ಮೈಸೂರು: ದಸರಾ ಉತ್ಸವ ಹಿನ್ನೆಲೆ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯಿಂದ ಕುಶಾಲತೋಪು ಸಿಡಿಸುವ ತಾಲೀಮು ಆರಂಭವಾಗಿದ್ದು, ಗುರುವಾರವೂ ನಡೆಯಿತು.
ದಸರಾಗೆ 14 ದಿನಗಳ ಬಾಕಿ ಇದ್ದು, ಅರಮನೆಯ ಅಂಗಳದಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಗುತ್ತಿದೆ. ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಕಳೆದರೆಡು ದಿನಗಳಿಂದ ಸಿಡಿಮದ್ದು ಸಿಡಿಸದೆಯೇ ತಾಲೀಮು ನಡೆಸಿದರು.
ವಿಜಯದಶಮಿಯಂದು ಜಂಬೂ ಸವಾರಿ ಹೊರಡುವ ಮುನ್ನ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಇದಕ್ಕಾಗಿ ಮುಂಚಿತವಾಗಿ ತಾಲೀಮು ಪ್ರಾರಂಭಿಸಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿ ಕುಶಾಲತೋಪು ಪ್ರಾಕ್ಟೀಸ್‌ನಲ್ಲಿ ಭಾಗಿಯಾಗಿದ್ದರು. ದಸರಾ ಮಹೋತ್ಸವ ಸಂದರ್ಭದಲಕ್ಲಿ ಕುಶಾಲತೋಪು ಸಿಡಿಸಲು 7 ಫಿರಂಗಿ ಗಾಡಿಗಳನ್ನು ಬಳಸಲಾಗುತ್ತದೆ. ಆನೆಗಳು, ಕುದುರೆಗಳು ಬೆದರದಂತೆ ನೋಡಿಕೊಳ್ಳುವುದು ಈ ತಾಲೀಮಿನ ಉದ್ದೇಶವಾಗಿದೆ.ಇನ್ನು ಕೆಲವು ದಿನಗಳಲ್ಲಿ ಆನೆ ಮತ್ತು ಕುದುರೆಗಳ ಸಮ್ಮುಖದಲ್ಲಿ ಸಿಡಿಮದ್ದು ಸಿಡಿಸಿ ತಾಲೀಮು ಆರಂಭಿಸಲಾಗುತ್ತದೆ.
ಇದನ್ನೂ ಓದಿ:ಜನಪ್ರಿಯ ಕಪಿಲ್ ಶರ್ಮಾ ಕಾರ್ಯಕ್ರಮದ ವಿರುದ್ಧ ಎಫ್‍ಐಆರ್
ವಿಜಯದಶಮಿಯ ದಿನ ಅರಮನೆ ಬಳಿ ಪೊಲೀಸರು 21 ಬಾರಿ ಕುಶಾಲತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸುತ್ತಾರೆ. ಪ್ರತಿ ಬಾರಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ತಾಲೀಮು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಆನೆಗಳನ್ನು ಹೊರಗಡೆ ಕರೆದುಕೊಂಡು ಹೋಗುವಂತಿಲ್ಲ. ಹೀಗಾಗಿ ಅರಮನೆಯ ಸಮೀಪವೇ ತಾಲೀಮು ನಡೆಯಲಿದೆ ಎನ್ನಲಾಗುತ್ತಿದೆ.