Advertisement

ಟರ್ಬೈನ್‌ ಬಂದ ನಂತರ ಸಮಸ್ಯೆ ನಿವಾರಣೆ

04:07 PM Jul 25, 2023 | Team Udayavani |

ಮಂಡ್ಯ: ಮೈಷುಗರ್‌ ಕಾರ್ಖಾನೆಗೆ ಸೆಸ್ಕಾಂನಿಂದ ವಿದ್ಯುತ್‌ ಸರಬರಾಜು ಮಾಡಿಕೊಳ್ಳುತ್ತಿರುವುದರಿಂದ ಎಲ್ಲಾದರೂ ಲೈನ್‌ನಲ್ಲಿ ಸುಟ್ಟು ಹೋದಾಗ ಸಮಸ್ಯೆ ಯಾಗಿ ಕಬ್ಬು ಅರೆಯುವಿಕೆ ಸ್ಥಗಿತಗೊಳ್ಳುತ್ತಿದೆ. ಮಂಗಳ ವಾರ ಟರ್ಬೈನ್‌ ಬರಲಿದ್ದು, ಸಹ ವಿದ್ಯುತ್‌ ಘಟಕಕ್ಕೆ ಚಾಲನೆ ನೀಡಲಾಗುವುದು. ಇದರಿಂದ ವಿದ್ಯುತ್‌ ಸಮಸ್ಯೆ ಬಗೆಹರಿಯಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್‌ ಮಾಹಿತಿ ನೀಡಿದರು.

Advertisement

ಮೈಷುಗರ್‌ ಕಾರ್ಖಾನೆಯಲ್ಲಿ ಇದುವರೆಗೂ 35 ಸಾವಿರ ಟನ್‌ ಕಬ್ಬು ಅರೆಯಲಾಗಿದೆ. ಈಗಾಗಲೇ ಪ್ರತಿದಿನ 2500ರಿಂದ 3 ಸಾವಿರದವರೆಗೆ ಕಬ್ಬು ಅರೆಯಲಾಗುತ್ತಿದೆ. ನಮ್ಮಲ್ಲೇ ಕೋ-ಜನ್‌ ಆರಂಭಿಸುವುದರಿಂದ ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯುತ್‌ ಸಿಗಲಿದೆ. ಆಗ ಎಲ್ಲ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದು ಮೈಷುಗರ್‌ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಉದಯವಾಣಿಗೆ ತಿಳಿಸಿದರು.

ವಿದ್ಯುತ್‌ ಸಮಸ್ಯೆಯಾದಾಗ ಯಂತ್ರಗಳು ಜಾಮ್‌: ಕೋ-ಜನ್‌ ಘಟಕ ಆರಂಭಿಸದ ಹಿನ್ನೆಲೆಯಲ್ಲಿ ಸದ್ಯ ಸೆಸ್ಕಾಂನಿಂದ ವಿದ್ಯುತ್‌ ಸರಬರಾಜು ಮಾಡಿಕೊಳ್ಳಲಾಗುತ್ತಿದೆ. ವಿದ್ಯುತ್‌ ಲೈನ್‌ ನಲ್ಲಿ ಸಮಸ್ಯೆ ಅಥವಾ ಸುಟ್ಟು ಹೋದಾಗ ಇಡೀ ಕಾರ್ಖಾನೆ ಸ್ತಬ್ಧಗೊಳ್ಳಲಿದೆ. ಕಬ್ಬು ಅರೆಯುವಿಕೆಯೂ ಸ್ಥಗಿತವಾಗಲಿದೆ. ಅಲ್ಲದೆ, ಕಾರ್ಖಾನೆಯ ಎಲ್ಲ ಯಂತ್ರಗಳು ಜಾಮ್‌ ಆಗುವುದರಿಂದ ತೊಂದರೆಯಾಗುತ್ತಿದೆ. ಮತ್ತೆ ಕಾರ್ಖಾನೆ ಆನ್‌ ಮಾಡಬೇಕಾದರೆ ಗಂಟೆ ಗಟ್ಟಲೇ ಹಿಡಿಯುತ್ತದೆ. ಆ ಸಮಯವು ನಮಗೆ ತುಂಬಾ ಕಷ್ಟಕರವಾಗಿರುತ್ತದೆ. ಆದರೂ, ಸಮಸ್ಯೆ ಬಗೆಹರಿಸಿ ಕೊಂಡು ಕಬ್ಬು ಅರೆಯಲಾಗುತ್ತಿದೆ ಎಂದು ವಿವರಿಸಿದರು.

ಸ್ವಚ್ಛತೆಗೆ ಹೆಚ್ಚು ಆದ್ಯತೆ: ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ, ಜ್ಯೂಸ್‌ ಪ್ರೊಸೆಸ್‌, ಕಬ್ಬು ಸಾಗಿಸುವ ಚೈನ್‌ಲಿಂಕ್‌, ಹೊರ ಹೋಗುವ ಬಗಾಸ್‌, ಸಕ್ಕರೆ ಉತ್ಪಾದನೆ ಸೇರಿದಂತೆ ಎಲ್ಲ ವಿಭಾಗದಲ್ಲೂ ಸಂಪೂರ್ಣವಾಗಿ ಸ್ವತ್ಛತೆ ಕಾಪಾಡುವಂತೆ ಅಧಿಕಾರಿ ಗಳಿಗೆ, ನೌಕರರಿಗೆ ಸೂಚಿಸಲಾಗಿದೆ. ಅಲ್ಲದೆ, ಪ್ರತಿನಿತ್ಯ ಕಬ್ಬು ಸರಬರಾಜು ಮಾಡುವ ರೈತರ ಯಾರ್ಡ್‌ ಗಳಲ್ಲೂ ರಸ್ತೆ ನಿರ್ಮಾಣ, ಸ್ವತ್ಛತೆ ಹಾಗೂ ಮೂಲಭೂತ ಸೌಲಭ್ಯ ಸೇರಿದಂತೆ ಊಟದ ವ್ಯವಸ್ಥೆ ಕ್ಯಾಂಟೀನ್‌ ತೆರೆದು ರೈತರು ತಂಗಲು ವ್ಯವಸ್ಥೆ ಕಲ್ಪಿಸಲಾಗು ವುದು ಎಂದು ತಿಳಿಸಿದರು.

ನೌಕರರಿಗೆ ಅಪ್‌ಡೇಟ್‌ ಅಗತ್ಯ: ಕಾರ್ಖಾನೆಯಲ್ಲಿ ಹಳೇ ನೌಕರರು ಇನ್ನೂ ಹಿಂದಿನ ಪದ್ಧತಿಯಲ್ಲಿಯೇ ಇದ್ದಾರೆ. ಇಂದಿನ ಆಧುನಿಕತೆ ತಕ್ಕಂತೆ ಹೊಂದಿಕೊಂಡಿಲ್ಲ. ಅವರನ್ನು ಅಪ್‌ಡೇಟ್‌ ಮಾಡುವ ಮೂಲಕ ಇನ್ನೂ ಸ್ಪೀಡ್‌ ಅಪ್‌ ಮಾಡಿ ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಮಾಡಲಾಗುವುದು ಎಂದರು.

Advertisement

ಯಂತ್ರಗಳ ಸಮರ್ಪಕವಾಗಿರುವಂತೆ ಕ್ರಮ: ಯಂತ್ರಗಳು ಹಳೆಯದಾಗಿರುವುದರಿಂದ ಆಗಾಗ್ಗೆ ಬೆಲ್ಟ್ ಕಟ್‌ ಆಗೋದು, ನಟ್‌ಬೋಲ್ಟ್ ಸಡಿಲವಾಗು ವುದು ಕಂಡು ಬರುತ್ತಿದೆ. ಇಂಥ ಸಂದರ್ಭದಲ್ಲಿ ಜ್ಯೂಸ್‌ ಸ್ಟೀಮ್‌, ಬಾಯ್ಲ ಆಗುತ್ತಿರಲಿಲ್ಲ. ಬಗಾಸ್‌ ಸರಿಯಾಗಿ ಹೋಗುತ್ತಿರಲಿಲ್ಲ. ಈಗ ಎಲ್ಲ ಸಮಸ್ಯೆ ಗಳನ್ನು ನಿವಾರಿಸಲಾಗಿದೆ. ಎಲ್ಲವೂ ಉತ್ತಮವಾಗಿದ್ದು, ಸಮರ್ಪಕವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮೋಸ ಮಾಡುವ ಉದ್ದೇಶವಿಲ್ಲ: ಪ್ರಸ್ತುತ ಕಾರ್ಖಾನೆ ಸಮರ್ಪಕವಾಗಿ ಕಬ್ಬು ಅರೆಯುತ್ತಿದೆ. ರೈತರಿಗೆ ಮೋಸ ಮಾಡುವ ಉದ್ದೇಶ ನಮಗಿಲ್ಲ. ಕೆಲವು ರೈತರು ತೊಂಡೆ ಮಿಶ್ರೀತ, ವಿದ್ಯುತ್‌ನಿಂದ ಸುಟ್ಟು ಹೋಗಿರುವ ಕಬ್ಬು, ಎಳೆ ಕಬ್ಬನ್ನು ಸರಬರಾಜು ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ರೀತಿಯ ಕಬ್ಬು ಬಂದಾಹ ನಾವು ಇಳುವರಿ ಕಡೆಗೆ ಗಮನ ಹರಿಸುವ ಹಿನ್ನೆಲೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ. ಅದಕ್ಕಾಗಿ ರೈತರು ಗುಣಮಟ್ಟದ ಕಬ್ಬು ಸರಬರಾಜು ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಖಾನೆ ಬಗ್ಗೆ ಬದ್ಧತೆ ಕಾಳಜಿ ಇದೆ: ಮೈಸೂರು ಮಹಾರಾಜರು ಸ್ಥಾಪಿಸಿದಂಥ ಕಾರ್ಖಾನೆಯಾಗಿದ್ದು, ಇದನ್ನು ಉಳಿಸಬೇಕಾಗಿದೆ. ನಾವು ಸರ್ಕಾರದ ಗುಮಾಸ್ತರಾಗಿ ಕೆಲಸ ಮಾಡುವಾಗ ನೌಕರರಿಗೂ ಸಮಯಪ್ರಜ್ಞೆ, ಬದ್ಧತೆ, ಕಾಳಜಿ ಇರಬೇಕಾಗಿದೆ. ಇಲ್ಲಿರುವ 37 ಖಾಯಂ, 32 ಹೊರಗುತ್ತಿಗೆ ನೌಕರರು ಇದ್ದಾರೆ. ಹಿಂದೆ ಅವರ ಹಿರಿಯರು ಇಲ್ಲಿ ಕೆಲಸ ಮಾಡಿದ್ದು, ಲಕ್ಷಾಂತರ ಕುಟುಂಬಗಳು ಇದರಿಂದ ಜೀವನ ಕಂಡುಕೊಂಡಿವೆ. ಅದನ್ನು ಕಾಪಾಡುವ ದೃಷ್ಟಿಯಿಂದ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಖಾನೆ ಸಮಸ್ಯೆ ಬಗೆಹರಿಸಲು ಕ್ರಮ: ಯಾವುದೇ ಕಾರಣಕ್ಕೂ ಕಾರ್ಖಾನೆ ಸ್ಥಗಿತಗೊಳಿಸಲು ಬಿಡುವುದಿಲ್ಲ. ಎಲ್ಲ ರೈತರು ಸಹಕರಿಸಬೇಕು. ವದಂತಿಗಳಿಗೆ ಕಿವಿಗೊಡಬೇಡಿ. ಕಾರ್ಖಾನೆಯ ನ್ಯೂನತೆಗಳನ್ನು ಬಗೆಹರಿಸಲು ಕ್ರಮ ವಹಿಸಲಾಗಿದೆ. ದುಡಿಯುವ ಬಂಡವಾಳ 35 ಕೋಟಿ ರೂ., ಉಳಿದ 15 ಕೋಟಿ ರೂ. ಕಾರ್ಖಾನೆಯ ಖರ್ಚು ವೆಚ್ಚಗಳಿಗೆ ಬಳಸಿಕೊಳ್ಳಲಾಗಿದೆ. ಕಾರ್ಖಾನೆಯು ಸುಲಲಿತವಾಗಿ ನಡೆಯಲು ಕ್ರಮ ವಹಿಸಲಾಗಿದೆ. ಕೆಲವು ಸಿಬ್ಬಂದಿಗಳು ಕಾರ್ಖಾನೆಗೆ ತೊಂದರೆ ಕೊಡುತ್ತಿದ್ದಾರೆ. ಹೊರಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ವಹಿಸಲು ನನ್ನದೇ ಒಂದು ಬೇಹುಗಾರಿಕೆ ತಂಡ ಸಿದ್ಧಪಡಿಸಿ, ಮುಂದೆ ಈ ರೀತಿಯ ಸಮಸ್ಯೆಗಳು ಆಗದಂತೆ ನೋಡಿಕೊಳ್ಳ ಲಾಗುವುದು. ಬೆಂಗಳೂರಿನ ಕಚೇರಿ ಹಾಗೂ ವಾಣಿಜ್ಯ ಕಟ್ಟಡವನ್ನು ಆಧುನೀಕರಣಗೊಳಿಸಿ, ಕಾರ್ಖಾನೆಗೆ ಬಾಡಿಗೆ ಮೂಲಕ ಆದಾಯ ಬರುವಂತೆ ಮಾಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್‌ ಭರವಸೆ ವ್ಯಕ್ತಪಡಿಸಿದರು.

ಸರ್ಕಾರಿ ಕಾರ್ಯದರ್ಶಿಯಿಂದ ಕಾರ್ಖಾನೆ ಪರಿಶೀಲನೆ: ಮೈಷುಗರ್‌ ಕಾರ್ಖಾನೆಯಲ್ಲಿ ಪದೇ ಪದೆ ವಿದ್ಯುತ್‌, ತಾಂತ್ರಿಕ ದೋಷದಿಂದ ಕಬ್ಬು ಅರೆ ಯುವಿಕೆ ಸ್ಥಗಿತ ಹಾಗೂ ಕಬ್ಬಿನ ಹಾಲನ್ನು ಚರಂಡಿ ಮೂಲಕ ಹೆಬ್ಟಾಳ ನಾಲೆಗೆ ಹರಿಸಿದ ವಿಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಕಾರ್ಯ ದರ್ಶಿ ಸೋಮವಾರ ಬೆಳಗ್ಗೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಕಾರ್ಯ ದರ್ಶಿ ರಿಚರ್ಡ್ಸ್‌ ವಿನ್ಸೆಂಟ್‌ ಡಿಸೋಜಾ ಹಾಗೂ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್‌ ಕಾರ್ಖಾನೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಅಧಿಕಾರಿಗಳು ಹಾಗೂ ನೌಕರರಿಂದ ಮಾಹಿತಿ ಪಡೆದರು. ಬಳಿಕ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್‌ ಅವರ ಜೊತೆ ಗೌಪ್ಯ ಸಭೆ ನಡೆಸಿ, ಕಾರ್ಖಾನೆಗೆ ಅಗತ್ಯವಾಗಿರುವ ಅಭಿವೃದ್ಧಿ ಕುರಿತಂತೆ ಸಲಹೆ ನೀಡಿದ್ದಾರೆ ಎಂದು ಕಾರ್ಖಾನೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next