Advertisement

ಅರಮನೆ ಆವರಣದಲ್ಲಿ ಗರಿಗೆದರಿದ ದಸರಾ ಸಿದ್ಧತೆ

05:02 PM Sep 23, 2021 | Team Udayavani |

ಮೈಸೂರು: ದಸರಾ ಮಹೋತ್ಸವ ಆರಂಭಕ್ಕೆ 15 ದಿನ ಬಾಕಿ ಇರುವ ಬೆನ್ನಲ್ಲೆ ಅರಮನೆಯ ಆವರಣದಲ್ಲಿ ದಸರಾ ಸಿದ್ಧತೆ ಗರಿಗೆದರಿದ್ದು, ಅರಮನೆಯ ಗೋಡೆ, ದ್ವಾರಗಳಿಗೆ ಸುಣ್ಣ ಬಳಿಯುವ ಕೆಲಸ ಹಾಗೂ ಹೂ ಕುಂಡಗಳ ಜೋಡಣೆ ಕಾರ್ಯ ನಡೆದಿದೆ.

Advertisement

ನಾಡಹಬ್ಬ ದಸರಾ ಮಹೋತ್ಸವ ಈ ಬಾರಿಯೂ ಅರಮನೆ ಸೀಮಿತವಾಗಿರುವುದರಿಂದ ಅರಮನೆ ಆವರಣದಲ್ಲಿ ಪ್ರತಿ ವರ್ಷದಂತೆ ಸಿದ್ಧತಾ ಕಾರ್ಯ ಗರಿಗೆದರಿದ್ದು, ಅರಮನೆಯ ಒಳಗೆ ಹಾಗೂ ಹೊರಗಿನ ಗೋಡೆಗಳಿಗೆ ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗಿದೆ. ಮೂರು ಪ್ರತ್ಯೇಕ ವಿಭಾಗಗಳಲ್ಲಿ ವಿವಿಧ ಕಾಮಗಾರಿ ನಡೆಸಲು ಅರಮನೆ ಮಂಡಳಿ ಟೆಂಡರ್‌ ಕರೆದಿದ್ದು ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ.

ಸಿವಿಲ್‌ ವಿಭಾಗದಿಂದ ಅರಮನೆಯ ಮುಖ್ಯ ಕಟ್ಟಡದ ಒಳ ಹಾಗೂ ಹೊರ ಭಾಗ, ರಾಜವಂಶಸ್ಥರ ವಾಸದ ಮನೆಯಲ್ಲಿ ಪೂಜಾ ಸ್ಥಳ, ಅರಮನೆ ಒಳ ಭಾಗದ ಲಿಫ್ಟ್ ಕೊಠಡಿ ಹಾಗೂ ಇನ್ನಿತರ ಸ್ಥಳದಲ್ಲಿರುವ ಗ್ರಿಲ್‌ಗ‌ಳಿಗೆ ಬಣ್ಣ ಬಳಿಯುವ ಕಾರ್ಯ ಆರಂಭಿಸಲಾಗಿದೆ. ಅಲ್ಲದೆ ಸಣ್ಣ-ಪುಟ್ಟ ದುರಸ್ತಿ ಹಾಗೂ ಅಂಬಾರಿಯನ್ನು ಆನೆ ಮೇಲಿರಿಸುವ, ಕೆಳಗಿಳಿಸಲು ಬಳಸುವ ಕ್ರೇನ್‌ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.

ಇದನ್ನೂ ಓದಿ:ನಾಗಾಲೋಟ: ಸಾರ್ವಕಾಲಿಕ ದಾಖಲೆ – 60 ಸಾವಿರ ಸನಿಹಕ್ಕೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್

15 ಸಾವಿರ ಬಲ್ಬ್ ಬದಲಾವಣೆ: ಮಳೆ, ಗಾಳಿ ಹಾಗೂ ಪಕ್ಷಿಗಳ ಹಾವಳಿಯಿಂದ ಅರಮನೆಗೆ ಅಳವಡಿಸಿರುವ ವಿದ್ಯುತ್‌ ದೀಪಗಳಲ್ಲಿ 10 ಸಾವಿರಗಳಷ್ಟು ಬಲ್ಬ್ ಗಳು ಒಡೆದುಹೋಗಿದ್ದರೆ, 5 ಸಾವಿರದಷ್ಟು ಕೆಟ್ಟಿವೆ. ಈ ಹಿನ್ನೆಲೆ ವಿದ್ಯುತ್‌ ವಿಭಾಗದಿಂದ ಪ್ರತಿವರ್ಷದಂತೆ ಈ ಬಾರಿಯೂ ಕೆಟ್ಟಿರುವ ಬಲ್ಬ್ ಗಳನ್ನು ಬದಲಿಸಿ ಹೊಸ ಬಲ್ಬ್ ಅಳವಡಿಸಲು ಮುಂದಾಗಿದೆ. ದೀಪಾಲಂಕಾರಗಳ ಸರ್ಕ್ಯೂಟ್, ವಿವಿಧ ಮಾದರಿಯ ಫಿಟ್ಟಿಂಗ್‌, ಫೈವ್‌ ಲೈಟ್‌ ಕಂಬಗಳಿಗೆ ವಿದ್ಯುತ್‌ ದೀಪ, ಧ್ವನಿ ಮತ್ತು ಬೆಳಕು ವಿದ್ಯುತ್‌ ಪೆಟ್ಟಿಗೆಗಳು, ಹೊಸ ದರ್ಬಾರ್‌ ಹಾಲ್‌ನಲ್ಲಿರುವ ವಿವಿಧ ಮಾದರಿಯ ಶಾಂಡ್ಲಿಯಾರ್‌ನ ಬಿಡಿ ಭಾಗಗಳೊಂದಿಗೆ ರಿಪೇರಿ ಕಾರ್ಯಕ್ಕೆ ಕರೆಯಲಾಗಿದ್ದ ಟೆಂಡರ್‌ ಮೂರು ದಿನದ ಹಿಂದಷ್ಟೇ ಅಂತಿಮಗೊಂಡಿದ್ದು, ನಾಲೆಯಿಂದ ಬಲ್ಬ್ ಬದಲಿಸುವ ಕಾರ್ಯ ಆರಂಭವಾಗಲಿದೆ.

Advertisement

ಅಲಂಕಾರಿಕ ಗಿಡಗಳ ಜೋಡಣೆ
ದಸರಾ ಮಹೋತ್ಸವದಲ್ಲಿ ಅರಮನೆ ಅಂದ ಹೆಚ್ಚಿಸಲು ತೋಟಗಾರಿಕಾ ವಿಭಾಗದಿಂದ ಈ ಬಾರಿಯೂ ಒಂದು ಸಾವಿರಕ್ಕೂ ಹೆಚ್ಚು ಹೂ ಕುಂಡಗಳಲ್ಲಿ ಕಣ್ಮನ ಸೆಳೆಯುವ ವಿವಿಧ ಬಗೆಯ ಹೂವಿನ ಗಿಡವನ್ನು ಬೆಳೆಸಲಾಗಿದೆ. ಅರಮನೆ ಆವರಣದಲ್ಲಿನ ವೇದಿಕೆ ಬಳಿ, ವಾಕ್‌ಪಾತ್‌ನ ಎರಡು ಬದಿಯಲ್ಲಿ ಸಾಲಾಗಿ ಜೋಡಿಸಲು ಗುಲಾಬಿ, ಚೆಂಡು ಹೂ ಸೇರಿದಂತೆ ಬಗೆ ಬಗೆಯ ಹೂವಿನ ಕುಂಡಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ಉತ್ತರ ದ್ವಾರಕ್ಕೆ ಹೊಂದಿಕೊಂಡಂತಿರುವ ಸ್ಥಳದಲ್ಲಿ “ದಸರಾ ಮಹೋತ್ಸವ-2021 ಎಂದು ಕ್ರೋಟ್‌ ಗಿಡದಲ್ಲಿ ವಿಶೇಷವಾಗಿ ವಿನ್ಯಾಸ ಮಾಡಲಾಗುತ್ತಿದೆ. ಜೊತೆಗೆ ಜಯಮಾರ್ತಾಂಡ ದ್ವಾರದ ಬಳಿ ಲಾನ್‌ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕಾಮಗಾರಿ ಆರಂಭವಾಗಿದ್ದು, ಅಕ್ಟೋಬರ್‌ ಮೊದಲ ವಾರದಳೊಗೆ ಪೂರ್ಣವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

12ರಿಂದ 15 ಸಾವಿರದಷ್ಟು ಬಲ್ಬ್ ಗಳು ಕೆಟ್ಟಿರುವ ಸಾಧ್ಯತೆ ಇದ್ದು, ವಿದ್ಯುತ್‌ ವಿಭಾಗದಿಂದ ನಾಳೆ ಬಲ್ಬ್ ಬದಲಿಸುವ ಕಾರ್ಯ ನಡೆಯಲಿದೆ. ಜೊತೆಗೆ ತೋಟಗಾರಿಕ ವಿಭಾಗದಿಂದ ವಿವಿಧ ಜಾತಿಯ ಹೂವಿನ ಗಿಡಗಳನ್ನು ಒಂದು ಸಾವಿರಕ್ಕೂ ಹೆಚ್ಚು ಹೂ ಕುಂಡಗಳಲ್ಲಿ ಬೆಳೆಸಲಾಗಿದೆ. ನವರಾತ್ರಿ ಆರಂಭಕ್ಕೂ ಮುನ್ನಾ ಎಲ್ಲಾ ಕಾರ್ಯಗಳು ಮುಕ್ತಾಯವಾಗಲಿದೆ.
– ಸುಬ್ರಹ್ಮಣ್ಯ, ಉಪ ನಿರ್ದೇಶಕ
ಅರಮನೆ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next