ಮೈಸೂರು: ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರ ಪುನರ್ ವಿಂಗಡಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಹೊಸದಾಗಿ ನಾಲ್ಕು ಜಿಪಂ ಸ್ಥಾನಗಳು ಹೆಚ್ಚಾಗಿದ್ದರೆ, ಜಿಲ್ಲೆಯ ಎಲ್ಲಾ ತಾಲೂಕುಗಳ ತಾಪಂ ಸ್ಥಾನಗಳು ಕಡಿತಗೊಂಡಿವೆ.
ತಾಪಂ ವ್ಯವಸ್ಥೆಯನ್ನೇ ರದ್ದುಗೊಳಿಸುವ ಬಗ್ಗೆ ಪರ-ವಿರೋಧ ಚರ್ಚೆಗಳ ಮಧ್ಯೆಯೇ ರಾಜ್ಯಚುನಾವಣಾ ಆಯೋಗವು ಜಿಪಂ, ತಾಪಂ ಚುನಾವನೆಗೆ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿ, ಫೆ.22ರೊಳಗೆ ಖಾತೆಗಳ ಪುನರ್ ವಿಂಗಡಣೆ ಹಾಗೂ ನಕ್ಷೆ ತಯಾರಿಕೆಗೆ ನಿರ್ದೇಶಿಸಿದೆ.
ಈಗಾಗಲೇ ಜಿಲ್ಲಾ ಚುನಾವಣಾ ವಿಭಾಗದಿಂದ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನಸಂಖ್ಯೆ ವಿವರಗಳನ್ನು ಪಡೆದುಕೊಂಡಿದ್ದು, ಅದರ ಆಧಾರದ ಮೇಲೆ ತಾಲೂಕುವಾರು ಜಿಪಂ, ತಾಪಂ ಸ್ಥಾನಗಳನ್ನು ನಿಗದಿಪಡಿಸಿದೆ. ಅದರಂತೆ ಜಿಲ್ಲೆಯ ಜಿಲ್ಲಾ ಪಂಚಾಯ್ತಿಗೆ ನಾಲ್ಕು ಸದಸ್ಯ ಬಲವನ್ನು ಹೆಚ್ಚಿಸಿದ್ದು, 49 ಸದಸ್ಯರಿಂದ 53ಕ್ಕೆ ಹೆಚ್ಚಿಸಿದೆ. ಆದರೆ, ತಾಲೂಕು ಪಂಚಾಯ್ತಿ ಸದಸ್ಯತ್ವ ಸ್ಥಾನವನ್ನು ಇಳಿಕೆ ಮಾಡಲಾಗಿದ್ದು, 187 ಸದಸ್ಯರಿಂದ 125ಕ್ಕೆ ಇಳಿಸಲಾಗಿದೆ. 62 ಸ್ಥಾನವನ್ನು ಕಡಿತಮಾಡಲಾಗಿದೆ.
ಜಿಪಂ ವಿವರ: ಮೈಸೂರು ತಾಲೂಕಿನಲ್ಲಿದ್ದ 10 ಜಿಪಂ ಸ್ಥಾನಗಳಲ್ಲಿ ಮೂರು ಸ್ಥಾನಗಳು ಕಡಿಮೆಯಾಗಿದ್ದರೆ, 9 ಸ್ಥಾನಗಳನ್ನು ಹೊಂದಿದ್ದ ನಂಜನಗೂಡು ತಾಲೂಕಿನಲ್ಲಿ 1 ಸ್ಥಾನ ಸೇರ್ಪಡೆಯಾಗಿ 10 ಸ್ಥಾನಕ್ಕೇರಿದೆ.6 ಸ್ಥಾನ ಹೊಂದಿದ್ದ ತಿ.ನರಸೀಪುರ, ಹುಣಸುರು, ಕೆ.ಆರ್.ನಗರ, ಪಿರಿಯಾಪಟ್ಟಣ ತಾಲೂಕುಗಳಿಗೆ ತಲಾ 1 ಸ್ಥಾನ ಸೇರ್ಪಡೆಯಾಗಿದ್ದು, 7 ಸ್ಥಾನಗಳಿಗೆ ಹೆಚ್ಚಿಸಲಾಗಿದೆ. ಉಳಿದಂತೆ ಎಚ್.ಡಿ.ಕೋಟೆ ತಾಲೂಕನ್ನು ವಿಭಜಿಸಿ ಹೊಸದಾಗಿ ಸರಗೂರು ತಾಲೂಕು ಮಾಡಿರುವುದರಿಂದ ಎಚ್.ಡಿ.ಕೋಟೆಗೆ ಈ ಹಿಂದೆ ಇದ್ದ 6 ಸ್ಥಾನಗಳ ಪೈಕಿ ಒಂದು ಸ್ಥಾನ ಕಡಿತಗೊಳಿಸಲಾಗಿದೆ, ನೂತನ ತಾಲೂಕು ಸರಗೂರಿಗೆ ಹೆಚ್ಚುವರಿಯಾಗಿ 3 ಸ್ಥಾನ ನೀಡಲಾಗಿದೆ.
ಮೈಸೂರು ತಾಲೂಕಿಗೆ ನಷ್ಟ: ಮೈಸೂರು ತಾಲೂಕಿಗೆಜಿಪಂ ಹಾಗೂ ತಾಲೂಕು ಪಂಚಾಯಿತಿ ಸ್ಥಾನಗಳಲ್ಲಿ ನಷ್ಟವಾಗಿದೆ. ಮೈಸೂರು ವರ್ತುಲ ರಸ್ತೆಯ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿ,ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುತ್ತಿರುವುದು ಹಾಗೂ ಕೆಲವು ಪ್ರದೇಶಗಳನ್ನು ನಗರಪಾಲಿಕೆ ವ್ಯಾಪ್ತಿಗೆ ಸೇರಿಸುತ್ತಿರುವುದರಿಂದ ಜಿಪಂನಲ್ಲಿ ಮೂರು ಸ್ಥಾನ ಹಾಗೂ ತಾಲೂಕು ಪಂಚಾಯಿತಿಯಲ್ಲಿ 19 ಸ್ಥಾನಕಡಿಮೆಯಾಗಿದೆ. ಮೈಸೂರು ತಾಲೂಕಿನ ತಾಪಂನ 38 ಸ್ಥಾನಗಳಲ್ಲಿ ಬರೋಬ್ಬರಿ 19 ಸ್ಥಾನಗಳು ಕಡಿಮೆಯಾಗಿದ್ದು, ಈಗ 19 ಸ್ಥಾನಗಳು ಮಾತ್ರಉಳಿದುಕೊಂಡಿವೆ. ಡಿಸೆಂಬರ್‌ನಲ್ಲಿ ನಡೆದಿದ್ದ ಗ್ರಾಪಂಚುನಾವಣೆಯಲ್ಲಿ ವರ್ತುಲ ರಸ್ತೆಯ ಅಕ್ಕಪಕದ R ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಬರೀ 26 ಗ್ರಾಪಂಗಳಿಗಷ್ಟೇ ಚುನಾವಣೆ ನಡೆದಿತ್ತು.
ತಾಪಂ ವಿವರ: ಹೊಸ ಮಾರ್ಗಸೂಚಿ ಅನ್ವಯ ಈ ಹಿಂದೆ ಜಿಲ್ಲೆಯಲ್ಲಿದ್ದ 7 ತಾಲೂಕುಗಳಲ್ಲೂ ಬರೋಬ್ಬರಿ62 ತಾಪಂ ಸ್ಥಾನಗಳನ್ನು ಕಡಿತಗೊಳಿಸಲಾಗಿದೆ. 38 ತಾಪಂ ಸ್ಥಾನವಿದ್ದ ಮೈಸೂರು ತಾಲೂಕಿಗೆ 19 ಹಾಗೂ 34 ಸ್ಥಾನ ಹೊಂದಿರು ನಂಜನಗೂಡು ತಾಲೂಕಿಗೆ 27, 24 ಸ್ಥಾನ ಹೊಂದಿದ್ದ ತಿ.ನರಸೀಪುರ ತಾಲೂಕಿಗೆ 19, 23 ಸ್ಥಾನ ಹೊಂದಿರು ಹುಣಸೂರು ತಾಲೂಕಿಗೆ 19 ಹಾಗೂ 22 ಸ್ಥಾನ ಹೊಂದಿದ್ದ ಕೆ.ಆರ್. ನಗರ ಮತ್ತು ಪಿರಿಯಾಪಟ್ಟಣ ತಾಲೂಕಿಗೆ 18 ಸ್ಥಾನ ನಿಗದಿಯಾಗಿದೆ.
ಜೊತೆಗೆ 24 ಸ್ಥಾನಗಳನ್ನು ಹೊಂದಿದ್ದ ವಿಭಜಿತ ಎಚ್.ಡಿ. ಕೋಟೆ ತಾಲೂಕಿಗೆ 13 ಸ್ಥಾನ ನಿಗದಿ ಮಾಡಿ, ನೂತನ ಸರಗೂರು ತಾಲೂಕಿಗೆ 11 ಸ್ಥಾನ ನೀಡಲಾಗಿದೆ. ಈ ಮೂಲಕ ಜಿಲ್ಲೆಯ 07 ತಾಲೂಕುಗಳ ತಾಪಂ ಸದಸ್ಯರ ಸಂಖ್ಯೆ ಕ್ಷೀಣಿಸಿದೆ.
ಸತೀಶ್ ದೇಪುರ