ಮೈಸೂರು: “ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಚಲುವರಾಯಸ್ವಾಮಿ ನಡುವಿನ ವಾಕ್ಸಮರ ಮುಂದುವರಿದಿದೆ. ಕುಮಾರಸ್ವಾಮಿ ಬಳಿ ನಾನು ವಿನಯದ ಬಗ್ಗೆ ಕೇಳಿಸಿಕೊಳ್ಳುವ ಅಗತ್ಯವಿಲ್ಲ. ಕುಮಾರಸ್ವಾಮಿ ಅವರಿಂದ ನಾನು ಲೀಡರ್ ಆಗಿಲ್ಲ. ದೇವೇಗೌಡರ ಮೇಲಿನ ಗೌರವಕ್ಕಾಗಿ ಮಾತ್ರ ಸುಮ್ಮನಿದ್ದೀನಿ. ದೇವೇಗೌಡರ ಹೆಸರು ಅವರ ಜೊತೆ ಇಲ್ಲದಿದ್ದರೆ ಅದರ ಅಪ್ಪನಂಗೆ ನಾನು ಕುಮಾರಸ್ವಾಮಿ ಗೆ ಉತ್ತರ ಕೊಡುತ್ತಿದ್ದೆ” ಎಂದು ಚಲುವರಾಯಸ್ವಾಮಿ ಅವರು ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ಕುಮಾರಸ್ವಾಮಿ ಅವರ ಮನೆ ಋಣದಲ್ಲಿ ಇದ್ದೇನಾ? ನಾನೇನೂ ಅವರ ಆಸ್ತಿ ತಿಂದಿದ್ದೇನಾ? ಗೌರವ ಬೇಡ ಎನ್ನಲಿ. ಅವರು ಮಾತಾಡಿದ್ದಕಿಂತ ಬೇರೆ ರೀತಿಯೇ ನಾನು ಅವರಿಗೆ ಮಾತನಾಡುತ್ತೇನೆ. ಕುಮಾರಸ್ವಾಮಿ ಕೈಯಲ್ಲಿ ನನ್ನ ಹಣೆಬರಹ ಬರೆಯಲಾಗುತ್ತಾ? ಕುಮಾರಸ್ವಾಮಿ ಅವರ ವಿಚಾರವೇ ಪ್ರಸ್ತುತ ಅಲ್ಲ ಎಂದು ಜರಿದರು.
ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಬೈರೇಗೌಡ ಇವರನ್ನು ಜೆಡಿಎಸ್ ನಿಂದ ಹೊರ ಕಳುಹಿಸಿದ್ದು ಯಾರೆಂದು ಕುಮಾರಸ್ವಾಮಿ ಹೇಳಲಿ. ಮಂಡ್ಯ ಇವರಿಗೆ ಕೊಟ್ಟ ಗೌರವಕ್ಕೆ ಈಗ ಅಶಾಂತಿ, ಗಲಭೆಯ ರಿಟರ್ನಸ್ ಕೊಡ್ತಿದ್ದಾರಾ ಎಂದರು.
ಮಂಡ್ಯದ ಅಭಿವೃದ್ಧಿ ಬಗ್ಗೆ ದಳಪತಿಗಳಿಂದ ಚರ್ಚೆ ಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರಿಗ ನಾಚಿಕೆ ಆಗಬೇಕು. ಒಂದು ಅಂಗನವಾಡಿ ಕಟ್ಟಡ ಕಟ್ಟಲು ಆಗಿಲ್ಲ. ಅವರೇನೂ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ? ಹಿಟ್ ಅಂಡ್ ರನ್ ಕೇಸ್ ಅವರದು. ಮಂಡ್ಯಗೆ ಬರಲು ಹೇಳಿ, ಇಲ್ಲದಿದ್ದರೆ ವಿಧಾನಸಭೆಯಲ್ಲೆ ಒಂದು ದಿನ ಮಂಡ್ಯ ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಮಾಡೋಣಾ. ನಾನು ಸ್ಪೀಕರ್ ಸಮಯ ಕೇಳುತ್ತೇನೆ. ಒಂದು ಇಡೀ ದಿನ ಕಲಾಪದಲ್ಲೇ ಚರ್ಚೆ ಮಾಡೋಣಾ. ಅವರ ಅಭಿವೃದ್ಧಿ ಶೂನ್ಯ. ಯಾರನ್ನೋ ಬೈಯ್ದು ಬಿಟ್ಟು ಹೋದರೆ ಇಡೀ ದಿನ ಪ್ರಚಾರದಲ್ಲಿ ಇರುತ್ತೇವೆಂದು ಹೀಗೆ ಮಾತನಾಡುತ್ತಾರೆ. ಮಂಡ್ಯ ಅಭಿವೃದ್ಧಿ ಮಾಡಿದ್ದರೆ ಎಂಟು ಜನ ಯಾಕೆ ಸೋತರು ಎಂದು ಪ್ರಶ್ನಿಸಿದರು.
ಮಂಡ್ಯ ಬಂದ್ ಗೆ ಕರೆ ವಿಚಾರಕ್ಕೆ ಮಾತನಾಡಿದ ಚಲುವರಾಯಸ್ವಾಮಿ, ರೈತರಿಗಾಗಿ, ಕಾವೇರಿ ನೀರಿಗಾಗಿ ಹೋರಾಟ ಮಾಡಿದರೆ ನಾವೇ ಅವರ ಜೊತೆ ನಿಂತುಕೊಳ್ಳುತ್ತೇವೆ. ಯಾವ ಪುರುಷಾರ್ಥಕ್ಕೆ ಹೋರಾಟ, ಬಂದ್ ಮಾಡುತ್ತಿದ್ದಾರೆ? ಬಿಜೆಪಿ – ಜೆಡಿಎಸ್ ಗೆ ನಾಚಿಕೆ ಆಗಬೇಕು. ಬಾಯಿಗೆ ಬಂದ ರೀತಿ ಮಾತಾಡುತ್ತಾರೆ. ನಮಗೆ ಮಾತಾಡುವುದಕ್ಕೆ ನಾಲಿಗೆ ಇಲ್ವಾ? ನಾವು ಮಂಡ್ಯದ ಮಣ್ಣಿನವರು. ನಮಗೂ ನಾಲಿಗೆ ಇದೆ. ಹಿಂದೂತ್ವ ಎಂಬುದು ಅವರಿಗಿಂತ ನಮಗೆ ಜಾಸ್ತಿಯಿದೆ. ಅವರಿಗಿಂತ ಜಾಸ್ತಿ ಭಕ್ತಿ ನಮಗೆ ಇದೆ ಎಂದರು.
ಅವನು ಯಾರೋ ಪುಟ್ಟರಾಜನೋ ಬೊಮ್ಮಪ್ಪನ ಹಿಡಿದುಕೊಂಡು ಪತ್ರಿಕಾಗೋಷ್ಠಿ ಮಾಡಿಸುತ್ತಾ ನಿಂತರೆ ನಿಮಗೆ ಜನ ಪಾಠ ಕಲಿಸ್ತಾರೆ ಎಚ್ಚರಿಕೆ ಇರಲಿ. ಮಂಡ್ಯವನ್ನು ಮಂಗಳೂರು ಮಾಡುವುದಕ್ಕೆ ಬಿಡಲ್ಲ. ಜನರೇ ಬಂದ್ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಗುಡುಗಿದರು.