ಮೈಸೂರು: ಅರಮನೆಗಳ ನಗರಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅವಿಸ್ಮರಣೀಯ ಅನುಭವಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಸೇಫ್ವೀಲ್ಸ್ ಕಂಪನಿ ದೇಶದಲ್ಲೇ ಪ್ರಥಮ ಪ್ರಯತ್ನವಾಗಿ ತೆರೆದ ಜೀಪಿನಲ್ಲಿ ಪ್ರವಾಸ ( ಓಪನ್‌ಜೀಪ್ ಟೂರ್ )ಯೋಜನೆ ರೂಪಿಸಿದೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಪ್ರಶಾಂತ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯ ಮೈಸೂರಿಗೆ ಬರುವ ಪ್ರವಾಸಿಗರನ್ನು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕಾರಂಜಿ ಕೆರೆಗಳನ್ನಷ್ಟೇ ತೋರಿಸಿ ಹೊರಗೆ ಕಳುಹಿಸಲಾಗುತ್ತಿದೆ. ಆದರೆ, ನಗರದ ಒಳಗೇ 4ದಿನಗಳ ಕಾಲ ನೋಡಬಹುದಾದಷ್ಟು ಪ್ರವಾಸಿ ತಾಣಗಳಿವೆ ಎಂದು ಹೇಳಿದರು.
ಪ್ರವಾಸಿಗರಿಗೆ ಇವುಗಳನ್ನು ತೋರಿಸಲು ಲಂಡನ್‌ನ ಮೈ ಬಸ್ ಮಾದರಿಯಲ್ಲಿ ಡಬಲ್‌ಡೆಕ್ಕರ್ ಬಸ್‌ನಲ್ಲಿ ಪ್ರವಾಸ ಯೋಜನೆ ರೂಪಿಸಲು ಕಳೆದ 2 ವರ್ಷಗಳಿಂದ ಪರಿಶ್ರಮ ಪಟ್ಟೆವು. ಆದರೆ, ಸರ್ಕಾರದಿಂದಲೂ ಪೂರಕ ಸ್ಪಂದನೆ ದೊರೆಯಲಿಲ್ಲ. ಜತೆಗೆ ಮೈಸೂರಿನ ರಸ್ತೆ ಬದಿಗಳಲ್ಲಿ ತೀರಾ ಕೆಳಮಟ್ಟದಲ್ಲಿ ಮರಗಳಿರುವುದರಿಂದ ಡಬಲ್ ಡೆಕ್ಕರ್ ಬಸ್ ಬದಲಿಗೆ ತೆರೆದ ಜೀಪ್ ಪ್ರವಾಸ ಸೂಕ್ತ ಎಂದು ಆಯ್ಕೆ ಮಾಡಿಕೊಳ್ಳಲಾಯಿತು ಎಂದರು.
ಓಪನ್ ಜೀಪ್ ಟೂರ್ ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 6 ರಿಂದ 8ಗಂಟೆವರೆಗೆ ನಿಯಮಿತವಾಗಿ ವರ್ಷಪೂರ್ತಿ ಇರಲಿದೆ. ವಿಶೇಷವಾಗಿ ಸಂಜೆ ಪ್ರವಾಸದಲ್ಲಿ ಸೂರ್ಯಾಸ್ತ, ಮೈಸೂರು ಅರಮನೆ ದೀಪಾಲಂಕಾರ ಸೇರಿದಂತೆ ಇನ್ನಿತರೆ ಸ್ಥಳಗಳನ್ನು ನೋಡಬಹುದು. ಲಲಿತಮಹಲ್ ಪ್ಯಾಲೇಸ್‌ನಿಂದ ಪ್ರಾರಂಭವಾಗುವ ಓಪನ್ ಜೀಪ್ ಟೂರ್ ಮೈಸೂರು ಅರಮನೆ ಜಯ ಮಾರ್ತಾಂಡ ದ್ವಾರದಲ್ಲಿ ಅಂತ್ಯಗೊಳ್ಳಲಿದೆ.
ಇದರಲ್ಲಿ ಲಲಿತಮಹಲ್ ಪ್ಯಾಲೇಸ್, ಆಡಳಿತ ತರಬೇತಿ ಸಂಸ್ಥೆ, ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್, ರೇಸ್‌ಕೋರ್ಸ್, ಸರ್ಕಾರಿ ಅತಿಥಿಗೃಹ, ವೆಲ್ಲಿಂಗ್‌ಟನ್ ಹೌಸ್, ಕ್ಲಾಕ್ ಟವರ್, ಫ್ರೀ ಮ್ಯಾಷನ್ ಕ್ಲಬ್, ಟೌನ್‌ಹಾಲ್, ಗಾಂಧಿಚೌಕ, ದೇವರಾಜ ಮಾರುಕಟ್ಟೆ, ಗುರು ಸ್ವೀಟ್ಸ್, ಡ್ನೂಫರಿನ್ ಕ್ಲಾಕ್ ಟವರ (ದೊಡ್ಡ ಗಡಿಯಾರ) ಲ್ಯಾನ್ಸ್‌ಡೌನ್ ಬಿಲ್ಡಿಂಗ್, ಮೈಸೂರು ಮಹಾ ನಗರಪಾಲಿಕೆ, ಗನ್ ಹೌಸ್, ಅರಮನೆ ಜಯಮಾರ್ತಾಂಡ ದ್ವಾರ.
ಪ್ರವಾಸಿಗರನ್ನು ಅವರು ತಂಗಿರುವ ಹೋಟೆಲ್‌ಗಳಿಂದ ಕರೆದೊಯ್ಯುವ ಮತ್ತು ವಾಪಸ್ ಕರೆತಂದು ಬಿಡುವ ವ್ಯವಸ್ಥೆ ಜತೆಗೆ ತೆರೆದ ವಾಹನದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಆಡಿಯೋ ಗೈಡ್ ಹಾಗೂ ಸೆಲ್ಫಿಸ್ಟಿಕ್ ಒದಗಿಸಲಾಗುವುದು. ಸೆ.18ರಂದು ಓಪನ್ ಜೀಪ್ ಟೂರ್ಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಲಿದ್ದಾರೆಂದರು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ್, ಸೇಫ್ವೀಲ್ ಸಂಸ್ಥೆಯ ಪ್ರವೀಣ್, ಶಿವಪ್ರಸಾದ್, ಕಿರಣ್ ಸುದ್ದಿಗೋಷ್ಠಿಯಲ್ಲಿದ್ದರು.