್ನ ದುರ್ನೀತಿಯಿಂದಾಗಿ ಇಲ್ಲಿದ್ದ ಯಜ್ಞ ಪಶುವು ಕಳೆದುಹೋಗಿದೆ. ಯಾವ ರಾಜನು ತನ್ನ ಯಜ್ಞ ಪಶುವನ್ನು ಬೇಕಾದ ರೀತಿಯಲ್ಲಿ ಸಂರಕ್ಷಿಸಲು ಅಸಮರ್ಥನಾಗುವನೋ ಅವನನ್ನು ಅನೇಕ ದೋಷಗಳು ನಾಶ ಮಾಡಿ ಬಿಡುತ್ತವೆ. ಯಜ್ಞದ ಕರ್ಮವು ಪ್ರಾರಂಭವಾಗುವ ಮೊದಲೇ, ಕಾಣೆಯಾಗಿರುವ ಯಜ್ಞ ಪಶುವನ್ನು ಹುಡುಕಿ ಬೇಗನೆ ಇಲ್ಲಿಗೆ ತೆಗೆದು ಕೊಂಡು ಬಾ. ಅದು ಸಾಧ್ಯವಾಗದಿದ್ದಲ್ಲಿ ಅದರ ಪ್ರತಿನಿಧಿಯಾಗಿ ಒಬ್ಬ ಬಾಲಕನನ್ನು ಖರೀದಿಸಿ ಕರೆದುಕೊಂಡು ಬಾ’ ಎಂದು ಸೂಚಿಸಿದರು.

ಪುರೋಹಿತರ ಮಾತಿನಂತೆ ರಾಜ, ಸಹಸ್ರಾರು ಗೋವುಗಳನ್ನೂ, ಮುತ್ತು, ರತ್ನ, ಸ್ವರ್ಣಾದಿಗಳನ್ನೂ ಕೊಟ್ಟು ಬಾಲಕನನ್ನು ಖರೀದಿಸಲು ಹೊರಟನು. ಆದೇ ಪ್ರಕಾರ, ಬೇರೆ ಬೇರೆ ದೇಶ, ನಗರಗಳಲ್ಲಿ, ವನಗಳಲ್ಲಿ ಹಾಗೂ ಪವಿತ್ರವಾದ ಆಶ್ರಮಗಳಲ್ಲಿ ತಮಗೆ ಬೇಕಾದ ಬಾಲಕನನ್ನು ಹುಡುಕುತ್ತಾ, ಋಚೀಕ ಮುನಿಗಳು ತಪಸ್ಸು ಮಾಡುತ್ತಿರುವ ಬೃಗುತುಂಗ ಪರ್ವತದ ತಪ್ಪಲಿಗೆ ಬಂದನು. ಅಲ್ಲಿ, ಪತ್ನಿ ಹಾಗೂ ಪುತ್ರರಿಂದ ಕೂಡಿ ಧ್ಯಾನದಲ್ಲಿರುವ ಋಚೀಕ ಮುನಿಯನ್ನು ಕಂಡು, ಅವರಿಗೆ ನಮಸ್ಕರಿಸಿ, ತಾನು ಬಂದ ಉದ್ದೇಶವನ್ನು ತಿಳಿಸಿದನು.

ಹತ್ತಾರು ದೇಶಗಳನ್ನು ಸುತ್ತಿಬಂದರೂ ಯಜ್ಞಕ್ಕೆ ಬಲಿಯಾಗಲು ಒಪ್ಪುವ ಒಬ್ಬನೇ ಒಬ್ಬ ಬಾಲಕನೂ ನನಗೆ ಗೋಚರಿಸಲಿಲ್ಲ. ಪರಮ ಸಾತ್ವಿಕರಾದ ತಾವು ನನ್ನ ಮೇಲೆ ದಯೆಯನ್ನು ತೋರಿ ಒಂದು ಲಕ್ಷ ಗೋವುಗಳನ್ನು ,ಅಮಿತವಾದ ಮುತ್ತು , ರತ್ನ, ಸ್ವರ್ಣಾದಿಗಳನ್ನೂ ಸ್ವೀಕರಿಸಿ ತಮ್ಮ ಒಬ್ಬ ಪುತ್ರನನ್ನು ನನಗೆ ದಯಪಾಲಿಸಬೇಕೆಂದು ವಿನಮ್ರವಾಗಿ ಬೇಡಿದನು.

Advertisement

ಆಗ ಋಚೀಕನು, “ನರಶ್ರೇಷ್ಠನೇ ! ನಾನು ನನ್ನ ಜೇಷ್ಠ ಪುತ್ರನನ್ನು ಎಂದಿಗೂ ಮಾರುವುದಿಲ್ಲ’ ಎಂದರು. ಋಷಿ ಪತ್ನಿಯು ಬಂದು, “ರಾಜನೇ ! ಜೇಷ್ಠಪುತ್ರನನ್ನು ಯಾವುದೇ ಕಾರಣಕ್ಕೂ ಮಾರುವುದು ಯೋಗ್ಯವಲ್ಲವೆಂದು ಭಾರ್ಗವರು ಹೇಳಿದ್ದಾರೆ. ಅದೇ ಪ್ರಕಾರ, ಎಲ್ಲರಿಗಿಂತ ಕಿರಿಯ ಪುತ್ರನು ನನಗೆ ಬಹಳ ಪ್ರಿಯನಾಗಿರುವುದರಿಂದ ಆತನನ್ನು ನಿಮಗೆ ಕೊಡಲಾರೆನು’ ಎಂದು ಹೇಳಿದಳು.

ಆಗ ನಡುವಣ ಪುತ್ರನಾದ ಶುನಃಶೇಪನು-ರಾಜನೇ, ತಂದೆಯು ಹಿರಿಯವನನ್ನೂ, ತಾಯಿಯು ಕಿರಿಯವನನ್ನೂ ಮಾರಲು ಒಪ್ಪದಿರುವುದರಿಂದ ಇವರಿಬ್ಬರ ದೃಷ್ಟಿಯಲ್ಲಿ ಮಧ್ಯದವನಾದ ನಾನು ಕ್ರತುಪಶುವಾಗಲು ಯೋಗ್ಯನಾಗಿದ್ದೇನೆ. ಆದ್ದರಿಂದ ನೀನು ನನ್ನನ್ನೇ ಕರೆದುಕೊಂಡು ಹೋಗು’ ಎಂದು ಅಸಹಾಯಕನಾಗಿ ಹೇಳಿದನು.

ಇದನ್ನು ಕೇಳಿದ ಮಹಾರಾಜನು ಸಂತೋಷಗೊಂಡು, ಅಪರಿಮಿತವಾದ ಸ್ವರ್ಣ, ಮುತ್ತು, ರತ್ನಾದಿಗಳನ್ನೂ, ಸಹಸ್ರಾರು ಗೋವುಗಳನ್ನೂ ಋಷಿದಂಪತಿಗಳಿಗೆ ಒಪ್ಪಿಸಿ, ಅವರ ಒಪ್ಪಿಗೆಯೊಂದಿಗೆ ಶುನಃಶೇಪನನ್ನು ಕರೆದುಕೊಂಡು ಹೊರಟನು. ಬಹಳ ದೂರದ ಪ್ರಯಾಣದ ಬಳಿಕ ಮಧ್ಯಾಹ್ನದ ಸಮಯಕ್ಕೆ ಅಂಬರೀಷನು ಪುಷ್ಕರ ತೀರ್ಥದ ಬಳಿಗೆ ಬಂದು ಅಲ್ಲಿ ವಿಶ್ರಾಂತಿ ಪಡೆಯತೊಡಗಿದನು.

ಆಗ ಶುನಃಶೇಪನು ಜ್ಯೇಷ್ಠ ಪುಷ್ಕರದಲ್ಲಿ ಋಷಿಗಳೊಂದಿಗೆ ತಪಸ್ಸನ್ನಾಚರಿಸುತ್ತಿದ್ದ ವಿಶ್ವಾಮಿತ್ರರನ್ನು ಕಂಡು, ಹಸಿವು ಬಾಯಾರಿಕೆಯಿಂದ ಬಳಲಿ ಅವರ ತೊಡೆಯ ಮೇಲೆ ಬಿದ್ದುಬಿಟ್ಟನು. ಆಗ ಮುನಿಗಳು ಅವನನ್ನು ಉಪಚರಿಸಲು, ಶುನಃಶೇಪನು ನನಗೆ ತಂದೆ, ತಾಯಿ ಬಂಧು ಬಾಂಧವರು ಯಾರೂ ಇಲ್ಲ, ನೀವೇ ನನ್ನ ರಕ್ಷಿಸಬೇಕು ಎಂದು ಕೇಳಿಕೊಂಡನು.

ಶುನಃಶೇಪನ ಮಾತುಗಳನ್ನು ಕೇಳಿದ ವಿಶ್ವಾಮಿತ್ರರು ಅವನನ್ನು ಸಾಂತ್ವನಗೊಳಿಸಿ, ತನ್ನ ಮಕ್ಕಳನ್ನು ಕುರಿತು “ಮಕ್ಕಳಿರಾ ! ಈ ಮುನಿಕುಮಾರನು ನನ್ನಿಂದ ರಕ್ಷಣೆಯನ್ನು ಬಯಸುತ್ತಿದ್ದಾನೆ. ನೀವು ನಿಮ್ಮ ಜೀವ ಕೊಟ್ಟು ಇವನನ್ನು ರಕ್ಷಿಸಿ’ ಎಂದು ಹೇಳಿದನು. ಆಗ ಮಧುತ್ಛಂದಾದಿ ವಿಶ್ವಾಮಿತ್ರರ ಮಕ್ಕಳು ತಂದೆಯನ್ನು ಕುರಿತು -“ನೀವು ನಿಮ್ಮ ಪುತ್ರರನ್ನು ಬಲಿಕೊಟ್ಟು ಬೇರೆಯವರ ಮಗನನ್ನು ಹೇಗೆ ರಕ್ಷಿಸುವಿರಿ ?’ ಎಂದು ಅವಹೇಳನಕಾರಿಯಾಗಿ ಮಾತನಾಡಿದರು. ಇದನ್ನು ಕೇಳಿದ ವಿಶ್ವಾಮಿತ್ರರು ಸಿಟ್ಟಿನಿಂದ “ನನ್ನ ಆಜ್ಞೆಯನ್ನು ಉಲ್ಲಂಘಿಸಿದ ನೀವೆಲ್ಲರೂ ವಸಿಷ್ಠರ ಪುತ್ರರಂತೆ ನಾಯಿಯ ಮಾಂಸ ತಿನ್ನುವ ಮುಷ್ಟಿಕ ಜಾತಿಯಲ್ಲಿ ಹುಟ್ಟಿ ಸಹಸ್ರಾಬ್ದ ಸಮಯ ಭೂಮಿಯಲ್ಲಿ ಇರಿ’ ಎಂದು ಶಪಿಸಿಬಿಟ್ಟರು.

ನಂತರ ವಿಶ್ವಾಮಿತ್ರರು-“ಎಲೈ ಶುನಃಶೇಪನೇ ! ಅಂಬರೀಷನು ಯಜ್ಞದಲ್ಲಿ ನಿನ್ನನ್ನು ದರ್ಭಾದಿ ಪವಿತ್ರ ಪಾಶಗಳಿಂದ ಬಂಧಿಸಿ ರಕ್ತ ಪುಷ್ಪ ಹಾಗೂ ರಕ್ತ ಚಂದನದಿಂದ ಅಲಂಕರಿಸುತ್ತಾನೆ. ಆಗ ನೀನು ಯೂಪದ ಬಳಿಗೆ ಹೋಗಿ ಇಂದ್ರ ಹಾಗು ವಿಷ್ಣುವನ್ನು ಸ್ತುತಿಸುವ ಎರಡು ದಿವ್ಯ ಸ್ತುತಿಗಳನ್ನು ಗಾನ ಮಾಡಿದರೆ ನಿನ್ನ ಇಷ್ಟಾರ್ಥ ಸಿದ್ಧಿಯಾಗುವುದು’ ಎಂದು ಹೇಳಿ ಆ ಎರಡು ದಿವ್ಯ ಸ್ತುತಿಗಳನ್ನು ಉಪದೇಶಿಸಿದರು.

ತದನಂತರ ಶುನಃಶೇಪನು ಅಂಬರೀಶನೊಂದಿಗೆ ಹೊರಟು ಯಜ್ಞ ಶಾಲೆಗೆ ಬಂದನು. ಅಲ್ಲಿ ರಾಜನು ಪುರೋಹಿತರ ನಿರ್ದೇಶನದಂತೆ ಮುನಿಕುವರನನ್ನು ಕುಶಗಳಿಂದ ಬಂಧಿಸಿ ಯಜ್ಞ ಪಶುವಿನಂತೆ ಅಲಂಕರಿಸಿ ಯೂಪಕ್ಕೆ ಕಟ್ಟಿಹಾಕಿದನು. ಆಗ ಮುನಿಪುತ್ರನು ಇಂದ್ರ ಹಾಗೂ ಉಪೇಂದ್ರನನ್ನು ಯಥಾವತ್ತಾಗಿ ಸ್ತುತಿಸಿದನು. ಆಗ ಸಹಸ್ರಾಕ್ಷ ಇಂದ್ರನು ಬಹಳ ಸಂತೋಷಗೊಂಡು, ಶುನಃಶೇಪನಿಗೆ ದೀರ್ಘಾಯುಷ್ಯವನ್ನು ಕರುಣಿಸಿದನು. ಅಂಬರೀಷ ಮಹಾರಾಜನು ದೇವೇಂದ್ರನ ಕೃಪೆಯಿಂದ ಉತ್ತಮ ಸಮೃದ್ಧಿಯನ್ನು ಹೊಂದಿದನು.

— ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next