ಮೈಸೂರು: ಈ ಬಾರಿಯ ಸ್ವಚ್ಛ ಸರ್ವೇಕ್ಷಣ್ ಆಯ್ಕೆ ಪಟ್ಟಿಯ ಟಾಪ್ ಟೆನ್ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆದುಕೊಂಡಿದೆ. ಸ್ವಚ್ಛ ಸರ್ವೇಕ್ಷಣ್ ಶ್ರೇಣಿ ಘೋಷಣೆ ಮತ್ತು ಪ್ರಶಸ್ತಿ ಪ್ರದಾನದ ವರ್ಚ್ಯುವಲ್ ಸಮಾರಂಭಕ್ಕೆ ಮೈಸೂರು ಮಹಾನಗರ ಪಾಲಿಕೆಗೂ ಆಹ್ವಾನ ನೀಡಲಾಗಿದ್ದು, ಆಯ್ಕೆ ಪಟ್ಟಿಯ ಟಾಪ್‌ಟೆನ್ ಲಿಸ್ಟ್‌ನಲ್ಲಿ ಮೈಸೂರು ಇರುವುದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಮೈಸೂರು ನಗರ ಪಾಲಿಕೆಯಲ್ಲಿ ವರ್ಚ್ಯುವಲ್ ಸಮಾರಂಭ ವೀಕ್ಷಣೆಗೆ ಸಿದ್ಧತೆ ನಡೆಸಲಾಗಿದೆ. ಕಳೆದ ಜನವರಿಯಲ್ಲಿ ದೇಶಾದ್ಯಂತ ನಡೆದ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ಮೈಸೂರಿನಲ್ಲಿಯೂ ನಡೆಸಲಾಗಿತ್ತು. ಇದರ ಫಲಿತಾಂಶ ಆ.20 ರಂದು ಪ್ರಕಟಗೊಳ್ಳಲಿದೆ. ಅಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವಚ್ಛನಗರಿಯ ಶ್ರೇಣಿ ಘೋಷಣೆ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2014ರಿಂದ ಸಮೀಕ್ಷೆ ಆರಂಭ: 2014ರಿಂದ ರಾಷ್ಟ್ರಮಟ್ಟದಲ್ಲಿ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆ ಆರಂಭಿಸಲಾಗಿದ್ದು, ಮೈಸೂರು ಮಹಾನಗರ ಪಾಲಿಕೆ 2014-15, 15-16ರಲ್ಲಿ ನಡೆದ ಸಮೀಕ್ಷೆಯಲ್ಲಿ ದೇಶದಲ್ಲಿ ಅತ್ಯಂತ ಸ್ವತ್ಛ ನಗರ ಎಂಬ ಗರಿಮೆಗೆ ಪಾತ್ರವಾಗಿತ್ತು. ನಿರಂತರವಾಗಿ ಎರಡು ಬಾರಿ ಸ್ವತ್ಛನಗರಿ ಪಟ್ಟ ಪಡೆದ ನಂತರ 2016-17 ನೇ ಸಾಲಿನಲ್ಲಿ 5ನೇ ಸ್ಥಾನಕ್ಕೆ ಕುಸಿಯಿತು. 2017-18ರಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. ಆದರೆ 3 ಲಕ್ಷದಿಂದ 10 ಲಕ್ಷ ಒಳಪಟ್ಟ ಜನಸಂಖ್ಯೆಯ ನಗರಗಳ ಪೈಕಿ ಸ್ವಚ್ಛ ನಗರವಾಗಿ ಮೊದಲ ಸ್ಥಾನ ಪಡೆದಿದೆ. ಕಳೆದ ಸಾಲಿನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
20ರಂದು ದೆಹಲಿಯಲ್ಲಿ ಸಮಾರಂಭ: ಸ್ವಚ್ಛ ಸರ್ವೇಕ್ಷಣ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ಮೈಸೂರು ಸಹ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಆ.20ರಂದು ದೆಹಲಿಯಲ್ಲಿ ನಡೆಯುವ ವರ್ಚ್ಯುವಲ್ ಸಮಾರಂಭ ವೀಕ್ಷಣೆ ಮತ್ತು ಸಂವಾದಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ. ಅಂದು ನಮ್ಮ ಇಬ್ಬರು ಪೌರಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿ ದ್ದಾರೆ. ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಮೈಸೂರು ಹೆಸರು ಇರುವುದು ಬಹುತೇಕ ಖಚಿತವಾಗಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜ. ನಾಗರಾಜ್ ತಿಳಿಸಿದ್ದಾರೆ. ನಗರ ಪಾಲಿಕೆಯ ಪೌರಕಾರ್ಮಿಕರಾದ ಮಂಜುಳಾ, ನಂಜುಂಡಸ್ವಾಮಿ ಪ್ರಧಾನಿ ಮೋದಿಯೊಂದಿಗಿನ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಸ್ವಚ್ಛ ಸರ್ವೇಕ್ಷಣ್ ರೇಸ್‌ನಲ್ಲಿ ಮೈಸೂರು ಮಹಾ ನಗರ ಪಾಲಿಕೆಯೂ ಇದೆ. ಸ್ವಚ್ಛ ನಗರಿಪಟ್ಟ ಪಡೆಯುವ ಪ್ರಯತ್ನವನ್ನು ನಡೆಸಿದ್ದೇವೆ. ಯಾರಿಗೆ ಅಗ್ರಸ್ಥಾನ ಎಂದು ಆ.20 ರಂದು ಗೊತ್ತಾಗಲಿದೆ.
– ಗುರುದತ್ತ ಹೆಗಡೆ, ಪಾಲಿಕೆ ಆಯುಕ್ತ, ಮೈಸೂರು