Advertisement
ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ನಡೆದ ಯುವ ಸಂಭ್ರಮ ರಾಷ್ಟ್ರೀಯ ಭಾವೈಕ್ಯತೆಗೆ ಸಾಕ್ಷಿಯಾಯಿತು.
Related Articles
Advertisement
ಬೆಂಗಳೂರಿನ ಶ್ರೀ ದಕ್ಷ ಅಕಾಡೆಮಿ ಹಾಗೂ ಬಳ್ಳಾರಿ ಎಸ್.ಜಿ.ಟಿ ಕಾಲೇಜಿನ ವಿದ್ಯಾರ್ಥಿಗಳ ಸಮೂಹವು ಚೆಲ್ಲಿದರೂ ಮಲ್ಲಿಗೆಯಾ, ಜೋಗಿ ಚಿತ್ರದ ಹಾಡಿಗೆ ಕುಣಿಯುವುದರ ಮೂಲಕ ಕರ್ನಾಟಕದ ಜನಪದ ಪರಂಪರೆ ಹಾಗೂ ದೇಶೀಯ ಸಂಸ್ಕೃತಿಯನ್ನು ನೃತ್ಯದ ಮೂಲಕ ಹೇಳಿ ಯುವ ಸಮೂಹ ಕುಣಿಯುವಂತೆ ಮಾಡಿದರು.
ಹೊಳೆ ನರಸೀಪುರದ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾರಮ್ಮ ಮತ್ತು ಮಾದಪ್ಪ ಬಗ್ಗೆ ಕಂಸಾಳೆ ನೃತ್ಯದ ಮೂಲಕ ರಂಜಿಸಿದರು. ಮೈಸೂರಿನ ಮಾತೃಮಂಡಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಗ್ರಪೂಜಿತ ಗಣೇಶನನ್ನು ಸ್ಮರಣೆ ಮಾಡುತ್ತ ಅಗ್ನಿಪಥ್ ಚಿತ್ರದ ದೇವಾ ಶ್ರೀ ಗಣೇಶ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದರು.
ಗುಂಡ್ಲುಪೇಟೆಯ ಬೇಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಕೆಚ್ಚೆದೆಯ ಕನ್ನಡಿಗರ ಮಿಂಚಿನ ದಸರಾ ಸಂಭ್ರಮೋತ್ಸವವನ್ನು ಪಲ್ಲಕ್ಕಿ ಹಾಗೂ ವೀರಕನ್ನಡಿಗ ಚಿತ್ರದ ಹಾಡುಗಳಿಗೆ ಪುನೀತ್ ರಾಜ್ ಕುಮಾರ್ ಭಾವಚಿತ್ರ ಹಿಡಿದು ತಮ್ಮ ಅಮೋಘ ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು.
ವೀರ ಕನ್ನಡಿಗ ಚಿತ್ರದ ಜೀವ ಕನ್ನಡ ದೇಹ ಕನ್ನಡ, ಮಲ್ಲ ಚಿತ್ರದ ಕರುನಾಡೆ ಕೈ ಚಾಚಿದೆ ನೋಡೆ ಹಾಗೂ ಸಮರ ಚಿತ್ರದ ಕನ್ನಡದ ಮಾತು ಚೆನ್ನ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡ ನಾಡಿನ ಸಂಭ್ರಮವನ್ನು ತೋರಿಸಿದ ಮೈಸೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಯುವ ಸಮೂಹ ಹೆಜ್ಜೆ ಹಾಕುವಂತೆ ಮಾಡಿದರು.
ಮೈಸೂರಿನ ಬೆಟ್ಟದಪುರದ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರ ರಕ್ಷಣೆ ಮಾಡುತ್ತಿರುವ ದೇಶದ ಹೆಮ್ಮೆಯ ಯೋಧರ ಬಗ್ಗೆ ಕೆ.ಜಿ.ಎಫ್ ಹಾಗೂ ಜೆಮ್ಸ್ ಚಿತ್ರದ ಹಾಡುಗಳಿಗೆ ಮನೋಜ್ಞ ನೃತ್ಯದ ಮೂಲಕ ರಂಜಿಸಿದರು.
ರಾಮನಗರದ ಜ್ಞಾನವಿಕಾಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಮತ್ತು ಕಾಮಸ್೯ ಕಾಲೇಜಿನ ವಿದ್ಯಾರ್ಥಿಗಳು ಸಂಗೊಳ್ಳಿ ರಾಯಣ್ಣನ ಸಾಹಸ ಮತ್ತು ಹೋರಾಟದ ಬಗ್ಗೆ ತಮ್ಮ ಅದ್ಬುತ ನೃತ್ಯ ಸಂಯೋಜನೆ ಮೂಲಕ ಯುವ ಸಮೂಹಗಳ ಮುಂದೆ ಪ್ರದರ್ಶಿಸಿದರು.
ಕವಿರತ್ನ ಕಾಳಿದಾಸ ಚಿತ್ರದ ಹಾಡಿನೊಂದಿಗೆ ಬಂದ ಬೆಂಗಳೂರಿನ ಶಾಂತಿಧಾಮ ಕಾಲೇಜಿನ ವಿದ್ಯಾರ್ಥಿಗಳು ನವದುರ್ಗೆಯರ ದರ್ಶನದ ಮೂಲಕ ಸಭಿಕರು ಭಕ್ತಿಯ ಕಡಲಲ್ಲಿ ತೇಲುವಂತೆ ನರ್ತಿಸಿದರೆ, ಬೆಂಗಳೂರಿನ ಆಕ್ಸ್ ಬ್ರಿಡ್ಜ್ ಬಿಜಿನೆಸ್ ಶಾಲೆಯ ವಿದ್ಯಾರ್ಥಿಗಳ ತಂಡವು ನಾನಿ ಚಿತ್ರದ ಗೀತೆಗೆ ನಯನ ಮನೋಹರವಾಗಿ ಹೆಜ್ಜೆ ಹಾಕಿದರು.
ಮೈಸೂರಿನ ಜೆ.ಎಸ್.ಎಸ್.ವಾಕ್ ಶ್ರವಣ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಇತ್ತೀಚೆಗೆ ಯುವ ಸಮೂಹ ಪಾಲ್ಗೊಂಡು ಸಾಧನೆ ಮಾಡುತ್ತಿರುವ ಬಗ್ಗೆ ಹೆಜ್ಜೆ ಹಾಕಿ ಕ್ರೀಡೆಯ ಬಗ್ಗೆ ಅರಿವು ಮೂಡಿಸಿದರು.
ಮೈಸೂರಿನ ಮಿಮಿಕ್ರಿ ಶ್ಯಾಂ ಅವರು ಪುನೀತ್ ರಾಜ್ ಕುಮಾರ್, ದರ್ಶನ್ ಹಾಗೂ ಶಿವರಾಜ್ ಕುಮಾರ್ ಅವರ ಧ್ವನಿಯನ್ನು ಮಿಮಿಕ್ರಿ ಮಾಡುವುದರ ಮೂಲಕ ಯುವ ಸಮೂಹವನ್ನು ರಂಜಿಸಿದರು.