Advertisement

ಸ್ವಾದಿಷ್ಟ ಪೌಷ್ಟಿಕ ಗೆಣಸು ಬೇಕಾ, ಮೇಳಕ್ಕೆ ಬನ್ನಿ

02:01 PM Feb 06, 2021 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಗೆಡ್ಡೆ ಗೆಣಸು ಮೇಳ ಆಯೋಜಿಸಿದ್ದು, ಅಪರೂಪದ ಗೆಣಸುಗಳನ್ನು ಸವಿಯಬಹುದಾಗಿದೆ.

Advertisement

ಫೆ.6 ಮತ್ತು 7ರಂದು ಎರಡು  ದಿನಗಳ ಕಾಲ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಗೆಡ್ಡೆ ಗೆಣಸು ಮೇಳ ಆಯೋಜಿಸಲಾಗಿದೆ. ಬೆಳಗ್ಗೆ 10.30ರಿಂದ ಸಂಜೆ 8 ರವರೆಗೆ ಮೇಳ ನಡೆಯಲಿದೆ. ಮೇಳದಲ್ಲಿ ಪೌಷ್ಟಿಕಾಂಶಗಳಿಂದ ಸಮೃದ್ಧವಾದ, ಅಪರೂಪದ ಗೆಡ್ಡೆ ಗೆಣಸುಗಳು ಪ್ರದರ್ಶನ ಮತ್ತು ಮಾರಾಟ ಇರಲಿದೆ. ಪಿರಿಯಾಪಟ್ಟಣದ ಸುಪ್ರೀತ್‌ ತೋಟದಲ್ಲಿ 50ಕ್ಕೂ ಹೆಚ್ಚು ಬಗೆಯ ಗೆಡ್ಡೆ ಗೆಣಸಿನ ತಳಿಗಳಿವೆ. ಸುವರ್ಣ ಗೆಡ್ಡೆ ಮತ್ತು ಕೆಸುವಿನ ವೈವಿಧ್ಯಕ್ಕೆ ಇವರ ತೋಟ ಹೆಸರುವಾಸಿ. ಸುಪ್ರೀತ್‌ ಕೆಸು, ಸುವರ್ಣ ಗೆಡ್ಡೆ, ಶುಂಠಿ ಮತ್ತು ಅರಿಶಿನದ ತಳಿಗಳನ್ನು ಪ್ರದರ್ಶನಕ್ಕಿಡಲಿದ್ದಾರೆ.

80 ಕೆ.ಜಿ. ಉತ್ತರಿ ಗೆಣಸು ಬೆಳೆದು ದಾಖಲೆ ಮಾಡಿದ ಹುಣಸೂರಿನ ತಮ್ಮಯ್ಯ ಅವರು ಈ ಬಾರಿಯೂ ದೊಡ್ಡ ಗೆಣಸುಗಳನ್ನು ಪ್ರದರ್ಶನದಲ್ಲಿಡಲಿದ್ದಾರೆ. ಶಿರಸಿಯ ಮನೋರಮಾ ಗೆಡ್ಡೆ ಗೆಣಸಿನ ಮೌಲ್ಯವರ್ಧಿತ ಪದಾರ್ಥಗಳ ಜತೆಗೆ ಮೇಳದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ :ಸಿಂಗಾನಲ್ಲೂರು ರಸ್ತೆ ಅಭಿವೃದ್ಧಿಗೆ ಕ್ರಮ: ಸಚಿವ ಕೆ.ಎಸ್‌.ಈಶ್ವರಪ್ಪ ಭರವಸೆ

ಪುತ್ತೂರಿನ ಯುವಕರ ಗುಂಪು ಗೆಡ್ಡೆ ಗೆಣಸಿನ ಐಸ್‌ ಕ್ರೀಂ, ಬಗೆಬಗೆಯ ಅಡುಗೆ ರುಚಿ ಈ ಬಾರಿಯೂ ಇರಲಿದೆ. ಬಿಳಿಗಿರಿರಂಗನ ಬೆಟ್ಟದ ಜಡೇಗೌಡರ ತಂಡದ ಸುಟ್ಟ ಕಾಡು ಗೆಣಸು, ಕೃಷಿಕಲಾ ತಂಡದ ಕೂವೆ ಗೆಡ್ಡೆ ಹಾಲುಬಾಯಿ, ಟ್ಯಾನಿಯಾ ಗೆಡ್ಡೆಯ ಚಿಪ್ಸ್‌, ಪರ್ಪಲ್‌ ಯಾಮ್‌ ಪಲ್ಯ, ಜೊಯಿಡಾದ ಕುಣಬಿ ಸಮುದಾಯದ ಬಿಳಿ ಗೆಣಸು, ದೊಡ್ಡ ಕೆಸು, ಕೋನ್‌ ಗೆಡ್ಡೆ ಪ್ರದರ್ಶನದಲ್ಲಿರಲಿವೆ. ಜತೆಗೆ ಅಸ್ಸಾಂನ ಅಪರೂಪದ ಕಪ್ಪು ಅರಿಶಿನ, ಕೇರಳದ ರಾಷ್ಟ್ರೀಯ ಪುರಸ್ಕಾರ ಪುರಸ್ಕೃತ ವಯನಾಡಿನ ಶಾಜಿ 120 ಬಗೆಯ ಗೆಡ್ಡೆ ಗೆಣಸು, ಹುಣಸೂರು, ಪಿರಿಯಾಪಟ್ಟಣ ಮತ್ತು ಹೆಗ್ಗಡದೇವನ ಕೋಟೆಯ ಜೇನು ಕುರುಬ ಮತ್ತು ಬೆಟ್ಟ  ಕುರುಬ ಯುವಕರು ಇಟ್ಟಿರುವ ಬಗೆಬಗೆಯ ಕಾಡು ಗೆಡ್ಡೆ ಗೆಣಸುಗಳನ್ನು ಸವಿಯುವ ಅವಕಾಶ ಸಾರ್ವಜನಿಕರಿಗೆ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next