Advertisement

ಎಂದು ಸಿಹಿ ನೀಡಲಿದೆ ಮೈಶುಗರ್‌?

02:17 AM Jan 21, 2021 | Team Udayavani |

ಮೈಶುಗರ್‌ ಕಾರ್ಖಾನೆ. ಇದು ಕೇವಲ ಹೆಸರಲ್ಲ. ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. ದಶಕಗಳಿಂದ ಸಹಸ್ರಾರು ಜನರಿಗೆ, ಕುಟುಂಬಗಳಿಗೆ ಅನ್ನದಾತ ಸಂಸ್ಥೆಯಾಗಿದ್ದ ಈ ಕಾರ್ಖಾನೆ ಈಗ ಸುದ್ದಿ ಮಾಡುತ್ತಿದೆ. ಈಗ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಸರಕಾರ ಆದೇಶಿಸಿದೆ. ಇದರ ವಿರುದ್ಧ ವಿವಿಧ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರೆ, ಕೆಲವರು ಒ ಆ್ಯಂಡ್‌ ಎಂ ಆಧಾರದಲ್ಲಿ ನಡೆಸು ವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ರೈತರು ಮಾತ್ರ ಯಾರಾದರೂ ನಡೆಸಲಿ ಕಾರ್ಖಾನೆ ಆರಂಭಗೊಂಡರೆ ಸಾಕು ಎಂಬ ಮನಃಸ್ಥಿತಿಯಲ್ಲಿದ್ದಾರೆ.

Advertisement

ಆಡಳಿತ ವರ್ಗದ ಲೋಪ, ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ, ಅನಗತ್ಯ ಖರ್ಚು ಸೇರಿದಂತೆ ಅನೇಕ ಸಮಸ್ಯೆಗಳಿಂದಾಗಿ ಕಾರ್ಖಾನೆ ಅಧೋಗತಿಗೆ ಸಾಗುತ್ತಲೇ ಹೋಯಿತು. 86 ವರ್ಷಗಳ ಇತಿಹಾಸದಲ್ಲಿ 1999 ರಿಂದ ನಷ್ಟ ತೋರಿಸುತ್ತಾ, 2004ರಲ್ಲಿ ರೋಗ ಗ್ರಸ್ಥ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡಿತು ಮೈಶುಗರ್ಸ್‌.

ಮೈಶುಗರ್‌ ಪುನರುತ್ಥಾನಕ್ಕಾಗಿ ಇದುವರೆಗೂ ಸರಕಾರಗಳು ಸುಮಾರು 522 ಕೋಟಿ ರೂ. ಅನುದಾನ ನೀಡಿವೆ. ಆದರೆ ಕಾರ್ಖಾನೆ ಮಾತ್ರ ಪುನಶ್ಚೇತನಗೊಳ್ಳಲೇ ಇಲ್ಲ. ಸರಕಾರ ಈಗಾಗಲೇ 40 ವರ್ಷಗಳ ಅವಧಿಗೆ ಮೈಶುಗರ್‌ ಅನ್ನು ಗುತ್ತಿಗೆ ನೀಡಲು ಟೆಂಡರ್‌ ಕರೆಯುವಂತೆ ಆದೇಶ ಹೊರಡಿಸಿದೆ. ಇದರ ನಡುವೆಯೇ ಕಾರ್ಖಾನೆಗೆ ಹೊಸ ಅಧ್ಯಕ್ಷರನ್ನು ನೇಮಿಸಲಾಗಿದೆ. ಆದರೆ ಯಾವುದೇ ಕಾರ್ಯ ಯೋಜನೆಗಳು ಪ್ರಗತಿ ಕಾಣುತ್ತಿಲ್ಲ. ಇದರಿಂದಾಗಿ ಪ್ರಸ್ತುತ ವರ್ಷ ಕೆಲಸಗಳು ಆರಂಭವಾಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಮೈಶುಗರ್‌ನ ಇತಿಹಾಸವೇ ರೋಚಕ. ಮಂಡ್ಯ ಜಿಲ್ಲೆಯ ರೈತರ ಅಭ್ಯುದಯ ಹಾಗೂ ಕಬ್ಬು ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ, 1933ರ ಜ. 30ರಂದು ಕೃಷಿ ವಿಜಾnನಿಯಾಗಿದ್ದ ಡಾ| ಲೆಸ್ಲಿ ಸಿ.ಕೋಲ್ಮನ್‌ ಅವರು ಸಕ್ಕರೆ ಕಾರ್ಖಾನೆ ನಿರ್ಮಿಸುವಂತೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ  ವರದಿ ಸಲ್ಲಿಸಿದರು. ಕೂಡಲೇ ಈ ಶಿಫಾರಸಿನ ಮಹತ್ವ ಅರಿತ ಒಡೆಯರ್‌ ಇದಕ್ಕೆ ಒಪ್ಪಿಗೆಯನ್ನೂ ಸೂಚಿಸಿದರು. ಕಾರ್ಖಾನೆ ಆರಂಭಕ್ಕೆ ರೂಪರೇಖೆ ರಚಿಸಿದವರು ಸರ್‌| ಎಂ.ವಿಶ್ವೇಶ್ವರಯ್ಯ. ಒಡೆಯರ್‌ ಮುತುವರ್ಜಿ ಯ ಫ‌ಲವಾಗಿ 20 ಲಕ್ಷ ರೂ. ಷೇರು ಬಂಡವಾಳ ದೊಂದಿಗೆ ಜಾಯಿಂಟ್‌ ಸ್ಟಾಕ್‌ ಕಂಪೆನಿಯಾಗಿ ಮೈಸೂರು ಸಕ್ಕರೆ ಕಾರ್ಖಾನೆಯು ರೈತರ ಸುಮಾರು 14,046 ಷೇರು ಹಣ ಹಾಗೂ ಸರಕಾರದ ಹಣಕಾಸಿನ ನೆರವಿನೊಂದಿಗೆ ಆರಂಭವಾಯಿತು. ದೇಶದ ಮೊದಲ ಸರಕಾರಿ ಕಾರ್ಖಾನೆ ಇದು!

1999ರ ವರೆಗೂ ಮೈಶುಗರ್‌ ಲಾಭದಲ್ಲೇ ಇತ್ತು. ಆದರೆ ದಕ್ಷ ಅಧಿಕಾರಿಗಳ ಕೊರತೆ, ರಾಜಕಾರಣ, ಕಾರ್ಮಿಕರ ಸಮಸ್ಯೆ, ಆಡಳಿತ ವೈಫ‌ಲ್ಯ ಹಾಗೂ ಕಾರ್ಖಾನೆಯ ಯಂತ್ರಗಳಿಗೆ ಪ್ರತೀ ವರ್ಷ ಖರೀದಿಸುವ ಬಿಡಿ ಭಾಗಗಳು ಕಳಪೆಯಿಂದ ಕೂಡಿರುವುದರಿಂದ ಸಮಸ್ಯೆಯಾಯಿತು.

Advertisement

ಇತ್ತೀಚೆಗೆ ಅಧಿಕಾರಿಗಳು ನೀಡಿದ ವರದಿಯಲ್ಲಿ ಜಿಲ್ಲೆಯ ಯಾವುದೇ ಕಾರ್ಖಾನೆಗಳಿಗಿಲ್ಲದಂಥ ಆದಾಯದ ಮೂಲಗಳು ಮೈಶುಗರ್‌ ಕಾರ್ಖಾನೆಯಲ್ಲಿದೆ! ಸಕ್ಕರೆ ಉತ್ಪಾದನೆ, ಮೊಲಾಸಸ್‌, ವಿದ್ಯುತ್‌, ಪ್ರಸ್‌ ಮೆಡ್‌ ಸಹಿತ ಬೆಂಗಳೂರಿನ ವಾಣಿಜ್ಯ ಕಟ್ಟಡಗಳಿಂದ ಆದಾಯ ಬರಲಿದೆ. ಪ್ರತೀ ವರ್ಷ 12.16 ಕೋಟಿ ರೂ. ಲಾಭ ಸಿಗಲಿದೆ ಎಂದು ವರದಿ ಸಲ್ಲಿಸಿರುವುದು ವಿಶೇಷ. ಒಟ್ಟಲ್ಲಿ, ಒಂದು ಕಾಲದಲ್ಲಿ ಜನರ ಬದುಕಿನ ಭಾಗವಾಗಿದ್ದ ಮೈಶುಗರ್‌ನ ಭವಿಷ್ಯ ಏನಾಗಲಿದೆಯೋ ಎಂಬ ಆತಂಕವಂತೂ ಎಲ್ಲರಿಗೂ ಇದೆ.

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next