Advertisement

ಆಧುನಿಕ ತಂತ್ರಜ್ಞಾನಕ್ಕೆ ಪುರಾಣವೇ ಮೂಲ

07:11 AM Jun 29, 2019 | Team Udayavani |

ಬೆಂಗಳೂರು: ವೇದ, ಪುರಾಣ, ರಾಮಾಯಣ ಹಾಗೂ ಮಹಾಭಾರತದ ಅನೇಕ ಅಂಶಗಳ ಆಧಾರದಲ್ಲಿ ಆಧುನಿಕ ತಂತ್ರಜ್ಞಾನಗಳು ಹುಟ್ಟಿಕೊಳ್ಳುತ್ತಿವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅಭಿಪ್ರಾಯಪಟ್ಟರು.

Advertisement

ಜಯನಗರದ ನ್ಯಾಷನಲ್‌ ಕಾಲೇಜಿನಲ್ಲಿ ಶುಕ್ರವಾರ ಮೊದಲ ವರ್ಷದ ಪದವಿ ತರಗತಿ ಮತ್ತು ಡಾಟಾ ಸೈನ್ಸ್‌, ಇಂಟರ್‌ನೆಟ್‌ ಆಫ್ ಥಿಂಗ್ಸ್‌, ಬಯೋ ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ಹೊಸ ಕೋರ್ಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು.

ಮುಂಬೈನಿಂದ ಅಹಮದಾಬಾದ್‌ಗೆ ಈಗ ಬುಲೆಟ್‌ ಟ್ರೈನ್‌ ಸಿದ್ಧವಾಗುತ್ತಿದೆ. ಬುಲೆಟ್‌ ಟ್ರೈನ್‌ ಜಪಾನ್‌ ತಂತ್ರಜ್ಞಾನ ಎಂದೆಲ್ಲ ಹೇಳುತ್ತಾರೆ. ಮನುಷ್ಯನಿಗೆ ರೊಬೋಟ್‌ ತಲೆ ಜೋಡಣೆ ಪ್ರಯತ್ನ ಈಗ ನಡೆಯುತ್ತಿದೆ.

ಇದನ್ನು ಗಣಪತಿಗೆ ಆನೆ ಸೊಂಡಿಲು ಜೋಡಿಸುವ ಮೂಲಕ ಈಶ್ವರ ಈ ಪ್ರಯೋಗವನ್ನು ಬಹಳ ಹಿಂದೆಯೇ ಮಾಡಿದ್ದ. ಹೀಗಾಗಿ ಬಹುತೇಕ ತಂತ್ರಜ್ಞಾನಗಳು ಭಾರತೀಯ ವೇದ, ಪುರಾಣ, ಮಹಾಭಾರತ, ರಾಮಾಯಣದಲ್ಲಿ ಉಲ್ಲೇಖೀತ ಅಂಶದ ಅಧಾರದಲ್ಲಿ ಬರುತ್ತಿವೆ ಎಂದು ಹೇಳಿದರು.

ಆಧುನಿಕ ಜಗತ್ತು ವೇಗವಾಗಿ ಬೆಳೆಯುತ್ತಿದೆ. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಹೆಚ್ಚಾಗುತ್ತಿದೆ. ಮೊಬೈಲ್‌, ಸಾಮಾಜಿಕ ಜಾಲತಾಣ ಹಾಗೂ ಜಿಪಿಎಸ್‌ ವ್ಯವಸ್ಥೆ ನಮನ್ನು ಇನ್ನಷ್ಟು ಹತ್ತಿರ ಮಾಡುತ್ತಿದೆ. ಇವುಗಳಿಂದ ಅಷ್ಟೇ ಅನಾನುಕೂಲವೂ ಇದೆ. ವಿದ್ಯಾರ್ಥಿಗಳು ತಮಗೆ ಬೇಕಾದ ಅಂಶಗಳನ್ನು ಮಾತ್ರ ತಂತ್ರಜ್ಞಾನದಿಂದ ಪಡೆದು, ಪುಸ್ತಕದ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

Advertisement

ವಿದ್ಯಾರ್ಥಿಗಳು ಡಿಜಿಟಲ್‌ ಶಿಕ್ಷಣದ ವ್ಯಾಪಕತೆಯಿಂದಾಗಿ ಗೂಗಲ್‌ನಲ್ಲೇ ಎಲ್ಲ ಮಾಹಿತಿ ಪಡೆಯಬಹುದಾಗಿದ್ದು, ಮುಂದೆ ಪುಸ್ತಕ ಓದುವ ಅವಶ್ಯಕತೆ ಇರುವುದಿಲ್ಲ. ಮಾಹಿತಿಗಳನ್ನು ಜ್ಞಾನಕ್ಕೆ ಪರಿವರ್ತಿಸಬೇಕಾದರೆ ಹಿರಿಯ ಶಿಕ್ಷಕರ ಮಾರ್ಗದರ್ಶನವೂ ಮುಖ್ಯವಾಗಿರುತ್ತದೆ ಎಂದರು.

ಯುವಪೀಳಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಗೀಳಿನಿಂದ ಕಣ್ತುಂಬ ನಿದ್ದೆ ಮಾಡದ ಪರಿಸ್ಥಿತಿ ತಲುಪಿದೆ. ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಕೆಲವು ದುಶ್ಚಟಗಳಿಂದ ದೂರವಿರಬೇಕು. ಪ್ರತಿ ದಿನ 8 ಗಂಟೆ ನಿದ್ದೆ, ಯೋಗ, ಧ್ಯಾನ ಮಾಡಬೇಕು. ಆಗ ಮಾತ್ರ ಆರೋಗ್ಯವಾಗಿರಲು, ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಡಾ.ಎಚ್‌.ರಾಮರಾವ್‌, ಗೌರವ ಕಾರ್ಯದರ್ಶಿ ಪ್ರೊ.ಎಸ್‌.ಎನ್‌.ರೆಡ್ಡಿ, ಪ್ರಿನ್ಸಿಪಾಲ್‌ ಡಾ.ಬಿ.ಆರ್‌.ಪರಿಣಿತಾ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next