Advertisement

ಸಹಕಾರ ಕ್ಷೇತ್ರದಲ್ಲಿ ಕಾರ್ಮಿಕರು, ಮಹಿಳೆಯರು ಇರಲಿ

06:23 PM Nov 21, 2019 | Naveen |

ಮೈಸೂರು: ದುಡಿಯುವ ವರ್ಗ ಮತ್ತು ಮಹಿಳೆಯರನ್ನು ಸಹಕಾರ ಕ್ಷೇತ್ರಕ್ಕೆ ಕರೆತಂದಾಗ ಸಹಕಾರ ಕ್ಷೇತ್ರ ಪ್ರಬಲವಾಗುವ ಜತೆಗೆ ಮುಳುಗುತ್ತಿರುವ ಸಹಕಾರಿ ಸಂಘಗಳು ಪುನಶ್ಚೇತನಗೊಳ್ಳಲಿವೆ ಎಂದು ಗೃಹ ಮತ್ತು ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಸೂಚ್ಯವಾಗಿ ಹೇಳಿದರು.

Advertisement

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಏರ್ಪಡಿಸಿದ್ದ 66ನೇ ಅಖೀಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೂಲಿಕಾರ್ಮಿಕರಿಂದಲೇ ಸ್ಥಿರ ಆರ್ಥಿಕತೆ ಸಾಧ್ಯ: ಇಡೀ ವಿಶ್ವದಲ್ಲಿ ಆರ್ಥಿಕತೆ ನಿಧಾನಗತಿಯಲ್ಲಿದ್ದು, ಇದನ್ನು ಸವಾಲಾಗಿ ತೆಗೆದುಕೊಳ್ಳಬೇಖೀದೆ. ದೇಶದ ಆರ್ಥಿಕತೆಯನ್ನು ದೊಡ್ಡ ದೊಡ್ಡ ಬಂಡವಾಳ ಶಾಹಿಗಳು, ಶ್ರೀಮಂತ ವರ್ಗ ಮುನ್ನಡೆಸುತ್ತಾರೆ ಎಂಬ ಭ್ರಮೆಯಲ್ಲಿದ್ದೇವೆ. ಆದರೆ, ಈ ದೇಶದ ಆರ್ಥಿಕ ಸ್ಥಿರತೆಯನ್ನು ಕಾಯುತ್ತಿರುವುದು ದುಡಿಯುವ ವರ್ಗ. ಶೇ.35ರಷ್ಟಿರುವ ಕೂಲಿ ಕಾರ್ಮಿಕ ಜನ ಆರ್ಥಿಕತೆ ಉಳಿಸುತ್ತಿದ್ದಾರೆ ಎಂದರು.

ಐಷಾರಾಮಿ ಜೀವನ ನಡೆಸುವ ಶೇ.10ರಷ್ಟು ಜನ ಅನಗತ್ಯ ಖರ್ಚು ಮಾಡಿದರೆ, ತಿಂಗಳಿಗೆ 6 ರಿಂದ 8 ಸಾವಿರ ರೂ. ಖರ್ಚಿನಲ್ಲಿ ಜೀವನ ಸಾಗಿಸುತ್ತಾರೆ. ಅವರೂ ಕೂಡ ಐಷಾರಾಮಿ ಜೀವನ ನಡೆಸಲು ಹೋದರೆ ದೇಶದ ಆರ್ಥಿಕತೆ ಎಲ್ಲಿರುತ್ತದೆ? ಇದಕ್ಕಾಗಿ ದುಡಿಯುವ ವರ್ಗವನ್ನು ಸಹಕಾರಿ ಕ್ಷೇತ್ರಕ್ಕೆ ತಂದರೆ ಸಹಕಾರಿ ಸಂಘ, ಸಹಕಾರಿ ಬ್ಯಾಂಕ್‌ಗಳಿಗೆ ಹಣ ಹರಿದು ಬರುತ್ತದೆ. ಜತೆಗೆ ಸಹಕಾರ ಕ್ಷೇತ್ರಕ್ಕೆ ಇನ್ನಷ್ಟು ಮಹಿಳೆಯರನ್ನು ಕರೆತಂದಾಗ ಈ ಕ್ಷೇತ್ರ ಪ್ರಬಲವಾಗಲಿದೆ ಎಂದು ಹೇಳಿದರು.

ಹಳ್ಳಿಗಳಲ್ಲಿನ ಸಾಲ ಪದ್ಧತಿ ಬದಲಾಗಬೇಕು: ಕೃಷಿಗೆ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದ್ದು, ಹಳ್ಳಿಗಳ ಸಾಲ ಪದ್ಧತಿ ಬದಲಾಗಬೇಕಿದೆ. ಉದ್ಯಮಿಗೆ ಎಲ್ಲ ರೀತಿಯ ಬಂಡವಾಳ ಕೊಡುವ ಬ್ಯಾಂಕುಗಳು ರೈತರಿಗೆ ಕೊಡುತ್ತಿಲ್ಲ. ನಬಾರ್ಡ್‌ ಬ್ಯಾಂಕ್‌ನ ಚಟುವಟಿಕೆ ಸಾಲದು, ದೊಡ್ಡ ಪ್ರಮಾಣದಲ್ಲಿ ಡಿಸಿಸಿ, ಅಪೆಕ್ಸ್‌ ಬ್ಯಾಂಕ್‌ಗಳಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಕೃಷಿ, ಗ್ರಾಮೀಣ ವಲಯಕ್ಕೆ ಬಂಡವಾಳ ಕೊಡದಿದ್ದರೆ ಈ ಕ್ಷೇತ್ರಗಳು ಉಳಿಯಲ್ಲ. ಇದಕ್ಕಾಗಿ ನಬಾರ್ಡ್‌ ಬ್ಯಾಂಕ್‌ಗೆ ಪತ್ರ ಬರೆಯಲು ತೀರ್ಮಾನಿಸಿರುವುದಾಗಿ ಹೇಳಿದರು.

Advertisement

ಸರಳೀಕರಣ: ಸಹಕಾರ ಕಾನೂನುಗಳ ಸರಳೀಕರಣ ಮಾಡಲು ತಜ್ಞರೊಂದಿಗೆ ಚರ್ಚೆ ಮಾಡುವುದಾಗಿ ಹೇಳಿದ ಅವರು, ಸಹಕಾರಿ ಸಂಘಗಳ ಚಟುವಟಿಕೆ ಗಳಿಗೆ ತೊಂದರೆ ಆಗದಂತೆ ಕಾನೂನು ಸರಳೀಕರಣ ಮಾಡುವುದಾಗಿ ಹೇಳಿದ ಅವರು,ಮುಂಬರುವ ಬಜೆಟ್‌ನಲ್ಲಿ ಕೃಷಿ ಮತ್ತು ಸಹಕಾರಿ ವಲಯಕ್ಕೆ ವಿಶೇಷ ಕಾರ್ಯಕ್ರಮಗಳು ಘೋಷಣೆಯಾಗಲಿವೆ ಎಂದು ಸೂಚ್ಯವಾಗಿ ಹೇಳಿದರು.

ಅಧ್ಯಕ್ಷತೆವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಇಂದು ರಿಯಲ್‌ ಎಸ್ಟೇಟ್‌ ದಂಧೆಯವರು ಸ್ಪರ್ಧಿಸುತ್ತಿರುವುದರಿಂದ ಪ್ರಾಮಾಣಿಕರು ಸ್ಪರ್ಧೆ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಿಯಲ್‌ ಎಸ್ಟೇಟ್‌ ದಂಧೆಯವರು ಸಹಕಾರ ಸಂಘ, ಸಹಕಾರ ಬ್ಯಾಂಕ್‌ ನಿರ್ದೇಶಕರುಗಳಾಗಿ ಬಂದರೆ ಸಹಕಾರ ಕ್ಷೇತ್ರ ಉಳಿಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪವಿರದೆ ಪ್ರೋತ್ಸಾಹ ಇರಬೇಕು. ಆದರೆ, ಸಹಕಾರ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಬಹಳಷ್ಟು ಮಾರ್ಪಾಡುಗಳಾಗಿದ್ದು, ಸರ್ಕಾರ ಸಹಕಾರ ಕ್ಷೇತ್ರವನ್ನು ಉಳಿಸಬೇಕಿದೆ ಎಂದರು. ಶಾಸಕ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಬಿ. ಹರ್ಷವರ್ಧನ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ ಗೌಡ, ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಎನ್‌.ಗಂಗಣ್ಣ ಮಾತನಾಡಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಅಧ್ಯಕ್ಷ ಬಿ.ಎಚ್‌.ಕೃಷ್ಣಾರೆಡ್ಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯ ಪತ್ತಿನ ಸಹಕಾರ ಮಹಾ ಮಂಡಳ ಅಧ್ಯಕ್ಷೆ ಕೆ.ಲಲಿತ ಜಿ.ಟಿ.ದೇವೇಗೌಡ, ರಾಜ್ಯ ಸಹಕಾರ ಮೀನುಗಾರರ ಮಹಾ ಮಂಡಳ ಅಧ್ಯಕ್ಷ ಎಸ್‌. ಮಾದೇಗೌಡ, ಲ್ಯಾಂಪ್ಸ್‌ ಸಹಕಾರ ಮಹಾ ಮಂಡಳ ಅಧ್ಯಕ್ಷ ಮುದ್ದಯ್ಯ, ಮೈಮುಲ್‌ ಅಧ್ಯಕ್ಷ ಎಸ್‌. ಸಿದ್ದೇಗೌಡ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್‌ .ವಿ. ರಾಜೀವ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next