Advertisement

ಮೈಷುಗರ್‌ಗೆ 10 ಕೋಟಿ ಬಿಡುಗಡೆಗೆ ಆಗ್ರಹ

02:50 PM May 24, 2023 | Team Udayavani |

ಮಂಡ್ಯ: ಮೈಷುಗರ್‌ ಕಾರ್ಖಾನೆಗೆ 2023-24ನೇ ಸಾಲಿನಲ್ಲಿ ಕಬ್ಬು ನುರಿಸಲು ಸರ್ಕಾರದಿಂದ ತುರ್ತಾಗಿ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕರಾದ ರವಿಕುಮಾರ್‌ಗೌಡ ಹಾಗೂ ದಿನೇಶ್‌ಗೂಳಿಗೌಡ ಮನವಿ ಮಾಡಿದ್ದಾರೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮನವಿ ಮಾಡಿರುವ ಅವರು, ಕಬ್ಬು ಕಟಾವು ಪ್ರಾರಂಭವಾಗುವ ಮೊದಲು ಹಣದ ಅವಶ್ಯಕತೆ ಇದೆ. ಇದಕ್ಕಾಗಿ 18 ಕೋಟಿ ರೂಪಾಯಿಗಳ ಅವಶ್ಯಕತೆ ಇದ್ದರೂ ತುರ್ತಾಗಿ 10 ಕೋಟಿ ರೂ. ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಬಾಕಿ ಹಣ ಬಿಡುಗಡೆ ಮಾಡಿ: ಕಳೆದ ವರ್ಷ ಆಯವ್ಯಯದಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂ. ಘೋಷಣೆ ಮಾಡಿತ್ತು. ಆದರೆ, ಈವರೆಗೆ 32 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕಿದೆ. ಅದರಲ್ಲಿ ಈ ಬಾರಿ ತುರ್ತಾಗಿ 10 ಕೋಟಿ ರೂ. ಬಿಡುಗಡೆ ಮಾಡಿಸುವಂತೆ ಆರ್ಥಿಕ ಇಲಾಖೆಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರೈತರಿಗೆ ತೀವ್ರ ಅನಾನುಕೂಲ: ಜಿಲ್ಲೆಯ ಮೈಷುಗರ್‌ ಕಾರ್ಖಾನೆ ರೋಗಗ್ರಸ್ತವಾಗಿದ್ದು, ಕೆಲವು ವರ್ಷಗಳಿಂದ ಕಬ್ಬು ನುರಿಸುವಿಕೆಯನ್ನು ಸ್ಥಗಿತ ಮಾಡಿತ್ತು. ಕಳೆದ ವರ್ಷವಷ್ಟೇ ಕಬ್ಬು ನುರಿಸುವಿಕೆಯನ್ನು ಪುನಃ ಪ್ರಾರಂಭಿಸಿದೆ. ಅಲ್ಲದೆ, ಕಳೆದ ವರ್ಷ ಸರ್ಕಾರವು ಬಜೆಟ್‌ನಲ್ಲಿ ಕಾರ್ಖಾನೆಯ ಪುನಶ್ಚೇತನಕ್ಕೆ 50 ಕೋಟಿ ರೂ. ಹಣ ನೀಡುವುದಾಗಿ ಘೋಷಿಸಿತ್ತು. ಆದರೆ, ಇದುವರೆಗೆ 32 ಕೋಟಿ ರೂ. ಮಾತ್ರವೇ ಬಿಡುಗಡೆಯಾಗಿದೆ. ಇದರಿಂದ ರೈತರಿಗೆ ತೀವ್ರ ಅನಾನುಕೂಲವಾಗುತ್ತಿದೆ ಎಂದಿದ್ದಾರೆ.

ಸಕಾಲದಲ್ಲಿ ಕಬ್ಬು ನುರಿಸಲು ಪ್ರಾರಂಭಿಸಿ: ಕಾರ್ಖಾನೆಯ ವ್ಯಾಪ್ತಿಯಲ್ಲಿ ಈ ಹಂಗಾಮಿನಲ್ಲಿ 10,002 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಕಬ್ಬು ಬೆಳೆದಿದ್ದು, ಸುಮಾರು 5,00,100 ಮೆಟ್ರಿಕ್‌ ಟನ್‌ ಕಬ್ಬು ಪೂರೈಕೆ ಮಾಡುವ ಕುರಿತು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. 5745 ರೈತರು ಕಾರ್ಖಾನೆಗೆ ಕಬ್ಬು ನೀಡುವುದಾಗಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ರೈತರ ಹಿತ ದೃಷ್ಟಿಯಿಂದ ಹಾಗೂ ಕಾರ್ಖಾನೆಯ ಭವಿಷ್ಯದ ದೃಷ್ಟಿಯಿಂದ ಸಕಾಲದಲ್ಲಿ ಕಬ್ಬು ನುರಿಸಲು ಪ್ರಾರಂಭಿಸಬೇಕಿದೆ ಎಂದು ತಿಳಿಸಿದ್ದಾರೆ.

Advertisement

ಕಬ್ಬು ನುರಿಸುವಿಕೆಯ ಸಿದ್ಧತೆಯು ಜೂನ್‌ನಿಂದ ಆರಂಭವಾಗಬೇಕಿದೆ. ಆದರೆ, ಕಾರ್ಖಾನೆಯಲ್ಲಿ ತುರ್ತು ನಿರ್ವಹಣಾ ಕೆಲಸ, ಕಟಾವು ಗ್ಯಾಂಗ್‌ಗಳಿಗೆ ಹಣ ಪಾವತಿ, ಸಿಬ್ಬಂದಿ ವೇತನ ಎಲ್ಲ ಸೇರಿ 18.54 ಕೋಟಿ ರೂ. ಅಗತ್ಯವಿದೆ. ಹೀಗಾಗಿ, ತುರ್ತಾಗಿ 10 ಕೋಟಿ ರೂ. ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ರೈತರ ಹಿತಕ್ಕಾಗಿ ಕ್ರಮವಹಿಸಿ: ಹಂಗಾಮು ಪೂರ್ವ ನಿರ್ವಹಣೆ ಕೆಲಸ ಪೂರ್ಣ ಮಾಡಲು 5 ಕೋಟಿ ರೂ., ಫ್ಯಾಕ್ಟರಿ ಕಾರ್ಮಿಕರಿಗೆ ಏಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳ ವೇತನ ಪಾವತಿಗೆ 1.50 ಕೋಟಿ ರೂ., ಸ್ಥಳೀಯ ಹಾಗೂ ಹೊರಗಿನ ಕಬ್ಬು ಕಟಾವು ಗ್ಯಾಂಗ್‌ಗಳಿದ್ದು, ಮುಂಗಡ ಹಣ ಪಾವತಿಗೆ 5.80 ಕೋಟಿ ರೂ., ಕಾರ್ಖಾನೆಗೆ ಕೋಣನಹಳ್ಳಿ ನೀರಿನ ಲೈನ್‌ ನಿರ್ಮಾಣಕ್ಕೆ 98 ಲಕ್ಷ ರೂ., ಘಟಕದ ಒಳಗೆ ವಿವಿಧ ಸಿವಿಲ್‌ ಕಾಮಗಾರಿಗಳಿಗೆ 98 ಲಕ್ಷ ರೂ., ಇಆರ್‌ಪಿ ಪ್ರಾಜೆಕ್ಟ್ಗೆ 98 ಲಕ್ಷ ರೂ., ನೀರು ಮತ್ತು ಸ್ಟೇಕ್‌ ಆನ್‌ಲೈನ್‌ ಮಾನಿಟರಿಂಗ್‌ ವ್ಯವಸ್ಥೆ ಅಳವಡಿಕೆಗೆ 30 ಲಕ್ಷ ರೂ., ಜೂಸ್‌ ಸಪ್ಲೀಟರ್‌ ಮತ್ತು ಗೇರ್‌ ಬಾಕ್ಸ್‌ ಅಳವಡಿಕೆಗೆ 1 ಕೋಟಿ ರೂ., ಜಿಐ ಶೀಟ್‌ ಹಾಗೂ ಕಟಾವು ಕಾರ್ಮಿಕರ ಸಾಮಗ್ರಿಗೆ 2 ಕೋಟಿ ರೂ. ಅಗತ್ಯವಾಗಿದೆ. ಆದ್ದರಿಂದ ಕೂಡಲೇ ಅಗತ್ಯವಾಗಿ ಬೇಕಿರುವ ಹಣವನ್ನು ಬಿಡುಗಡೆ ಮಾಡಬೇಕಿದ್ದು, ರೈತರ ಹಿತದೃಷ್ಟಿಯಿಂದ ಕೂಡಲೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next