ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು 40 ವರ್ಷಗಳ ಕಾಲ ಖಾಸಗಿಯವರಿಗೆ ಹೊರ ಗುತ್ತಿಗೆ ನೀಡಲು ಸಚಿವ ಸಂಪುಟ ನಿರ್ಧಾರ ಮಾಡಿದೆ. ಆದರೆ, ಯಾವುದೇ ನಿಯಮ ಹಾಗೂ ಮಾರ್ಗಸೂಚಿಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಬಹುಮುಖ್ಯವಾಗಿ ಕಾರ್ಖಾನೆಯಆಸ್ತಿ ನಿರ್ವಹಣೆಗೆ ಹೇಗೆ? ಎಂಬ ಪ್ರಶ್ನೆಯೂ ಎದ್ದಿದೆ.
ಸರ್ಕಾರ ನಡೆಸಿದರೆ ಪ್ರತಿ ವರ್ಷ 70 ಕೋಟಿ ರೂ. ನಷ್ಟ ಉಂಟಾಗಲಿದೆ ಎಂಬ ಕಾರಣ ನೀಡಿದ್ದು, ಪಾಂಡವಪರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಮಾದರಿಯಲ್ಲಿ ಗುತ್ತಿಗೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿಯ ನಿರ್ವಹಣೆ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ.
ಆಸ್ತಿ ವಿವರ ಅಸ್ಪಷ್ಟ: ಕೃಷಿ ಭೂಮಿ 50 ಎಕರೆ, ಬೆಂಗಳೂರು ಕಚೇರಿ 1.10 ಎಕರೆ, ಮಂಡ್ಯ ನಗರದ ರಾಜ್‌ಕುಮಾರ್ ಬಡಾವಣೆಯಲ್ಲಿ 3 ಎಕರೆ, ಮೈಷುಗರ್‌ಕಾರ್ಖಾನೆ ಪ್ರದೇಶ106 ಎಕರೆ, ಮಂಡ್ಯ ಹೊರವಲಯದ ಶ್ರೀನಿವಾಸಪುರ ಗೇಟ್ ಬಳಿ 41.06 ಎಕರೆ, ಮಂಡ್ಯ ಗುತ್ತಲು ರಸ್ತೆಯಲ್ಲಿ 0.17 ಎಕರೆ, ನಗರದಕಾಳಿಕಾಂಬ ದೇವಾಲಯ ಮುಂಭಾಗ1.20 ಎಕರೆ ಸೇರಿದಂತೆ ಒಟ್ಟು202.53 ಎಕರೆ ಇದ್ದು, ಇದರ ಅಂದಾಜು ಮೌಲ್ಯ 280 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾವಿರಾರು ಕೋಟಿ ಮೌಲ್ಯದ ಆಸ್ತಿ: ರೈತ ಮುಖಂಡರು ಹೊರ ತಂದಿರುವ ಮೈಷುಗರ್ ಕಾರ್ಖಾನೆಯ ಅಧ್ಯಯನ ವರದಿಯಲ್ಲಿ 235 ಎಕರೆ ಎಂದು ನಮೂದಿಸಿದ್ದಾರೆ. ಕಂಪನಿಯ ಕಲ್ಯಾಣಮಂಟಪ 3 ಎಕರೆ, ಶ್ರೀರಂಗಪಟ್ಟಣದ ಬಳಿ 2.4 ಎಕರೆ, ಮೈಷುಗರ್ ಪ್ರೌಢಶಾಲೆ ಹಾಗೂ ಐಟಿಐ ಕಾಲೇಜು 14.18 ಎಕರೆ, ಜೈಭಾರತ ಶಾಲೆಗೆ 7.10 ಎಕರೆ, ಕಬ್ಬಿನ ತಳಿ ವ್ಯವಸಾಯಕ್ಕಾಗಿ ಸಾತನೂರು ಬಳಿ 50 ಎಕರೆ, ಪಕ್ಕದಲ್ಲಿಯೇ ಫಾರಂ, ವಸತಿ ಗೃಹಗಳು, ಕಚೇರಿಯ 6.18 ಎಕರೆ, ಎಚ್.ಕೋಡಿಹಳ್ಳಿ ಬಳಿ 0.24 ಗುಂಟೆ, ಹನಕೆರೆ ಬಳಿ ಕಬ್ಬುವಿಭಾಗದ ಸೂಪರ್‌ವೈಸರ್‌ಕಚೇರಿ 15 ಗುಂಟೆ, ಕೆರಗೋಡು ಗ್ರಾಮದ ಬಳಿ ಕಲ್ಯಾಣ ಮಂಟಪ 1.15 ಎಕರೆ, ಕಬ್ಬಿನ ಗಾಡಿಗಳ ಸಂಚಾರಕ್ಕೆ ರಸ್ತೆ 23 ಗುಂಟೆ ಜಮೀನುಗಳನ್ನು ಅಧಿಕಾರಿಗಳು ವರದಿಯಲ್ಲಿ ನಮೂದಿಸಿಲ್ಲ. ಆದರೆ, ಇನ್ನೂ ಹೆಚ್ಚಿನ ಆಸ್ತಿ ಇದ್ದು, ಸಾವಿರಾರು ಕೋಟಿ ರೂ. ಮೌಲ್ಯವಿದೆ ಎನ್ನಲಾಗುತ್ತಿದೆ.
ಕೋಟ್ಯಂತರ ರೂ. ಮೌಲ್ಯದ ಯಂತ್ರಗಳು: ಕಾರ್ಖಾನೆಗೆ ಅಳವಡಿಸಿರುವ ಯಂತ್ರಗಳು ಕೋಟ್ಯಂತರ ರೂ. ಮೌಲ್ಯ ಹೊಂದಿವೆ. ಎಲ್ಲ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಜೊತೆಗೆ 30 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು 30 ಲಕ್ಷ ರೂ. ವೆಚ್ಚದಲ್ಲಿಸ್ಥಾಪಿಸಲಾಗಿದ್ದು, ಸ್ಥಗಿತಗೊಂಡಿದೆ.
ಅನುಪಯುಕ್ತ ವಸ್ತುಗಳ ಮೌಲ್ಯವೇ 23 ಕೋಟಿ ರೂ.: ಕಾರ್ಖಾನೆಯಲ್ಲಿ ಅನುಪಯುಕ್ತ ವಸ್ತುಗಳ ಮೌಲ್ಯವೇ 23ಕೋಟಿ ರೂ. ಇದೆ. ಎಂ.ಎಸ್.ಸ್ಕ್ರಾಪ್ ಗಳು, ಅಲ್ಯೂಮಿನಿಯಮ್, ಹಳೇ ಮಿಲ್, ಬಾಯ್ಲಿಂಗ್‌ಹೌಸ್ ಸ್ಕ್ರಾಪ್ ಗಳು ಸೇರಿವೆ. ಇವುಗಳ ಮಾರಾಟಕ್ಕೆ 2019ರಲ್ಲಿಯೇ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ.
ನಾವು ಎಲ್ಲ ರೀತಿಯಿಂದಲೂ ಕಾರ್ಖಾನೆ ಆಸ್ತಿಯ ಬಗ್ಗೆ ಶೋಧಿಸಿ, ಹಿಂದೆ ಇದ್ದ ಅಧಿಕಾರಿಗಳ ಬಳಿ ಮಾಹಿತಿ ತೆಗೆದುಕೊಂಡು ಅಧ್ಯಯನ ವರದಿಯ ಪುಸ್ತಕ ಪ್ರಕಟಿಸಿದ್ದೇವೆ. ಅಧಿಕಾರಿಗಳು ನೀಡಿರುವ ವರದಿಯಲ್ಲಿ ಸಾಕಷ್ಟು ಆಸ್ತಿಗಳನ್ನು ಸೇರಿಸದೆಕೈಬಿಟ್ಟಿದ್ದಾರೆ.ಯಾಕೆ ಕೈಬಿಟ್ಟಿದ್ದಾರೆ ಎಂಬುದನ್ನು ಅಧಿಕಾರಿಗಳೇ ಉತ್ತರಕೊಡಬೇಕು.
–ಸುನಂದ ಜಯರಾಂ, ರೈತ ನಾಯಕಿ