Advertisement

ಜಂಬೂಸವಾರಿ; 8ನೇ ಬಾರಿ ಅಂಬಾರಿ ಹೊರಲಿರುವ “ಅರ್ಜುನ”, ಇದು ಕೊನೆಯ ಅವಕಾಶ?

10:25 AM Oct 09, 2019 | Nagendra Trasi |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಸತತ ಎಂಟನೇ ಬಾರಿಗೆ 750ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಹೊತ್ತು ಸಾಗುವ “ಅರ್ಜುನ” ಕೇಂದ್ರಬಿಂದು.

Advertisement

ಲಕ್ಷಾಂತರ ಪ್ರವಾಸಿಗರ ಗೌಜು-ಗದ್ದಲದ ನಡುವೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ, ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸುಮಾರು 5 ಕಿಲೋ ಮೀಟರ್ ದೂರ ಸಾಗುವ ಅರ್ಜುನ ಆನೆಯೇ ಇಡೀ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿದೆ. ಅರ್ಜುನನ ತೂಕ 5,800 ಕೆಜಿ.

ಮಂಗಳವಾರ ಮಧ್ಯಾಹ್ನ 2.15ರಿಂದ 2.58ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮೈಸೂರಿನ ಐತಿಹಾಸಿಕ ಜಂಬೂಸವಾರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.

ಅರ್ಜುನನಿಗೆ ಈ ಬಾರಿ ಅಂಬಾರಿ ಹೊರುವ ಕೊನೆಯ ಅವಕಾಶ?

1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ ಆನೆ ಕಳೆದ 19 ವರ್ಷಗಳಿಂದ ಮೈಸೂರಿನ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಇದೀಗ ಕಳೆದ ಎಂಟು ವರ್ಷಗಳಿಂದ ಅಂಬಾರಿ ಹೊರುವ ಮೂಲಕ ಜಂಬೂಸವಾರಿಯ ಕೇಂದ್ರ ಬಿಂದುವಾಗಿರುವ ಅರ್ಜುನನಿಗೆ ಈ ಬಾರಿ ಕೊನೆಯ ಅವಕಾಶವಾಗಲಿದೆಯೇ ಎಂಬುದು ಪ್ರಶ್ನೆಯಾಗಿದೆ.

Advertisement

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರಕಾರ ರೂಪಸಿರುವ ನಿಯಮಾವಳಿ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಅಧಿಕ ಭಾರ ಹೇರುವಂತಿಲ್ಲ. ಹೀಗಾಗಿ 2020ಕ್ಕೆ ಅರ್ಜುನನಿಗೆ 60 ವರ್ಷ ತುಂಬಲಿದೆ. ಅಂಬಾರಿ ತೂಕ 750ಕೆಜಿ ಭಾರ ಇದ್ದು, ಮುಂದಿನ ವರ್ಷ ಕೂಡಾ ಅರ್ಜುನ ಅಂಬಾರಿ ಹೊರುವ ಸಾಧ್ಯತೆ ತೀರಾ ಕಡಿಮೆ.

ಇದರಿಂದಾಗಿ ಈಗಾಗಲೇ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆಯ್ದ ಆನೆಗಳಿಗೆ ಅಂಬಾರಿ ಹೊರುವ ತಾಲೀಮು ನೀಡಲಾಗುತ್ತಿದೆ ಎಂದು ಅರಮನೆಯ ಪಶುವೈದ್ಯ ಡಾ.ನಾಗರಾಜ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next