Advertisement

ದಸರಾ ವೈಭವದಲ್ಲಿ ಮಿಂದೆದ್ದ ಮೈಸೂರು

11:44 AM Oct 20, 2018 | |

ಮೈಸೂರು: ಅರಮನೆ ಆವರಣದಿಂದ ಬನ್ನಿಮಂಟಪ ಮೈದಾನದವರೆಗೂ ಜಂಬೂಸವಾರಿ ಮೆರವಣಿಗೆ ಸಾಗಿದ ಮಾರ್ಗದ ಇಕ್ಕೆಲಗಳಲ್ಲಿ ದೇಶ-ವಿದೇಶಗಳಿಂದ ಬಂದಿದ್ದ ಪ್ರವಾಸಿಗರು, ಸ್ಥಳೀಯ ಸಾರ್ವಜನಿಕರು, ಅಕ್ಕಪಕ್ಕದ ಜಿಲ್ಲೆಗಳಿಂದ ಬಂದಿದ್ದ ಜನರು ಸೇರಿದಂತೆ ಲಕ್ಷಾಂತರ ಜನರು ಬೆಳಗ್ಗಿನಿಂದಲೇ ತಮ್ಮ ಕುಟುಂಬದೊಂದಿಗೆ ಇಕ್ಕೆಲಗಳಲ್ಲಿ ಬಂದು ನಿಂತು ದಸರಾ ವೈಭವವನ್ನು ಕಣ್ತುಂಬಿಕೊಂಡರು.

Advertisement

ಭಕ್ತಿ ಭಾವ ಮೆರೆದರು: ಅರ್ಜುನ ಹೊತ್ತು ತಂದ ಚಿನ್ನದ ಅಂಬಾರಿಯನ್ನು ಕಂಡು ಧನ್ಯತಾ ಭಾವದಿಂದ ಎದ್ದು ನಿಂತು ಕೈಮುಗಿದು, ಚಾಮುಂಡೇಶ್ವರಿ ದೇವಿ ಹಾಗೂ ಯದುವಂಶದ ಅರಸರಿಗೆ ಜೈಕಾರ ಕೂಗಿ ಭಕ್ತಿ ಭಾವ ಮೆರೆದರು. ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಲು ಜಾಗ ಸಿಗದ ಯುವಕರು ಅಲ್ಲಲ್ಲಿ ಮರ, ದೊಡ್ಡ ದೊಡ್ಡ ಕಟ್ಟಡಗಳು, ಮೊಬೈಲ್‌ ಟವರ್‌ಗಳನ್ನೇರಿ ಕುಳಿತು ಜಂಬೂಸವಾರಿಯನ್ನು ಕಣ್ತುಂಬಿಕೊಂಡರು.
 
ನಂದೀಧ್ವಜಕ್ಕೆ ಪೂಜೆ: ನಗರದ ಲಲಿತ್‌ ಮಹಲ್‌ ಹೋಟೆಲ್‌ನಿಂದ ಸಚಿವರು, ಶಾಸಕರು ಹಾಗೂ ತಮ್ಮ ಕುಟುಂಬದವರೊಂದಿಗೆ ಮಲ್ಟಿ ಆಕ್ಸಲ್‌ ವೋಲ್ವೋ ಬಸ್‌ನಲ್ಲಿ ಮಧ್ಯಾಹ್ನ 2.43ಕ್ಕೆ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಆವರಣಕ್ಕೆ ಬಂದಿಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನಂದೀಧ್ವಜಕ್ಕೆ ಪೂಜೆ ಸಲ್ಲಿಸಿ, ಅರಮನೆ ಆವರಣಕ್ಕೆ ಕಾಲ್ನಡಿಗೆಯಲ್ಲೇ ಬಂದು ಕುಳಿತು ಜಂಬೂಸವಾರಿ ಮೆರವಣಿಗೆ ವೀಕ್ಷಿಸಿದರು.

ಗೌಡರ ಕುಟುಂಬ ಭಾಗಿ: ಮಾಜಿ ಪ್ರಧಾನಿ ದೇವೇಗೌಡ, ಚೆನ್ನಮ್ಮ ದೇವೇಗೌಡ, ದೇವೇಗೌಡರ ಇಬ್ಬರು ಪುತ್ರಿಯರು, ಅನಿತಾ ಕುಮಾರಸ್ವಾಮಿ ಸೇರಿದಂತೆ ಗೌಡರ ಕುಟುಂಬದ 20ಕ್ಕೂ ಹೆಚ್ಚು ಮಂದಿ ಅರಮನೆ ಆವರಣದಲ್ಲಿ ಗಣ್ಯರಿಗಾಗಿ ಹಾಕಿದ್ದ ಆಸನಗಳಲ್ಲಿ ಕುಳಿತು ಜಂಬೂಸವಾರಿ ವೀಕ್ಷಿಸಿದರು.

ಕೇಂದ್ರ ಸಚಿವರು ಭಾಗಿ: ಕೇಂದ್ರ ಸಚಿವರಾದ ಸುರೇಶ್‌ ಪ್ರಭು, ಸತ್ಪಾಲ್‌ ಮಹಾರಾಜ್‌ ಅವರೂ ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಜಂಬೂಸವಾರಿ ವೀಕ್ಷಿಸಿದರು.

ಎದ್ದು ಹೊರಟ ಜನತೆ: ಮೈಸೂರು ದಸರಾ ಎಂದರೆ ಚಿನ್ನದ ಅಂಬಾರಿ, ತಾಯಿ ಚಾಮುಂಡೇಶ್ವರಿಯ ಬಗೆಗೆ ಈ ಭಾಗದ ಜನರಲ್ಲಿ  ಭಾವನಾತ್ಮಕತೆ ಇದೆ ಎಂಬುದನ್ನು ಜನ ಸಾಬೀತು ಮಾಡಿದರು. ಮೆರವಣಿಗೆಯ ಮಧ್ಯದಲ್ಲೇ ಅಂಬಾರಿ ಸಾಗಿದ್ದರಿಂದ ಚಿನ್ನದ ಅಂಬಾರಿಯನ್ನು ಕಣ್ತುಂಬಿಕೊಂಡು, ಚಾಮುಂಡೇಶ್ವರಿ ದೇವಿಗೆ ಕೈ ಮುಗಿದು, ಧನ್ಯತಾ ಭಾವದಿಂದ ತೆರಳಿದರು. ಹೀಗಾಗಿ ಅಂಬಾರಿಯ ಹಿಂದೆ ಸಾಗಿದ ಕಲಾ ತಂಡಗಳು, ಸ್ತಬ್ದಚಿತ್ರಗಳನ್ನು ನೋಡಲು ಜನರಲ್ಲಿ ಉತ್ಸಾಹ ಕಾಣಲಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next