ಹೈದರಾಬಾದ್: ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ಅಸಾನಿ ಚಂಡಮಾರುತ ಬಡಿದಪ್ಪಳಿಸಿದ್ದು, ಈ ಸಂದರ್ಭದಲ್ಲಿ ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರದ ಬಂದರು ಪ್ರದೇಶದ ಸಮೀಪ ಚಿನ್ನದ ಬಣ್ಣ ಲೇಪಿತ ನಿಗೂಢ ರಥವೊಂದು ತೇಲಿ ಬಂದು ದಡ ಸೇರಿರುವ ಘಟನೆ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಭುಗಿಲೆದ್ದ ಹಿಂಸಾಚಾರ – ಶ್ರೀಲಂಕಾಕ್ಕೆ ಸೇನೆ ರವಾನಿಸಲ್ಲ: ಊಹಾಪೋಹ ಎಂದ ಭಾರತ
ಸಮುದ್ರದ ಅಬ್ಬರದ ಅಲೆಯ ನಡುವೆ ತೇಲಿ ಬರುತ್ತಿದ್ದ ಚಿನ್ನದ ಬಣ್ಣದ ರಥವನ್ನು ಸ್ಥಳೀಯರು ಎಳೆದು ದಡಕ್ಕೆ ಸೇರಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ರಥ ಬೇರೆ ದೇಶದಿಂದ ತೇಲಿ ಬಂದಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಶ್ರೀಕಾಕುಳಂನ ಸಬ್ ಇನ್ಸ್ ಪೆಕ್ಟರ್ ನೌಪಾದ ತಿಳಿಸಿದ್ದಾರೆ. ಚಿನ್ನದ ಬಣ್ಣದ ರಥ ತೇಲಿ ಬಂದಿರುವ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮದ ಜನರು ಸುನ್ನಪಲ್ಲಿ ಬಂದರು ಪ್ರದೇಶದತ್ತ ಜನರು ದೌಡಾಯಿಸಿರುವುದಾಗಿ ವರದಿ ವಿವರಿಸಿದೆ.
ಗಂಟೆಗೆ 105 ಕಿಲೋ ಮೀಟರ್ ವೇಗದ ಗಾಳಿಯೊಂದಿಗೆ ಪೂರ್ವ ಕರಾವಳಿ ತಲುಪಲಿರುವ ಅಸಾನಿ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಮಂಗಳವಾರ ರಾತ್ರಿ ವೇಳೆಗೆ ಅಸಾನಿ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದರೂ ಕೂಡಾ ಪಶ್ಚಿಮಬಂಗಾಳ, ಆಂಧ್ರಪ್ರದೇಶ, ಒಡಿಶಾ, ತಮಿಳನಾಡು ಹಾಗೂ ಕೇರಳದ ಕರಾವಳಿ ಭಾಗದಲ್ಲಿ ಭಾರೀ ಗಾಳಿ, ಮಳೆಯಾಗಿದೆ.
Related Articles
ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಎಲ್ಲಾ ಇಂಡಿಗೋ ವಿಮಾನಗಳ ಹಾರಾಟವನ್ನು ಬುಧವಾರ ಬೆಳಗ್ಗೆವರೆಗೂ ರದ್ದುಪಡಿಸಲಾಗಿದೆ ಎಂದು ವರದಿ ತಿಳಿಸಿದೆ.