Advertisement

ಮೈಸುರಕ್ಷಾ ಮೊಬೈಲ್‌ ಆ್ಯಪ್‌ ಶೀಘ್ರ ಬಿಡುಗಡೆ

11:37 AM Sep 24, 2018 | Team Udayavani |

ಮೈಸೂರು: ದೇಶದ ಪ್ರಮುಖ ಪ್ರವಾಸಿ ತಾಣವಾಗಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಅಸಂಖ್ಯಾತ ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ವರ್ಷವಿಡಿ ನಗರಕ್ಕಾಗಮಿಸುವ ಪ್ರವಾಸಿಗರು ಹಾಗೂ ನಗರದ ಸಾರ್ವಜನಿಕರ ರಕ್ಷಣೆಗಾಗಿ ನಗರ ಪೊಲೀಸರು “ಮೈಸುರಕ್ಷಾ’ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಿದ್ದಾರೆ.

Advertisement

ಮೈಸೂರಿಗೆ ಆಗಮಿಸುವ ಪ್ರವಾಸಿಗರು ನಗರದ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬಹುತೇಕ ಪ್ರವಾಸಿಗರು ಆಟೋಗಳು, ಟ್ಯಾಕ್ಸಿ ಸೇರಿದಂತೆ ಇನ್ನಿತರ ಖಾಸಗಿ ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸುತ್ತಾರೆ. ಈ ವೇಳೆ ಸಾರ್ವಜನಿಕರು, ಪ್ರವಾಸಿಗರು ಅಥವಾ ವಾಹನ ಚಾಲಕರಿಗೆ ಯಾವುದೇ ರೀತಿಯ ಕಿರುಕುಳ, ಕಳ್ಳತನ, ದೌರ್ಜನ್ಯ ಮತ್ತು ಇನ್ನಿತರ ತೊಂದರೆಗಳು ಎದುರಾಗು ಸಾಧ್ಯತೆಗಳಿವೆ.

ಈ ವೇಳೆ ತುರ್ತಾಗಿ ಪೊಲೀಸರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮೈಸೂರು ನಗರ ಪೊಲೀಸರು ಮೈಸುರಕ್ಷಾ ಮೊಬೈಲ್‌ ಆ್ಯಪ್‌ ಪ್ರಾರಂಭಿಸಿದ್ದಾರೆ. ಸದರಿ ಆ್ಯಪ್‌ನಲ್ಲಿ ನಗರದಲ್ಲಿರುವ ಸಾರ್ವಜನಿಕ ಸಾರಿಗೆ ವಾಹನಗಳು ಹಾಗೂ ಚಾಲಕರ ಮಾಹಿತಿಯನ್ನು ಸಂಗ್ರಹಿಸಿ ಕ್ಯೂಆರ್‌ ಕೋಡ್‌ಗಳನ್ನು ತಯಾರಿಸಿ, ಆಯಾ ವಾಹನಗಳಿಗೆ ಅಂಟಿಸಲಾಗುತ್ತದೆ. 

ಶೀಘ್ರದಲ್ಲೇ ಪ್ಲೇ ಸ್ಟೋರ್‌ನಲ್ಲಿ ಲಭ್ಯ: ಸಾರ್ವಜನಿಕರು, ಪ್ರವಾಸಿಗರ ಅನುಕೂಲಕ್ಕಾಗಿ ನಗರ ಪೊಲೀಸರು ತಯಾರಿಸಿರುವ ಮೈಸುರಕ್ಷಾ ಆ್ಯಪ್‌ ಗೂಗಲ್‌ ಪ್ಲೇ ಸ್ಟೋರ್‌ನ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ನಂತರ ಈ ಆ್ಯಪ್‌ ಮೂಲಕ ವಾಹನದ ಕ್ಯೂಆರ್‌ ಕೋಡನ್ನು ಸ್ಕ್ಯಾನ್‌ ಮಾಡಿದರೆ, ಪ್ರಯಾಣಿಕರು ಬಳಕೆ ಮಾಡುತ್ತಿರುವ ವಾಹನ ಮತ್ತು ಚಾಲಕನ ವಿವರಗಳನ್ನು ಅಪ್ಲಿಕೇಷನ್‌ನಲ್ಲಿ ಪಡೆಯಬಹುದು.

ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಯಾವುದೇ ಸಮಸ್ಯೆ ಕಂಡುಬಂದಲ್ಲಿ, ಮೈಸುರಕ್ಷಾ ಆ್ಯಪ್‌ನಲ್ಲಿರುವ ಎಸ್‌ಒಎಸ್‌ ಬಟನ್‌ ಒತ್ತಿದರೆ, ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಕೂಡಲೇ ಪೊಲೀಸ್‌ ಕಂಟ್ರೋಲ್‌ ರೂಂಗೆ ಮಾಹಿತಿ ಹೋಗುತ್ತದೆ.

Advertisement

ಈ ಸಂದರ್ಭದಲ್ಲಿ ಪೊಲೀಸರು ಜಿಪಿಎಸ್‌ ಮೂಲಕ ವಾಹನದ ಲೊಕೇಷನ್‌ ಪತ್ತೆ ಮಾಡಿ ಪೊಲೀಸ್‌ ಗಸ್ತು ವಾಹನಕ್ಕೆ ಮಾಹಿತಿ ರವಾನಿಸಲಾಗುವುದು. ಇದರಿಂದ ಪೊಲೀಸರು ಕೂಡಲೇ ಪ್ರಯಾಣಿಕರು ಇರುವ ಸ್ಥಳಕ್ಕೆ ತೆರಳಿ ಅವರಿಗೆ ರಕ್ಷಣೆ ನೀಡಲಿದ್ದಾರೆ.

ಸಾರ್ವಜನಿಕರು, ಪ್ರವಾಸಿಗರು ಹಾಗೂ ದಸರೆಗೆ ಆಗಮಿಸುವವರು ಮೈಸುರಕ್ಷಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಇದರ ಉಪಯೋಗ ಪಡೆದುಕೊಳ್ಳಬಹುದು ಶೀಘ್ರದಲ್ಲೇ ಆ್ಯಪ್‌ ಬಿಡುಗಡೆ ಮಾಡಲಿದ್ದೇವೆ ಎಂದು ನಗರ ಪೊಲೀಸ್‌ ಆಯುಕ್ತ ಡಾ. ಎ. ಸುಬ್ರಮಣ್ಯೇಶ್ವರ ರಾವ್‌ ತಿಳಿಸಿದ್ದಾರೆ. 

ಪ್ರೀಪೇಯ್ಡ ನಿಲ್ದಾಣಗಳ ಉನ್ನತೀಕರಣ: ಮೈಸೂರು ನಗರ ವ್ಯಾಪ್ತಿಯಲ್ಲಿ ಆಟೋದಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ನಗರದ ಪ್ರಮುಖ 10 ಪ್ರೀ-ಪೇಯ್ಡ ಆಟೋ ನಿಲ್ದಾಣಗಳನ್ನು ಪ್ರಾರಂಭಿಸಲಾಗಿದೆ. ಆದರೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಉದ್ದೇಶದಿಂದ ಸದರಿ ಪ್ರೀ-ಪೇಯ್ಡ ಆಟೋ ನಿಲ್ದಾಣಗಳಿಗೆ ಹೊಸದಾಗಿ ಯೂಸರ್‌ ಫ್ರೆಂಡ್ಲಿ ತಂತ್ರಾಂಶವಿರುವ ಕಂಪ್ಯೂಟರ್‌ಗಳು,

ಪ್ರಿಂಟರ್‌ ಮತ್ತು ಇತರೇ ಪರಿಕರಗಳನ್ನು ಒದಗಿಸುವ ಮೂಲಕ ಉನ್ನತೀಕರಿಸಲು ನಗರ ಪೊಲೀಸರು ಕ್ರಮವಹಿಸಿದ್ದಾರೆ. ಇದರಿಂದ ಪ್ರಯಾಣಿಕರು ಹೋಗಬೇಕಾದ ಸ್ಥಳಕ್ಕೆ ಇಂತಿಷ್ಟು ದರ ನಿಗದಿಪಡಿಸಲಾಗುವುದು. ಅಲ್ಲದೆ ಪ್ರಯಾಣಿಕರು ಹೋಗುವ ಸ್ಥಳದ ಬಗ್ಗೆ ಆಟೋ ಸ್ಟಾಂಡ್‌ನ‌ಲ್ಲಿರುವ  ತಂತ್ರಾಂಶದಲ್ಲಿ ನಮೂದಾಗುವುದರಿಂದ ಪ್ರಯಾಣಿಕರ ಸುರಕ್ಷತೆಗೂ ಇದು ನೆರವಾಗಲಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ. ಎ. ಸುಬ್ರಮಣ್ಯೇಶ್ವರ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next