ಕನ್ಯಾ ಕುಬjದಲ್ಲಿ ಅಜಾಮಿಳ ಎಂಬ ಬ್ರಾಹ್ಮಣನಿದ್ದ. ಅಜಾಮಿಳ ವೇದಗಳನ್ನು ಓದಿದ್ದ, ಆಚಾರಶೀಲ, ದೈವಭಕ್ತ. ಒಂದು ದಿನ ಅವನು ಹೂವು, ಹಣ್ಣು, ಸಮಿತ್ತುಗಳನ್ನು ತರಲು ಕಾಡಿಗೆ ಹೋದ. ಅಲ್ಲಿ ಚೆಲುವೆಯೊಬ್ಬಳನ್ನು ನೋಡಿದ. ಅವಳು ವಿಪರೀತ ಹೆಂಡ ಕುಡಿದಿದ್ದಳು. ಅವಳ ಜೊತೆಗೆ ಒಬ್ಬ ಯುವಕ. ಅವನೂ ಮೈಮರೆಯುವಷ್ಟು ಹೆಂಡ ಕುಡಿದಿದ್ದ. ಇಬ್ಬರೂ ಹುಚ್ಚುಹುಚ್ಚಾಗಿ ಕುಣಿಯುತ್ತಿದ್ದರು. ಅವಳನ್ನು ನೋಡಿ ಅಜಾಮಿಳ ಆಕರ್ಷಿತನಾದ. ಅಂದಿನಿಂದ ಅವನಿಗೆ ಅವಳ ಪ್ರೀತಿಯನ್ನು ಪಡೆಯುವುದೇ ಮುಖ್ಯವಾಯಿತು.
ಅವಳಿಗೆ ಅಜಾಮಿಳ ಒಂದಿಷ್ಟು ಉಡುಗೊರೆಗಳನ್ನು ಕೊಟ್ಟ. ಅವಳು ಹೇಳಿದಂತೆ ಕೇಳಿದ. ಅವಳಿಗಾಗಿ ಹಣ ಖರ್ಚು ಮಾಡಿದ. ಕಡೆಗೆ ಅವಳು ಅವನಿಗೆ ಒಲಿದಳು. ಅವಳ ಒಡನಾಟದಲ್ಲಿ ಅವನಿಗೆ ಉಳಿದುದೆಲ್ಲ ಮರೆಯಿತು. ದೇವರ ಧ್ಯಾನ, ಪೂಜೆ, ಪುಣ್ಯಗ್ರಂಥಗಳ ಅಧ್ಯಯನ… ಎಲ್ಲವನ್ನೂ ಬಿಟ್ಟು ಅವಳ ಜತೆಗೆ ಕಾಲ ಕಳೆದ. ಅವರಿಗೆ ಹತ್ತು ಮಕ್ಕಳು. ಕಡೆಯ ಮಗನ ಹೆಸರು ನಾರಾಯಣ. ಈ ಮಗನೆಂದರೆ ಅಜಾಮಿಳನಿಗೆ ಪ್ರಾಣ. ತಾನೇ ಅವನಿಗೆ ಊಟ ಮಾಡಿಸುವನು, ಮಲಗಿಸುವನು, ಅವನೊಡೆಯೇ ಮಾತು, ಅವನೊಡನೆಯೇ ಆಟ.
ಅಜಾಮಿಳನಿಗೆ ಮುಪ್ಪು ಬಂದಿತು. ಆದರೂ ಹೆಂಡತಿ ಮತ್ತು ನಾರಾಯಣನ ಮೋಹ ಕಡಿಮೆ ಆಗಲಿಲ್ಲ. ಅವನ ಮರಣ ಕಾಲ ಬಂದಿತು. ಯಮದೂತರು ಅವನ ಮುಂದೆ ನಿಂತರು. ಅಜಾಮಿಳನು ಹೆದರಿ ಗಡಗಡ ನಡುಗಿದ. ಮಗನನ್ನು ಸ್ಮರಿಸಿಕೊಂಡು “ನಾರಾಯಣ’ ಎಂದು ಕೂಗಿದ. ಕೂಡಲೇ ಶ್ರೀಮನ್ನಾರಾಯಣನ ದೂತರು ಪ್ರತ್ಯಕ್ಷರಾದರು. ಅಜಾಮಿಳನ ಜೀವವನ್ನು ಕೊಂಡೊಯ್ಯುವುದರಲ್ಲಿದ್ದ ಯಮದೂತರನ್ನು ತಡೆದರು. “ಇವನನ್ನು ನರಕಕ್ಕೆ ಕರೆದೊಯ್ದು, ಶಿಕ್ಷೆಗೆ ಗುರಿಪಡಿಸುತ್ತೇವೆ. ನೀವು ಯಾರು ನಮ್ಮ ಕೆಲಸಕ್ಕೇಕೆ ಅಡ್ಡಿಪಡಿಸುತ್ತೀರಿ?’ ಎಂದು ಯಮದೂತರು ಕೇಳಿದರು.
“ನಾವು ವಿಷ್ಣುವಿನ ಸೇವಕರು. ಈತ ಪಾಪಗಳನ್ನು ಮಾಡಿದ್ದಾನೆ, ನಿಜ. ಆದರೆ, ಮರಣಕ್ಕೆ ಮೊದಲು ಶ್ರೀಮನ್ನಾರಾಯಣನ ಹೆಸರನ್ನು ಸ್ಮರಿಸಿದ್ದಾನೆ. ಇವನನ್ನು ನರಕಕ್ಕೆ ಕರೆದೊಯ್ಯಲಾಗದು’ ಎಂದರು. ಯಮದೂತರಿಗೂ, ಶ್ರೀಮನ್ನಾರಾಯಣನ ದೂತರಿಗೂ ದೊಡ್ಡ ಚರ್ಚೆ ನಡೆಯಿತು. ಯಮದೂತರು, “ಈತ ಕಡೆಗೆ ಕರೆದದ್ದು ಶ್ರೀಮನ್ನಾರಾಯಣನನ್ನು ಅಲ್ಲ, ತನ್ನ ಮಗ ನಾರಾಯಣನನ್ನು’ ಎಂದು ವಾದಿಸಿದರು. ವಿಷ್ಣುದೂತರು, “ಹೇಗೇ ಆಗಲಿ, ಅವನು ವಿಷ್ಣುವಿನ ಹೆಸರನ್ನು ಸ್ಮರಿಸಿದ್ದಾನೆ. ಆದುದರಿಂದ ಅವನ ಪಾಪಗಳೆಲ್ಲ ಪರಿಹಾರವಾಗಿವೆ. ನಿಮ್ಮ ಪ್ರಭುವಾದ ಯಮಧರ್ಮರಾಯನನ್ನು ಕೇಳಿ ತಿಳಿದುಕೊಳ್ಳಿ’ ಎಂದರು.
ಯಮದೂತರು ಅಜಾಮಿಳನನ್ನು ಬಿಟ್ಟು ತಮ್ಮ ಪ್ರಭುವಿನ ಬಳಿಗೆ ಹೋಗಿ ನಡೆದಿದ್ದನ್ನು ವಿವರಿಸಿದರು. ಯಮಧರ್ಮನು, “ಒಂದು ಬಾರಿ ಶ್ರೀಮನ್ನಾರಾಯಣನ ಹೆಸರನ್ನು ಹೇಳಿದರೆ ಮನುಷ್ಯನ ಪಾಪಗಳೆಲ್ಲ ಪರಿಹಾರವಾಗುತ್ತವೆ’ ಎಂದ.
ಯಮದೂತರಿಗೂ ವಿಷ್ಣುದೂತರಿಗೂ ನಡೆದ ಸಂಭಾಷಣೆಯನ್ನು ಅಜಾಮಿಳನು ಕೇಳಿದ. ಅವನಿಗೆ ನಾಚಿಕೆ ಆಯಿತು. ಪಶ್ಚಾತ್ತಾಪವಾಯಿತು. ಸಂಸಾರವನ್ನು ಬಿಟ್ಟು ದೂರ ಹೋಗಿ, ಗಂಗಾ ನದಿಯ ತೀರದಲ್ಲಿ ಭಗವಂತನ ಧ್ಯಾನ, ತಪಸ್ಸುಗಳಲ್ಲಿ ನಿರತನಾದ. ವಿಷ್ಣುದೂತರು ಬಂದು ಅವನನ್ನು ವೈಕುಂಠಕ್ಕೆ ಕರೆದುಕೊಂಡು ಹೋದರು.
– ಎಲ್. ಎಸ್. ಶೇಷಗಿರಿ ರಾವ್
(“ಕಿರಿಯರ ಭಾಗವತ’ ಪುಸ್ತಕದಿಂದ)