ಮುಂಬೈ:ಮಹಾರಾಷ್ಟ್ರದ ಪೂರ್ವ ಭಾಗದ ಲಾತೂರ್ ನಗರದಲ್ಲಿ ಭೂಮಿಯ ಒಳಗಿನಿಂದ ನಿಗೂಢ ಶಬ್ದ ಕೇಳಿಸುತ್ತಿದ್ದು, ಇದರಿಂದ ಜನರು ಭಯಭೀತಗೊಂಡಿರುವ ಬಗ್ಗೆ ವರದಿಯಾಗಿದೆ. ಆದರೆ ಯಾವುದೇ ಭೂಕಂಪನದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಗುರುವಾರ (ಫೆ.16) ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಆಳಂದ ವಿವಾದಿತ ಶಿವಲಿಂಗ ಪೂಜೆ ಕೋರ್ಟ್ ಅನುಮತಿ; ಎಡಿಜಿಪಿ ನೇತೃತ್ವದಲ್ಲಿ ರೂಟ್ ಮಾರ್ಚ್
ಈ ನಿಗೂಢ ಶಬ್ಧ ಬುಧವಾರ ರಾತ್ರಿ 10-30ರಿಂದ 10-45ರ ನಡುವೆ ವಿವೇಕಾನಂದ ಚೌಕ್ ಪ್ರದೇಶದಲ್ಲಿ ಕೇಳಿಸಿದ್ದು, ಇದು ಭೂಕಂಪದ ಮುನ್ಸೂಚನೆ ಎಂಬ ಊಹಾಪೋಹ ಹರಿದಾಡುವ ಮೂಲಕ ಜನರು ಗಾಬರಿಗೊಂಡಿದ್ದ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ನಿಗೂಢ ಶಬ್ದ ಕೇಳಿಸಿದ ನಂತರ ಕೆಲವು ಜನರು ಸ್ಥಳೀಯ ಆಡಳಿತಾಧಿಕಾರಿಗೆ ಮಾಹಿತಿ ನೀಡಿದ್ದರು. ನಂತರ ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆಯು ಲಾತೂರ್ ನಗರದ ಭೂಕಂಪನ ಮಾಪನ ಕೇಂದ್ರಕ್ಕೆ ತಿಳಿಸಲಾಗಿತ್ತು. ಅದರಂತೆ ಔರಾದ್ ಶಾಹಾಜ್ನಿ ಮತ್ತು ಅಶೀವ್ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಭೂಕಂಪನ ಸೂಚನೆ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದು ಕಿಲ್ಲಾರಿ ಗ್ರಾಮ ಭೂಕಂಪನಕ್ಕೆ ತತ್ತರಿಸಿಹೋಗಿತ್ತು:
1993ರಲ್ಲಿ ಕಿಲ್ಲಾರಿ ಗ್ರಾಮದಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪನದಲ್ಲಿ ಸುಮಾರು 10,000 ಮಂದಿ ಸಾವನ್ನಪ್ಪಿದ್ದರು. ಮರಾಠವಾಡ ಪ್ರದೇಶದಲ್ಲಿ ಆಗಾಗ ಕೆಲವು ನಿಗೂಢ ಶಬ್ದಗಳು ಕೇಳಿಸುತ್ತಿರುತ್ತದೆ ಎಂದು ವಿಪತ್ತು ನಿರ್ವಹಣಾಧಿಕಾರಿ ಸಾಕೇಬ್ ಉಸ್ಮಾನಿ ತಿಳಿಸಿರುವುದಾಗಿ ವರದಿಯಾಗಿದೆ.
2022ರ ಸೆಪ್ಟೆಂಬರ್ ನಲ್ಲಿ ಹಾಸೋರಿ, ಕಿಲ್ಲಾರಿ ಹಾಗೂ ಲಾತೂರ್ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮೂರು ಬಾರಿ ಇಂತಹ ನಿಗೂಢ ಶಬ್ದ ಕೇಳಿಸಿತ್ತು ಎಂದು ವರದಿ ಹೇಳಿದೆ.