ಮಂಡ್ಯ: ರೈತರ ಹಿತದೃಷ್ಟಿಯಿಂದ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಒ ಅಂಡ್ ಎಂ (ನಿರ್ವಹಣೆ ಮತ್ತು ಕಾರ್ಯಾಚರಣೆ)ಗೆ ನೀಡಲು ಸರ್ಕಾರ ಒಲವು ತೋರಿದೆ ಎಂದು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೈಷುಗರ್ ಕಾರ್ಖಾನೆಯನ್ನು “ಒ ಅಂಡ್ ಎಂ’ಗೆ ಕೊಡಲು ಟೆಂಡರ್ ಕರೆಯಲಾಗಿತ್ತು. ಆದರೆ, ನಂತರದಲ್ಲಿ ಟೆಂಡರ್ ರದ್ದುಪಡಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಮೈಷುಗರ್ ನಡೆಸಲು ಸಾಧ್ಯವಿಲ್ಲವೆಂದರು.
ಸರ್ಕಾರಿ ಸ್ವಾಮ್ಯದಲ್ಲೇ: “ಒ ಅಂಡ್ ಎಂ’ ಮಾದರಿಯಲ್ಲಿ ಕಾರ್ಖಾನೆ ಆರಂಭಿಸಲು ತೀರ್ಮಾನಿಸಲಾಗಿದ್ದು, ಮತ್ತೂಮ್ಮೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಮುಖ್ಯಮಂತ್ರಿ ಯಡಿ ಯೂರಪ್ಪ ಹಾಗೂ ರೈತರ ಆಸೆಯಂತೆ ಮೈಷುಗರ್ ಆಸ್ತಿ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮೈಷುಗರ್ ಉಳಿಸಲು ಸ್ಥಳೀಯ ಜನಪ್ರತಿನಿಧಿಗಳು ರಾಜ ಕೀಯ ಬದಿಗಿಟ್ಟು ಸರ್ಕಾರದೊಂದಿಗೆ ಸಹಕರಿಸಬೇಕು. ನಮಗೆ ರಾಜಕೀಯಕ್ಕಿಂತ ಜಿಲ್ಲಾ ರೈತರ ಹಿತದೃಷ್ಟಿ ಮುಖ್ಯ ವಾಗಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರೂ ಮೈಷುಗರ್ ಉಳಿಸುವಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕೆಂದರು. ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಕೋಟಿಗಟ್ಟಲೆ ಹಣ ನೀಡಲಾಗಿದೆ.
ಆದರೂ ರಾಜಕೀಯ ಹಾಗೂ ಬಣಗಳ ಒಳ ಜಗಳಗಳಿಂದ ಕಾರ್ಖಾನೆ ಸ್ಥಗಿತಗೊಂಡಿದೆ. ಇಲ್ಲಿಯವರೆಗೆ ಒಟ್ಟು 430 ಕೋಟಿ ರೂ. ಕಂಪನಿಗೆ ಕೊಟ್ಟಿದ್ದು, ಆ ಹಣ ಎಲ್ಲಿಗೆ ಹೋಯಿತು, ಏನಾಯ್ತು ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ. ಪ್ರಸ್ತುತ ಅದರ ಬಗ್ಗೆ ಚರ್ಚೆ ಮಾಡದೆ ಮೈಷುಗರ್ ಆರಂಭಿಸುವುದೇ ಸರ್ಕಾರದ ಗುರಿ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ತನ್ನ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಜನಪ್ರತಿ ನಿಧಿಗಳು, ರೈತ ಸಂಘಟನೆಗಳ ಮುಖಂಡರು ಖಾಸಗಿಯವರಿಗೆ ಮೈಷುಗರನ್ನು ವಹಿಸುವುದು ಬೇಡ ಎಂದು ಹೇಳಿದ್ದಾರೆ.
ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರವೇ ಕಾರ್ಖಾನೆ ನಡೆಸಲು ಸಾಧ್ಯವಿಲ್ಲವಾದ್ದರಿಂದ “ಒ ಅಂಡ್ ಎಂ’ಗೆ ವಹಿಸಲು ಒಲವು ತೋರಿದೆ. ಇದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸಿ ರುವ ಕಾರಣ ಇದುವರೆಗೆ ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ವಿಜಯ ಕುಮಾರ್, ಮುಖಂಡರಾದ ಸಿದ್ದ ರಾಮಯ್ಯ, ಬಿ.ಸೋಮ ಶೇಖರ್, ಕೆ.ಎಸ್.ನಂಜುಂಡೇ ಗೌಡ, ಮುಡಾ ಅಧ್ಯಕ್ಷ ಶ್ರೀನಿ ವಾಸ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ.ನಾ.ಸುರೇಶ್ ಇದ್ದರು.